ಕಲಬುರಗಿ: ರೈತರ ಟ್ರ್ಯಾಕ್ಟರ್‌ಗಳನ್ನು ಕದಿಯುತ್ತಿದ್ದ ಜಾಲ ಭೇದಿಸಿರುವ ಫರಹತಾಬಾದ್ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹11.50 ಲಕ್ಷ ಮೌಲ್ಯದ ಮೂರು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಫಜಲಪುರ ತಾಲ್ಲೂಕಿನ ಹಸರಗುಂಡಗಿ ಗ್ರಾಮದ ರಿಯಾಜ್‌ಪಟೇಲ್ ಗುಡನಾಳ, ಬಂದರವಾಡ ಗ್ರಾಮದ ನಾಗರಾಜ ಬಾಲಮಾರ ಹಾಗೂ ಫರಹತಾಬಾದ್ ನಿವಾಸಿ ರಾಜಶೇಖರ ಬಂಧಿತರು. ಈ ಆರೋಪಿಗಳನ್ನು ಸದ್ಯ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗರಗುಂಡಗಿ ಗ್ರಾಮದ ಗುಂಡಪ್ಪ ನಿಲೂರ ಅವರು ಮೇ 12ರಂದು ನೇಗಿಲು ಹೊಡೆಯಲು ಹೊಲಕ್ಕೆ ಹೋಗಿದ್ದರು. ಸಂಜೆ ಟ್ರ್ಯಾಕ್ಟರ್ ಅನ್ನು ಹೊಲದಲ್ಲೇ ನಿಲ್ಲಿಸಿ ಮರಳಿದ್ದರು. ಮರು ದಿನ ಹೊಲಕ್ಕೆ ಹೋದಾಗ ಟ್ರ್ಯಾಕ್ಟರ್ ಕಣ್ಮರೆಯಾಗಿತ್ತು. ಈ ಸಂಬಂಧ ಮೇ 13ರಂದು ಗುಂಡಪ್ಪ ನಿಲೂರ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
‘ಟ್ರ್ಯಾಕ್ಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿಂದಂತೆ ಆರಂಭದಲ್ಲಿ ರಿಯಾಜ್‌ಪಟೇಲ್ ಹಾಗೂ ರಾಜಶೇಖರನನ್ನು ವಶಕ್ಕೆ ಪಡೆದು ವಿಚಾರಿಸಲಾಗಿತ್ತು. ಕೂಲಂಕಷ ವಿಚಾರಣೆ ವೇಳೆ ಮತ್ತೊಬ್ಬ ಆರೋಪಿಯ ಸುಳಿವು ಸಿಕ್ಕಿತು. ನಂತರ ಮೂವರೂ ಆರೋಪಿಗಳನ್ನು ಬಂಧಿಸಿ, ಮೂರು ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಣಗಾಪುರ ಠಾಣೆಗೆ ಸಂಬಂಧಿಸಿದ ಎರಡು ಪ್ರಕರಣಗಳು ಇದರಲ್ಲಿ ಸೇರಿವೆ. ಇನ್ನೂ ಮೂವರು ಆರೋಪಿಗಳ ಕೈವಾಡ ಶಂಕೆಯಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುಂಡಪ್ಪ ಅವರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ಆರೋಪಿಯು ಗುಜರಿಗೆ ಮಾರಿದ್ದ. ಗುಜರಿಯವನು ಚಿತ್ತಾಪುರದವರಿಗೆ ಮಾರಾಟ ಮಾಡಿದ್ದ. ಇನ್ನೆರಡು ಟ್ರ್ಯಾಕ್ಟರ್‌ಗಳು ಕಳವು ಮಾಡಿ ತಂದು ಮಾರಾಟದ ಉದ್ದೇಶದಿಂದ ಕಲಬುರಗಿಯಲ್ಲಿ ನಿಲ್ಲಿಸಲಾಗಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫರಹತಾಬಾದ್ ಠಾಣೆ ಹಾಗೂ ಜಿಲ್ಲೆಯ ವಿವಿಧೆಡೆ ನಡೆದ ಟ್ರ್ಯಾಕ್ಟರ್ ಕಳವು ಪ್ರಕರಣ ಭೇದಿಸಲು ಕಲಬುರಗಿ ಸಬರ್ಬನ್ ಠಾಣೆ ಎಸಿಪಿ ಡಿ.ಜಿ.ರಾಜಣ್ಣ ನೇತೃತ್ವದಲ್ಲಿ ಫರಹತಾಬಾದ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಕಿ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಗಡ್ಡೆಪ್ಪ ಕೋರೆ ಹಾಗೂ ತುಕಾರಾಮ, ಕಾನ್‌ಸ್ಟೆಬಲ್‌ಗಳಾದ ಕಲ್ಯಾಣಕುಮಾರ, ಸಾಜೀದ್‌ಪಾಶಾ, ಆನಂದ, ಎಂ.ಆರ್.ಪಟೇಲ್, ಸಂಗೀತಾ ಅವರಿದ್ದ ತಂಡ ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.