ADVERTISEMENT

ಗುರಿ ಸಾಕಾರಕ್ಕೆ ದೃಢ ನಂಬಿಕೆ ಅಗತ್ಯ: ಅಂಜು ವಲ್ಲಭನೇನಿ

ವಿದ್ಯಾರ್ಥಿಗಳಿಗೆ ಯುನೈಟೆಡ್‌ ಸಾಫ್ಟ್‌ವೇರ್‌ ಗ್ರೂಪ್ ಕಂಪನಿಯ ಸಿಇಒ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:00 IST
Last Updated 16 ಮೇ 2025, 14:00 IST
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ಜಿ. ನಮೋಶಿ ಉದ್ಘಾಟಿಸಿದರು. ಅರುಣಕುಮಾರ ಪಾಟೀಲ, ಅಂಜು ವಲ್ಲಭನೇನಿ, ಪ್ರಶಾಂತ ಬಿಜಾಸ್ಪುರ, ದಿವ್ಯಾ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮವನ್ನು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ಜಿ. ನಮೋಶಿ ಉದ್ಘಾಟಿಸಿದರು. ಅರುಣಕುಮಾರ ಪಾಟೀಲ, ಅಂಜು ವಲ್ಲಭನೇನಿ, ಪ್ರಶಾಂತ ಬಿಜಾಸ್ಪುರ, ದಿವ್ಯಾ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಕಾಲೇಜಿನ ಕೊಠಡಿಯಲ್ಲಿ ಸಾವಿರಾರು ಕಲ್ಪನೆಗಳು (ಐಡಿಯಾ) ಇರಬಹುದು. ಅವೆಲ್ಲವೂ ಯಶಸ್ವಿ ಉದ್ಯಮಗಳಾಗಿ ಹೊರಹೊಮ್ಮುವುದು ಸುಲಭವಲ್ಲ. ಆದರೆ, ನೀವು ಗಟ್ಟಿಯಾಗಿ ನಂಬಿದರೆ, ಆ ಕಲ್ಪನೆಯನ್ನು ಕಂಪನಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯವಿದೆ’ ಎಂದು ಯುನೈಟೆಡ್‌ ಸಾಫ್ಟ್‌ವೇರ್‌ ಗ್ರೂಪ್ ಕಂಪನಿಯ ಸಿಇಒ ಅಂಜು ವಲ್ಲಭನೇನಿ ಹೇಳಿದರು.

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ನೈನ್‌ 2.0’ ತಂಡದಿಂದ ಗುರುವಾರ ಆಯೋಜಿಸಿದ್ದ ‘ತಾಂತ್ರಿಕ ನಾವೀನ್ಯತೆಯ ರೂಪಾಂತರ ಕಾರ್ಯಸಾಧ್ಯ ವ್ಯವಹಾರ’ ಕುರಿತ ಎರಡು ದಿನಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಾಲೇಜಿನ ಕಲಿಕೆಗೂ, ಕಲಿತಿದ್ದನ್ನು ಬದುಕಿನಲ್ಲಿ ಫಲಪ್ರದವಾಗಿಸಿಕೊಳ್ಳುವುದು ಎರಡೂ ಭಿನ್ನ ಪ್ರಕ್ರಿಯೆಗಳು. ಯಾವುದೇ ಒಂದು ಯೋಚನೆ, ಐಡಿಯಾ ಹೊಳೆದಾಗ ಅದನ್ನು ಸಾಕಾರಗೊಳಿಸಲು ಸದೃಢ ಇಚ್ಛಾಶಕ್ತಿ ಅಗತ್ಯ’ ಎಂದರು.

ADVERTISEMENT

‘ನಾನು 45 ವರ್ಷದವನಿದ್ದಾಗ ಮ್ಯಾರಾಥಾನ್‌ ಓಡಿದೆ. 25 ಹಾಫ್‌ ಮ್ಯಾರಾಥಾನ್‌, ನಾಲ್ಕೈದು ಮ್ಯಾರಾಥಾನ್‌ಗಳನ್ನು ಪೂರ್ಣಗೊಳಿಸಿದ್ದೇನೆ. ಆಗ ಯಾರಿಗೂ ನನ್ನ ಮೇಲೆ ನಂಬಿಕೆ ಇರಲಿಲ್ಲ. ಆದರೆ, ನನ್ನಲ್ಲಿ ನನಗೆ ನಂಬಿಕೆಯಿತ್ತು. ದೀರ್ಘ ಓಟದ ಹಿನ್ನೆಲೆಯೇ ಇಲ್ಲದೇ ನಾನು ಮ್ಯಾರಾಥಾನ್‌ ಪೂರ್ಣಗೊಳಿಸಿದೆ. ಯಾವುದೇ ಕ್ರೀಡೆಯಲ್ಲಿ ತೊಡಗಿಕೊಂಡರೆ, ಮನಸ್ಸಿನ ನಿಯಂತ್ರಣ ಸಾಧ್ಯವಾಗುತ್ತದೆ. ಯಾವುದನ್ನಾದರೂ ನೀವು ಅಂದುಕೊಂಡರೆ, ನೀವು ಮಾಡಬಹುದು. ಪ್ರಬಲ ಇಚ್ಛಾಶಕ್ತಿಯು ನಿಮ್ಮನ್ನು ಗುರಿಯತ್ತ ಮುನ್ನಡೆಸುತ್ತದೆ’ ಎಂದರು.

‘ಯಶಸ್ವಿ ಉದ್ಯಮಿಯಾಗಲು ನಿಮ್ಮಲ್ಲೊಂದು ಕಲ್ಪನೆ ಇರಬೇಕು. ಅದನ್ನು ಲಕ್ಷಾಂತರ ಜನರಿಗೆ ಅನ್ವಯಿಸುವಂತೆ ಅಭಿವೃದ್ಧಿಪಡಿಸಬೇಕು. ಬಳಿಕ ಆ ಕಲ್ಪನೆ ಹೇಗೆ ಸಮಾಜಕ್ಕೆ ಅನ್ವಯಿಸುವಂತೆ ಕಾರ್ಯಗತಗೊಳಿಸಬೇಕು. ಈ ಮೂರು ಅಂಶಗಳು ಬಹುಮುಖ್ಯ’ ಎಂದರು.

‘ಕೃತಕ ಬುದ್ಧಿಮತ್ತೆ ಜೀವನದ ಪ್ರತಿಯೊಂದು ಹಂತದಲ್ಲೂ ಪ್ರಮುಖ ಪಾತ್ರವಹಿಸಲಿದೆ ಎಂದು ದಿಗ್ಗಜ ತಾಂತ್ರಿಕ ತಜ್ಞರೆಲ್ಲ ಅಂದಾಜಿಸಿದ್ದಾರೆ. ಹೀಗಾಗಿ ನಿಮ್ಮ ಉದ್ಯಮದ ಯಶಸ್ವಿಗೆ ಉತ್ತಮ ತಂಡದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವು ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಮಾತನಾಡಿದರು. ಪಿಡಿಎ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಎಸ್.ಆರ್‌.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದ ಸಂಯೋಜಕ ಪ್ರೊ.ಸಿದ್ರಾಮ ಸಂಗೋಳಗಿ ಕಾರ್ಯಾಗಾರದ ಕುರಿತು ಬೆಳಕು ಚೆಲ್ಲಿದರು.

ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಹೆಚ್ಚುವರಿ ನಿರ್ದೇಶಕ ಪ್ರೊ.ವಿನಾಯಕ ಹೊಸಮನಿ,  ಹುಬ್ಬಳ್ಳಿ–ಧಾರವಾಡದ ಉದ್ಯಮಿ ರಾಮ ಸುಬ್ರಮಣಿಯನ್‌, ದಿವ್ಯಾಶ್ರಯ ಫೌಂಡೇಷನ್‌ ಸಂಸ್ಥಾಪಕಿ ದಿವ್ಯಾ ಕುಲಕರ್ಣಿ, ಬಿಜಾಸ್ಪುರ ಗ್ರೂಪ್ ಸಿಇಒ ಚಾರ್ಟರ್ಡ್‌ ಅಕೌಂಟಂಟ್‌ ಪ್ರಶಾಂತ್‌ ಆರ್‌.ಬಿಜಾಸ್ಪುರ, ಎಚ್‌ಕೆಇ ಆಡಳಿತ ಮಂಡಳಿಯ ಉದಯಕುಮಾರ ಚಿಂಚೋಳಿ, ಅರುಣಕುಮಾರ ಪಾಟೀಲ, ಅನೀಲಕುಮಾರ ಪಟ್ಟಣ, ಶರಣಬಸಪ್ಪ ಹರವಾಳ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.