ADVERTISEMENT

ಚಿಂಚೋಳಿ | ಪತಿ ಕೊಲೆ: ಪತ್ನಿ, ಪ್ರಿಯಕರನ ಬಂಧನ

ಅರಣ್ಯಕ್ಕೆ ಕರೆದೊಯ್ದು ಕೊಲೆ: ಎರಡು ವರ್ಷಗಳ ಬಳಿಕ ಪತ್ತೆಯಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 5:36 IST
Last Updated 23 ಏಪ್ರಿಲ್ 2022, 5:36 IST
ಮಲ್ಕಿಮೇನ ತಾಂಡಾದ ರವಿ ಅವರ ಕೊಲೆ ಆರೋಪಿಗಳನ್ನು ಚಿಂಚೋಳಿ ತಾಲ್ಲೂಕಿನ ಮೊಗದಂಪುರ ಕಾಡಿಗೆ ಕರೆತಂದ ಪೊಲೀಸರು, ಶುಕ್ರವಾರ ಸ್ಥಳದ ಪಂಚನಾಮೆ ನಡೆಸಿದರು
ಮಲ್ಕಿಮೇನ ತಾಂಡಾದ ರವಿ ಅವರ ಕೊಲೆ ಆರೋಪಿಗಳನ್ನು ಚಿಂಚೋಳಿ ತಾಲ್ಲೂಕಿನ ಮೊಗದಂಪುರ ಕಾಡಿಗೆ ಕರೆತಂದ ಪೊಲೀಸರು, ಶುಕ್ರವಾರ ಸ್ಥಳದ ಪಂಚನಾಮೆ ನಡೆಸಿದರು   

ಚಿಂಚೋಳಿ: ಪ್ರಿಯಕರನೊಂದಿಗೆ ಸೇರಿ ಪತ್ನಿ ತನ್ನ ಪತಿಯನ್ನು ಕೊಲೆ ಮಾಡಿದ ಘಟನೆ ತಾಲ್ಲೂಕಿನ ವನ್ಯಜೀವಿ ಧಾಮದ ಮೊಗದಂಪುರ ಕಾಡಿನಲ್ಲಿ ನಡೆದಿದ್ದು, ಎರಡು ವರ್ಷಗಳ ನಂತರ ಪತ್ತೆಯಾಗಿದೆ.

ತೆಲಂಗಾಣದ ಘನಪುರ ಬಳಿಯ ಮಲ್ಕಿಮೇನ ತಾಂಡಾದ ರವಿ ಪಿರ್ಯಾ ಪತ್ಲಾವತ್ (29) ಕೊಲೆಯಾದ ವ್ಯಕ್ತಿ. ಪತ್ನಿ ಲಕ್ಷ್ಮಿ ಮತ್ತು ಪ್ರಿಯಕರ ಸುಮನ್ ಮಾನಯ್ಯ ತಲ್ಹಾರಿ ಮೊಗದಂಪುರ ಸೇರಿಕೊಂಡು ರವಿಯನ್ನು ದ್ವಿಚಕ್ರ ವಾಹನದಲ್ಲಿ ಕಾಡಿಗೆ ಕರೆದುಕೊಂಡು ಬಂದು ಕೊಲೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2020ರ ಜನವರಿ 27ರಂದು ಮೊಗದಂಪುರ ಕಾಡಿನಲ್ಲಿ ಅ‍‍ರಿಚಿತ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಗದಂಪುರದ ವ್ಯಕ್ತಿಯೊಬ್ಬರ ದೂರಿನ ಮೇರೆಗೆ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಾಕಷ್ಟು ಶೋಧ ನಡೆಸಿದ ಬಳಿಕವೂ ಪೊಲೀಸರಿಗೆ ವ್ಯಕ್ತಿಯ ಮಾಹಿತಿ ಸಿಕ್ಕಿರಲಿಲ್ಲ.

ADVERTISEMENT

ಕೆಲ ತಿಂಗಳ ಬಳಿಕ ರವಿ ಅವರು ಕಾಣೆಯಾದ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಬೇಕು ಎಂದು ಅವರ ತಂದೆಯು, ಸೊಸೆ ಲಕ್ಷ್ಮಿ ಬಳಿ ಕೇಳುತ್ತಲೇ ಇದ್ದರು. ಪದೇಪದೇ ಒತ್ತಡ ಹೇರಿದಾಗ ‘ಪತಿ ರವಿಯನ್ನು ನಾನು ಮತ್ತು ಸುಮನ್ ಸೇರಿ ಮೊಗದಂಪುರ ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿದ್ದೇವೆ’ ಎಂದು ಲಕ್ಷ್ಮಿ ಬಾಯಿ ಬಿಟ್ಟಿದ್ದಾರೆ. ರವಿ ತಂದೆ ಪೀರ್ಯಾ ಬದ್ಯಾ ಪತ್ಲಾವತ್ (ರಾಠೋಡ) ಅವರು ಕುಂಚಾವರಂ ಠಾಣೆಲ್ಲಿ ಸೊಸೆ ಲಕ್ಷ್ಮಿ ಮತ್ತು ಪ್ರಿಯಕರ ಸುಮನ್‌ ವಿರುದ್ಧ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ ಅವರು ಗುರುವಾರ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.