ಕಲಬುರಗಿ: ‘ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳ ಕರಡು ಉನ್ನತ ಶಿಕ್ಷಣಕ್ಕೆ ಮಾರಕವಾಗಿದೆ. ಪ್ರಜಾಸತ್ತಾತ್ಮಕ ಶಿಕ್ಷಣದ ಮೂಲ ಅಡಿಪಾಯವನ್ನೇ ಅಲುಗಾಡಿಸುವಂತಿದೆ. ಶಿಕ್ಷಣವನ್ನು ಜಾಗತಿಕ ಸರಕಾಗಿ ರೂಪಿಸುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ(ಎಐಎಸ್‌ಇಸಿ) ರಾಜ್ಯ ಉಪಾಧ್ಯಕ್ಷ ವಿ.ಎನ್.ರಾಜಶೇಖರ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಗಳ ಕಲ್ಪನೆ ಹಾಗೂ ಉದ್ದೇಶಕ್ಕೆ ಕರಡು ವಿರುದ್ಧವಾಗಿದೆ. ಈ ನಿಬಂಧನೆಗಳು ಎನ್‌ಇಪಿ 2020ರ ಭಾಗವಾಗಿದ್ದು, ಇದನ್ನು ಅಂಗೀಕರಿಸಿದರೆ ವಿಶ್ವವಿದ್ಯಾಲಯಗಳ ಸ್ವಾಯತ್ತತೆ ಇನ್ನಷ್ಟು ಹದಗೆಡುತ್ತದೆ. ಆಡಳಿತಾತ್ಮಕ ಕೇಂದ್ರೀಕರಣವು ಸಂಶೋಧನೆ, ಶೈಕ್ಷಣಿಕ ಪ್ರಗತಿ, ಮುಕ್ತ ಚಿಂತನೆಗೆ ಅಡ್ಡಿಯುಂಟು ಮಾಡಲಿದೆ’ ಎಂದರು.
‘ಯುಜಿಸಿ ನಿಯಮಾವಳಿಗಳ ಬಗ್ಗೆ ಚರ್ಚಿಸಲು ಮತ್ತು ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಮರುಪಡೆಯಲು ಬೆಂಗಳೂರಿನಲ್ಲಿ ಎಐಎಸ್‌ಇಸಿ ನೇತೃತ್ವದಲ್ಲಿ ಶಿಕ್ಷಣ ತಜ್ಞರು, ವಿಶ್ರಾಂತ ಮತ್ತು ಹಾಲಿ ಕುಲಪತಿಗಳು, ಪ್ರಾಧ್ಯಾಪಕರ ದುಂಡು ಮೇಜಿನ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಗೊತ್ತುವಳಿಗಳನ್ನು ಮಂಡಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದರು.
‘ಕುಲಪತಿ ನೇಮಿಸುವ ಅಧಿಕಾರವನ್ನು ರಾಜ್ಯ ಸರ್ಕಾರದ ಬದಲಿಗೆ ರಾಜ್ಯಪಾಲರು ಮತ್ತು ನಾಮನಿರ್ದೇಶಿತರ ಕೈಯಲ್ಲಿ ಕೊಡಲಾಗುತ್ತಿದೆ. ಈ ಮೂಲಕ ಕುಲಪತಿ ನೇಮಕದ ಅಧಿಕಾರವನ್ನು ಕೇಂದ್ರ ಕಸಿದುಕೊಳ್ಳಲಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯಾವುದರ ಹಸ್ತಕ್ಷೇಪ ಇರಬಾರದು. ಶಿಕ್ಷಣ ತಜ್ಞರು ಶಿಫಾರಸು ಮಾಡಿದವರನ್ನು ಕುಲಪತಿಗಳಾಗಿ ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.
‘ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳ ಮೇಲೆ ಸ್ವಾಯತ್ತತೆಯನ್ನು ಹೊಂದಿರಬೇಕು. ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಯಾವುದೇ ರಾಜಕೀಯ ನೇಮಕಾತಿಗಳು ಅಥವಾ ಹಸ್ತಕ್ಷೇಪಗಳಿಂದ ಮುಕ್ತವಾಗಿರಬೇಕು. ವಿವಿ ಕಾರ್ಯನಿರ್ವಹಣೆಯು ಪಾರದರ್ಶಕ, ಜಾತ್ಯತೀತವಾಗಿದ್ದು, ಪಕ್ಷಪಾತ ಮತ್ತು ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು’ ಎಂದರು.
‘ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಮಾಡಿರುವ ಬದಲಾವಣೆಗಳೂ ಅಪಾಯಕಾರಿಯಾಗಿವೆ. ಪಿಎಚ್.ಡಿ ಅಥವಾ ನೆಟ್/ ಸೆಟ್‌ನಲ್ಲಿ ಅಧ್ಯಯನ ವಿಷಯಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ. ಯುಜಿ ಮತ್ತು ಪಿಜಿಯಲ್ಲಿ ಅನುಸರಿಸಿದ ಅಧ್ಯಯನ ವಿಷಯಗಳನ್ನು ನಿರ್ಲಕ್ಷಿಸುವುದರಿಂದ ಸಮಗ್ರ ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಗೆ ಪೆಟ್ಟು ಬೀಳುತ್ತದೆ’ ಎಂದರು. ‘ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನೂ ಯುಜಿಸಿ ಕಾಪಾಡಬೇಕು’ ಎಂದು ಒತ್ತಾಯಿಸಿದರು.
ಎಐಎಸ್‌ಇಸಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರ, ಸಲಹೆಗಾರ ಅಸದ ಅಲಿ ಅನ್ಸಾರಿ, ವಕೀಲೆ ವಿಜಯಾ ಪಾಟೀಲ, ಅಫ್ಜಲ್ ಐಮದ್, ಅರುಣ ಹಿರೇಬಾನರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.