ADVERTISEMENT

ಅರಳಿದ ಕಮಲ, ಮಂಡಿಯೂರಿದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 7:15 IST
Last Updated 6 ಜನವರಿ 2011, 7:15 IST

ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದರೊಂದಿಗೆ ಅತಂತ್ರ ಆಡಳಿತ ಅಂತ್ಯ ಕಂಡಿದೆ. ಹೀಗಾಗಿ, 20 ತಿಂಗಳಿಗೊಮ್ಮೆ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಬದಲಾದಾಗಲೆಲ್ಲಾ ಸದಸ್ಯರು ಅಧಿಕಾರಕ್ಕಾಗಿ ಪಕ್ಷಾಂತರ ರಾಜಕಾರಣ ಮಾಡುವುದಕ್ಕೂ ಕಡಿವಾಣ ಬಿದ್ದಂತಾಗಿದೆ. ಬಹುಮತ ಪಡೆದಿರುವ ಬಿಜೆಪಿ ಹಿಂದಿನ ಆಡಳಿತದ ಅವಧಿಯಲ್ಲಾದ ತಪ್ಪುಗಳನ್ನು ತಿದ್ದಿಕೊಂಡು ಸ್ವಪ್ರತಿಷ್ಠೆ ಅಥವಾ ಒಳ-ಜಗಳ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ ಅಭಿವೃದ್ಧಿ ಕಡೆ ಗಮನಹರಿಸಲು ಸಹಕಾರಿಯಾಗಲಿದೆ.

ಕಳೆದ ಬಾರಿ ಅತಂತ್ರ ಜಿ.ಪಂ. ರಚನೆಯಾದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯ ಬೆಂಬಲದಿಂದ ಒಮ್ಮೆ ಬಿಜೆಪಿ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದರೆ, ಕೊನೇ ಅವಧಿಯ 20 ತಿಂಗಳ ಆಡಳಿತದ ಅವಧಿಯಲ್ಲಂತೂ ಅಧಿಕಾರಕ್ಕಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲ ಸದಸ್ಯರೂ ಒಂದಾದರು. ಪರಿಣಾಮ, ಪ್ರತಿ ಸಾಮಾನ್ಯ ಸಭೆಗಳಲ್ಲಿ ಗದ್ದಲ. ಇದು ಮುಂದುವರಿದ ಪರಿಣಾಮ ನಾಲ್ಕೈದು ತಿಂಗಳು ಸಾಮಾನ್ಯ ಸಭೆಗಳು ನಡೆಯದೇ ಹೋದವು. ಅಂತಿಮ ಸಭೆಯಲ್ಲಿ ಮಾತ್ರ ಎಲ್ಲ ಸದಸ್ಯರು ಜ್ಞಾನೋದಯವಾದಂತೆ ಅಭಿವೃದ್ಧಿ ವಿಚಾರಗಳ ಬಗ್ಗೆ ಒಗ್ಗಟ್ಟಿನ ಮಂತ್ರ ಜಪಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರ ಜತೆಗೆ, ಜಿಲ್ಲೆಯ ಇಬ್ಬರು ಶಾಸಕರು ಕೂಡ ಅದೇ ಪಕ್ಷದವರಾಗಿರುವುದರಿಂದ ಜಿ.ಪಂ.ನ ಹೊಸ ಆಡಳಿತಕ್ಕೆ ಹೆಚ್ಚಿನ ಅನುದಾನ ತರಲು ಕಷ್ಟವಾಗದು. ಅಧ್ಯಕ್ಷರಾದವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅಂತಹ ಇಚ್ಛಾಶಕ್ತಿ ಪ್ರದರ್ಶಿಸಲು ಮುಂದಾಗಬೇಕಿದೆ.

ಜಿ.ಪಂ.ನಲ್ಲಿ ಪಕ್ಷದ ನಿರೀಕ್ಷೆ-ಲೆಕ್ಕಾಚಾರಗಳನ್ನೂ ಮೀರಿ ಫಲಿತಾಂಶ ಬಂದಿರುವುದು ಬಿಜೆಪಿ ಮುಖಂಡರನ್ನು ಹುಬ್ಬೇರಿಸುವಂತೆ ಮಾಡಿದೆ. ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮೊದಲಿನಿಂದಲೂ ನಾವು 23 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಬಹುಶಃ ಆ ಸಂಖ್ಯೆಗೆ ಎರಡು ಸ್ಥಾನಗಳು ಕಡಿಮೆಯಾದರೂ ಶಾಸಕರ ನಿರೀಕ್ಷೆ ಮಾತ್ರ ಹುಸಿಯಾಗಲಿಲ್ಲ. ಈ ಹಿಂದೆ ಎಸ್.ಜಿ. ಮೇದಪ್ಪ ಮೊದಲ ಬಾರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ರಂಜನ್ ಲೆಕ್ಕಾಚಾರ ಹಾಕಿದಂತೆ ಸುಮಾರು 275 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.

ಬಹುಶಃ ಜಿ.ಪಂ. ಚುನಾವಣೆಯಲ್ಲಿಯೂ ಅದೇ ಲೆಕ್ಕಾಚಾರದಲ್ಲಿ ಶಾಸಕರು ಫಲಿತಾಂಶ ನಿರೀಕ್ಷಿಸಿರಬಹುದು. ಆದರೆ, ಒಂದಂತೂ ಸತ್ಯ. ಮಡಿಕೇರಿ ಕ್ಷೇತ್ರದ ವ್ಯಾಪ್ತಿಗೊಳಪಡುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲದೆ ಮುಖಭಂಗ ಅನುಭವಿಸಿರುವುದರಿಂದ ರಂಜನ್ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದಂತೆ ಕಂಡು ಬರುತ್ತದೆ. ಟಿಕೆಟ್ ಹಂಚಿಕೆಯಲ್ಲಿ ಗೊಂದಲ, ಕೊಡಗು ಜಿಲ್ಲೆಯನ್ನು ಪಕ್ಷದ ಮುಖಂಡರು ನಿರ್ಲಕ್ಷ್ಯಿಸಿದ್ದು, ಜಿಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡದಿರುವುದರಿಂದ ಕಾಂಗ್ರೆಸ್‌ಗೆ ಮತದಾರರು ಈ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ. ರವೀಂದ್ರ ತಂಡದ ತಟಸ್ಥ ನಿಲುವು ಪಕ್ಷದ ಮೇಲೆ ಸ್ವಲ್ಪ ಮಟ್ಟಿನ ಮೇಲೆ ಪರಿಣಾಮ ಬಿದ್ದಂತೆ ಕಂಡು ಬರುತ್ತಿದೆ. ಬಿಜೆಪಿ ಪ್ರಬಲವಾಗಿರುವ ದಕ್ಷಿಣ ಕೊಡಗಿನಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದಿರುವುದರಿಂದ ಬಿಜೆಪಿ ಮುಖಂಡರು ಪಕ್ಷದಲ್ಲಿನ ಒಡಕನ್ನು ಎಷ್ಟರ ಮಟ್ಟಿಗೆ ಒಪ್ಪುತ್ತಾರೋ ಗೊತ್ತಿಲ್ಲ. ಆದರೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರುವುದರಿಂದ ಭಿನ್ನಾಭಿಪ್ರಾಯದ ವಿಚಾರ ಸದ್ಯಕ್ಕೆ ಗೌಣವಾಗಿದೆ.

ಮಂಡಿಯೂರಿದ ಕಾಂಗ್ರೆಸ್: ಸಂಘಟನಾ ಪಡೆ ಹೊಂದಿರುವ ಬಿಜೆಪಿ ಕಾರ್ಯಕರ್ತರ ಮುಂದೆ ಕಾಂಗ್ರೆಸ್ ಮಂಡಿಯೂರಿದೆ. ಜಿ.ಪಂ. ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ವೀಣಾ ಅಚ್ಚಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ, ಇನ್ನು ಮುಂದೆಯಾದರೂ ಕಾಂಗ್ರೆಸ್ ಪ್ರಬಲ ಮುಖಂಡರಿಗೆ ಜಿಲ್ಲೆಯ ನಾಯಕತ್ವ ವಹಿಸಬೇಕಿದೆ. ಸಾಮೂಹಿಕ ನಾಯಕತ್ವದಡಿ ಪಕ್ಷವನ್ನು ಸಂಘಟಿಸಬಲ್ಲ ಮುಖಂಡರನ್ನು ಗುರುತಿಸಿ ಪಕ್ಷವನ್ನು ಕಟ್ಟುವ ಹೊಣೆ ನೀಡಬೇಕಾಗಿದೆ. ಇಲ್ಲವೇ ಯಾವುದೋ ಪ್ರಭಾವ ಅಥವಾ ಒತ್ತಡಕ್ಕೆ ಮಣಿದು ದುರ್ಬಲ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಿದಲ್ಲಿ ಪ್ರಬಲ ಬಿಜೆಪಿಯನ್ನು ಎದುರಿಸುವುದು ಕಷ್ಟವಾದೀತು. ಇದು ಸಂಸದ ಎಚ್. ವಿಶ್ವನಾಥ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರೆಲ್ಲರಿಗೂ ಮನವರಿಕೆಯಾಗಬೇಕಿದೆ.

ಇನ್ನು, ಜೆಡಿಎಸ್ ಈ ಬಾರಿ ನಾಲ್ಕೈದು ಸ್ಥಾನಗಳನ್ನು ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿತ್ತಾದರೂ ಅಂತಹ ಲೆಕ್ಕಾಚಾರಗಳೆಲ್ಲಾ ತಲೆಕೆಳಕಾಗಿ ಕೇವಲ ಎರಡು ಸ್ಥಾನಗಳಿಗೆ ತೃಪ್ತಿ ಪಟ್ಟಿದೆ.ಮಾಜಿ ಸಚಿವ ಬಿ.ಎ. ಜೀವಿಜಯನವರ ಪ್ರಾಬಲ್ಯವಿರುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಾತ್ರ ಎರಡು ಸ್ಥಾನ ಗೆದ್ದರೆ, ಮಡಿಕೇರಿ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಅದು ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಜಿಲ್ಲೆಯ ಮಟ್ಟಿಗಾದರೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರೆ ಬಿಜೆಪಿಗೆ ಪೈಪೋಟಿ ನೀಡಬಹುದಿತ್ತೇನೋ? ಆದರೆ, ಮೈತ್ರಿ ಸಾಧ್ಯತೆಯನ್ನು ಎರಡೂ ಪಕ್ಷಗಳು ತಳ್ಳಿ ಹಾಕಿದ್ದರಿಂದ ಈ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಬೇಕಾಯಿತು.

ಒಟ್ಟಿನಲ್ಲಿ, ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್‌ಗೆ ಜಿ.ಪಂ. ಚುನಾವಣಾ ಫಲಿತಾಂಶ ‘ಹೊಸ ವರ್ಷದ ಉಡುಗೊರೆ’ ಎನ್ನಬಹುದು. ಈ ಮಧ್ಯೆ, ನವೆಂಬರ್ 15ರಂದು ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂಬ ಕೊಡಗಿನ ಜನರ ಬೇಡಿಕೆಯನ್ನು ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆ ನೀಡಿದ್ದಾರೆ. ಸಚಿವ ಸಂಪುಟದಲ್ಲಿಯೂ ಲೆಕ್ಕವಿಲ್ಲದಷ್ಟು ಖಾತೆಗಳು ಖಾಲಿ ಬಿದ್ದಿರುವುದರಿಂದ ಜಿಲ್ಲಾ ಪ್ರಾತಿನಿಧ್ಯ ಹಾಗೂ ಹಿರಿತನದ ಆಧಾರದ ಮೇರೆಗೆ ಸಂಪುಟದಲ್ಲಿ ಸ್ಥಾನ ಪಡೆಯಲು ರಂಜನ್ ಎಲ್ಲಾ ಅರ್ಹತೆ ಪಡೆದಿದ್ದಾರೆ. ಹೀಗಾಗಿ, ಬಜೆಟ್ ನಂತರ ಸಂಪುಟ ವಿಸ್ತರಣೆಯಾದಲ್ಲಿ ರಂಜನ್‌ಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.