ADVERTISEMENT

ಅವನತಿಯತ್ತ ಮಡಿಕೇರಿಯ ಹಳೇ ಕೋಟೆ...

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 12:44 IST
Last Updated 4 ಜೂನ್ 2018, 12:44 IST
ಮಡಿಕೇರಿಯಲ್ಲಿರುವ ಅರಮನೆಯ ಹೊರಂಗಣ ನೋಟ
ಮಡಿಕೇರಿಯಲ್ಲಿರುವ ಅರಮನೆಯ ಹೊರಂಗಣ ನೋಟ   

ಮಡಿಕೇರಿ: ನಗರದ ಐತಿಹಾಸಿಕ ‘ಕೋಟೆ’ ಇಂದು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅವನತಿ ಕಾಣುತ್ತಿದೆ. ನಗರದಲ್ಲಿ ಸುರಿಯುತ್ತಿರುವ ಮಳೆಗೆ ಚಾವಣಿ ಕಳಚಿ ಬೀಳುವ ಸ್ಥಿತಿಗೆ ತಲುಪಿವೆ.

1812ರಲ್ಲಿ ಇಮ್ಮಡಿ ಲಿಂಗರಾಜ ಒಡೆಯರ್ ಕಾಲದಲ್ಲಿ ಮರುನಿರ್ಮಿಸಲಾದ ಅರಮನೆಯ ಒಳಗಡೆ ಸಂಪೂರ್ಣವಾಗಿ ನೀರಿನ ಪಸೆ ಕಾಣಿಸುತ್ತಿದೆ. ಕೋಟೆಯ ಗೋಡೆಗಳು ಬಿರುಕುಬಿಟ್ಟಿವೆ.

ಕೆಲವೆಡೆ ಕುಸಿಯುವ ಹಂತದಲ್ಲಿವೆ. ಗೋಡೆ ಸುಣ್ಣ ಬಣ್ಣ ಕಳೆದುಕೊಂಡಿದೆ. ಹಾಳಾಗಿರುವ ಮೆಟ್ಟಿಲುಗಳು ಹಾಗೂ ಬಾಗಿಲುಗಳಿಂದ ಅರಮನೆ ದಿನದಿಂದ ದಿನಕ್ಕೆ ಅಂದ ಕಳೆದುಕೊಳ್ಳುತ್ತಿದೆ.

ADVERTISEMENT

ಮೊದಲಿಗೆ 1681ರಲ್ಲಿ ಹಾಲೇರಿ ರಾಜವಂಶದ ಮುದ್ದುರಾಜನಿಂದ ಅರಮನೆ ನಿರ್ಮಾಣವಾಗಿದೆ. ನಂತರ, 1812ರ ಪುನರ್ ನಿರ್ಮಾಣಗೊಂಡಿತ್ತು. ಮೊದಲು ಹುಲ್ಲಿನಿಂದ ನಿರ್ಮಾಣವಾಗಿದ್ದು, ಬ್ರಿಟಿಷರು ಕೊಡಗನ್ನು ವಶಪಡಿಸಿಕೊಂಡಾಗ ಹೆಂಚು ಹಾಕಿದ್ದರು. ಬ್ರಿಟಿಷರ ಅವಧಿಯಲ್ಲಿ ಹಲವು ಬಾರಿ ನವೀಕರಣಗೊಳಿಸಲಾಗಿತ್ತು. ಅರಮನೆ ಇಂದು ಆಕರ್ಷಣೆ ಕಳೆದುಕೊಳ್ಳುತ್ತಿರುವುದು ವಿಷಾದಕರ ಎನ್ನುತ್ತಾರೆ ಸ್ಥಳೀಯರಾದ ಬಿ.ಎ. ಶೇಷಪ್ಪ.

ಕೋಟೆಯಲ್ಲಿಯೇ ಸರ್ಕಾರಿ ಕಚೇರಿಗಳು: ಈ ಅರಮನೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ, ಶಾಸಕರ ಕಚೇರಿಗಳು, ವಿಧಾನ ಪರಿಷತ್ ಸದಸ್ಯರ ಜನಸಂಪರ್ಕ ಕಚೇರಿಗಳಿವೆ. ಜಿಲ್ಲಾ ಗ್ರಂಥಾಲಯ, ನ್ಯಾಯಾಲಯ ಸಂಕೀರ್ಣ ಕೂಡಾ ಇದೆ. ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಓಡಾಡ ಸಹಜವಾಗಿ ಹೆಚ್ಚಿದೆ.

ಪ್ರವಾಸಿಗರ ಮೆಚ್ಚಿನ ತಾಣ ‘ಕೋಟೆ’: ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಕೋಟೆ, ಕೊಡಗಿನ ಗತ ವೈಭವ ನೆನಪಿಸುತ್ತದೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಆನೆಯ ಬೃಹತ್ ಶಿಲ್ಪ, ಕೋಟೆ ಗಣಪತಿ ದೇವಸ್ಥಾನ ಹಾಗೂ ವಸ್ತು ಸಂಗ್ರಹಾಲಯ ನೋಡಲು ಪ್ರವಾಸಿಗರು ಬರುತ್ತಾರೆ.

‘ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಕೋಟೆಯ ಸಂರಕ್ಷಣೆಗೆ ಗಮನ ಹರಿಸಿ, ಐತಿಹಾಸಿಕ ಕಟ್ಟಡವನ್ನು ಉಳಿಸುವಲ್ಲಿ ಶ್ರಮಿಸಬೇಕು’ ಎನ್ನುತ್ತಾರೆ ನಗರ ಸ್ಟೋನ್ ಹಿಲ್ ನಿವಾಸಿ ಕೆ.ರಾಜು.

ವಿಧಾನ ಪರಿಷತ್‌ ಸಭಾಂಗಣವಾಗಿದ್ದ ಅರಮನೆ

ರಾಜರ ಅರಮನೆ ಸುತ್ತ ಕಲ್ಲಿನ ಬೃಹತ್ ಕೋಟೆ ನಿರ್ಮಿಸಲಾಗಿದೆ. ಹೆಬ್ಬಾಗಿಲು, ಕಾವಲು ಕೊಠಡಿ, ಸಭಾಂಗಣ, ನೀರಿನ ತೊಟ್ಟಿ, ರಾಜರ ಕಾಲದ ಪಟ್ಟದಾನೆಯ ಕಲ್ಲಿನ ಪ್ರತಿರೂಪವನ್ನು ಹೊಂದಿರುವ ಐತಿಹಾಸಿಕ ಕಟ್ಟಡ ಇದಾಗಿದೆ.

ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ ಇದು ವಿಧಾನ ಪರಿಷತ್‌ ಸಭಾಂಗಣ ವಾಗಿತ್ತು. ನಂತರ, 1956ರಲ್ಲಿ ಮೈಸೂರಿನೊಂದಿಗೆ ವಿಲೀನವಾದ ಬಳಿಕ ಕೋಟೆ ಜಿಲ್ಲಾಧಿಕಾರಿಗಳ ಕಚೇರಿಯಾಯಿತು. ಜಿಲ್ಲಾಡಳಿತಕ್ಕೆ ನೂತನ ಕಚೇರಿಯಾದ ನಂತರ ಜಿಲ್ಲಾ ಪಂಚಾಯಿತಿ ಕಚೇರಿಗಳು ಇಂದು ಆಕ್ರಮಿಸಿಕೊಂಡಿವೆ.

**
ಕೋಟೆ ದುರಸ್ತಿಗೆ ಸಂಬಂಧಿಸಿ ದಂತೆ ಪುರಾತತ್ವ ಇಲಾಖೆಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ. ಸಾಕಷ್ಟು ಅನುದಾನ ಲಭ್ಯ ಇದ್ದರೂ ದುರಸ್ತಿ ಮಾಡಲು ಮುಂದಾಗುತ್ತಿಲ್ಲ
- ಬಿ.ಎ. ಹರೀಶ್, ಅಧ್ಯಕ್ಷ, ಜಿಲ್ಲಾ ಪಂಚಾಯಿತಿ 
**
ಅರಮನೆ ಸೂಕ್ತ ನಿರ್ವಹಣೆ ಮಾಡುವುದಕ್ಕಾಗಿ ಇಲ್ಲಿನ ಪುರಾತತ್ವ ಇಲಾಖೆಗೆ ಸೂಚಿಸಲಾಗಿತ್ತು. ಆದರೂ, ಕ್ರಮ ಕೈಗೊಂಡಿಲ್ಲ. ಮತ್ತೊಮ್ಮೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು
ಪಿ.ಐ. ಶ್ರೀವಿದ್ಯಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.