ADVERTISEMENT

ಇಲಾಖಾಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷ ರವಿಕುಶಾಲಪ್ಪ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 11:25 IST
Last Updated 11 ಫೆಬ್ರುವರಿ 2011, 11:25 IST

ಮಡಿಕೇರಿ: 2010-11ನೇ ಸಾಲಿನಲ್ಲಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನದ ಪೈಕಿ ಬಿಡಿಗಾಸು ಕೂಡ ಸರ್ಕಾರಕ್ಕೆ ವಾಪಸು ಹೋಗಬಾರದು. ಹಾಗಾದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿ.ಪಂ. ನೂತನ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಗುರುವಾರ ಎಚ್ಚರಿಕೆ ನೀಡಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2010-11ನೇ ಸಾಲಿನ ಜನವರಿ ಅಂತ್ಯದವರೆಗಿನ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಅನುದಾನ ಖರ್ಚು ಮಾಡುವುದಕ್ಕೆ ಯಾವುದೇ ರೀತಿಯ ಸಮಸ್ಯೆ, ಅಡ್ಡಿ- ಆತಂಕಗಳಿದ್ದಲ್ಲಿ ಅಧಿಕಾರಿಗಳು ಮುಕ್ತವಾಗಿ ನನ್ನ ಜೊತೆ ಚರ್ಚೆ ಮಾಡಬಹುದು. ಆದರೆ, ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಅನುದಾನ ಖರ್ಚಾಗದೆ ಸರ್ಕಾರಕ್ಕೆ ವಾಪಸು ಹೋದಲ್ಲಿ ಅದನ್ನು ಸಹಿಸುವುದಿಲ್ಲ’ ಎಂದು ತೀಕ್ಷ್ಣವಾಗಿ ಎಚ್ಚರಿಸಿದರು.

‘ಕಟ್ಟಡ, ಕಾಮಗಾರಿಗಳನ್ನು ಕೈಗೊಳ್ಳಲು ನಿವೇಶನ ಮತ್ತಿತರ ಸಮಸ್ಯೆಗಳಿದ್ದಲ್ಲಿ ಅಂತಹ ಸ್ಥಳಗಳಿಗೆ ಖುದ್ದು ಭೇಟಿ ನೀಡಲು ಕೂಡ ಸಿದ್ಧ. ಈ ನಿಟ್ಟಿನಲ್ಲಿ ಇಲಾಖೆಗಳ ಮುಖ್ಯ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದ ಅವರು, ‘ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳ ವಿವರ, ಪ್ರಗತಿ, ಇದುವರೆಗೆ ಎಷ್ಟು ಅನುದಾನ ಖರ್ಚಾಗಿದೆ? ಎಷ್ಟು ಹಣ ಖರ್ಚಾಗಬೇಕಿದೆ? ಅನುದಾನ ಖರ್ಚು ಮಾಡಲು ಎದುರಾಗಿರುವ ತೊಡಕುಗಳ ಕುರಿತು ಇನ್ನು ನಾಲ್ಕು ದಿನಗಳಲ್ಲಿ ತಮಗೆ ಲಿಖಿತ ಮಾಹಿತಿ ನೀಡಬೇಕು’ ಎಂದು ಆದೇಶಿಸಿದರು.

‘ಯಾವುದೇ ಕಾರಣಕ್ಕೂ ಅಧಿಕಾರಿಗಳು ಗ್ರಾಮ ಪಂಚಾಯ್ತಿ ಅಥವಾ ಸಾರ್ವಜನಿಕರ ಮೇಲೆ ದೂಷಣೆ ಮಾಡುತ್ತಾ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

‘2010-11ನೇ ಸಾಲಿನ ಹಣಕಾಸು ವರ್ಷ ಅಂತ್ಯಗೊಳ್ಳಲು ಇನ್ನು 50 ದಿನಗಳಷ್ಟೇ ಬಾಕಿ ಉಳಿದಿದೆ. ಈ ಅವಧಿಯಲ್ಲಿ ಇಲಾಖೆಗಳು ಶೇ 100ರಷ್ಟು ಅನುದಾನ ಖರ್ಚು ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂತಹ ಪೂರ್ವಭಾವಿ ಸಭೆಗಳನ್ನು ನಡೆಸಿ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಸಭೆಗೆ ತಿಳಿಸಿದರು.

‘ಜಿಲ್ಲೆಯ ಕೆಲವು ಕಡೆಗಳಲ್ಲಿ ವಸತಿಗೃಹಗಳಿದ್ದರೂ ವೈದ್ಯರು ಅಲ್ಲಿ ತಂಗದೆ ಮೈಸೂರು ಮತ್ತು ಮಂಗಳೂರಿನಿಂದ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ‘ವೈದ್ಯರು ಕೇಂದ್ರ ಸ್ಥಾನ ಬಿಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ವೈದ್ಯರ ವಾಸ್ತವ್ಯಕ್ಕೆ ವಸತಿಗೃಹಗಳಿಲ್ಲವೋ ಅಂತಹ ಕಡೆಗಳಲ್ಲಿ ಮನೆ ಬಾಡಿಗೆ ಕೂಡಲು ಸಮ್ಮತಿಸಲಾಗಿದೆ’ ಎಂದರು.

‘ಜಿಲ್ಲೆಯ ಕುಗ್ರಾಮಗಳಲ್ಲಿ ವೈದ್ಯರು ಸೇವೆ ಸಲ್ಲಿಸುವುದು ಅನಿವಾರ್ಯ. ಹೀಗಾಗಿ, ಎಲ್ಲೆಲ್ಲಿ ವೈದ್ಯರು ತಂಗಲು ವಸತಿಗೃಹಗಳಿಲ್ಲವೋ ಅಂತಹ ಪ್ರದೇಶಗಳ ಪಟ್ಟಿ ಸಲ್ಲಿಸಿದಲ್ಲಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ಜಿ.ಪಂ.ಅಧ್ಯಕ್ಷರು ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರೀ-ಮೆಟ್ರಿಕ್ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇರುವ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್‌ಗೌಡ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ, ಬೈಸಿಕಲ್‌ಗಳನ್ನು ನೀಡುತ್ತಿರುವುದರಿಂದ ಸಮೀಪದಲ್ಲಿನ ಮಕ್ಕಳು ವಸತಿ ನಿಲಯಗಳಿಗೆ ಸೇರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇಂತಹ ವಸತಿ ನಿಲಯಗಳನ್ನು ಹಂತ-ಹಂತವಾಗಿ ಮುಚ್ಚಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಸರ್ಕಾರ ಚಿಂತಿಸುತ್ತಿದೆ ಎಂದು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಸರಾಸರಿ ಶೇ 90ರಷ್ಟಿದೆ. ಕೆಲವು ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ ಎಂದ ಅವರು, ಕುಶಾಲನಗರದಲ್ಲಿ ಪೋಸ್ಟ್-ಮೆಟ್ರಿಕ್ ಬಾಲಕಿಯರ ವಸತಿ ನಿಲಯ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.