ADVERTISEMENT

ಉಪನ್ಯಾಸಕರು ಮೈದಾನಕ್ಕೆ ಇಳಿದಾಗ...

ಎಂ.ಎನ್.ಹೇಮಂತಕುಮಾರ್‌
Published 29 ಮಾರ್ಚ್ 2014, 9:15 IST
Last Updated 29 ಮಾರ್ಚ್ 2014, 9:15 IST

ವಿರಾಜಪೇಟೆ:  ವರ್ಷವಿಡೀ ಪಾಠ–ಪ್ರವಚನ, ಮಕ್ಕಳ ಹಾಜರಾತಿ, ಪರೀಕ್ಷೆ ನಡೆಸುವುದು, ಉತ್ತರ ಪತ್ರಿಕೆ ಮೌಲ್ಯಮಾಪನ, ಫಲಿತಾಂಶ ಹೀಗೆ ಶೈಕ್ಷಣಿಕವಾಗಿ ತಮ್ಮನ್ನು ತೊಡಗಿಸಿಕೊಂಡು ಶೈಕ್ಷಣಿಕ ಪ್ರಗತಿಯ ಹಿಂದೆ ಬೀಳುತ್ತಿದ್ದ ಉಪನ್ಯಾಸಕರು ಶುಕ್ರವಾರ ಮಾತ್ರ ವಿರಾಜಪೇಟೆಯ ಕಾವೇರಿ ಕಾಲೇಜಿನ ಮೈದಾನದಲ್ಲಿ ಬ್ಯಾಟ್‌–ಬಾಲ್‌ನ ಹಿಂದೆ ಬಿದ್ದಿದ್ದರು.

ಹೌದು, ಹೆಚ್ಚಿನ ಎಲ್ಲಾ ಕಾಲೇಜುಗಳಲ್ಲಿ ಪರೀಕ್ಷೆಗಳು ಮುಗಿದಿವೆ. ಶೈಕ್ಷಣಿಕ ವರ್ಷಾಂತ್ಯವಾದ್ದರಿಂದ ಉಪನ್ಯಾಸಕರಿಗೆ ಪಟ್ಟಣದ ಕಾವೇರಿ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಕ್ರಿಕೆಟ್‌ ಹಾಗೂ ಥ್ರೋಬಾಲ್‌ ಟೂರ್ನಿಯನ್ನು ಏರ್ಪಡಿಸಲಾಗಿತ್ತು. ತಮ್ಮ ಸೇವಾ ಅವಧಿಯಲ್ಲಿ ನಿಧನ ಹೊಂದಿದ ಕಾವೇರಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ವಿ. ಕೇಶವ್‌ ಅವರ ಸ್ಮರಣಾರ್ಥ  ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಕ್ರಿಕೆಟ್‌ ಟೂರ್ನಿಯಲ್ಲಿ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜು, ಸಂತ ಅನ್ನಮ್ಮ ಕಾಲೇಜು, ಕಾವೇರಿ ಕಾಲೇಜು, ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಹಾಗೂ ಪಾಲಿಟೆಕ್ನಿಕ್‌ ಕಾಲೇಜು, ನ್ಯಾಶನಲ್‌ ಅಕಾಡೆಮಿ,  ಪೊನ್ನಂಪೇಟೆಯ ಸಿಐಟಿ, ಸಾಯಿ ಶಂಕರ ಕಾಲೇಜು ಹಾಗೂ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಮಹಿಳಾ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ಥ್ರೋಬಾಲ್‌ ಟೂರ್ನಿಯಲ್ಲಿ 4  ತಂಡಗಳು ಭಾಗವಹಿಸಿದ್ದವು.

ಕ್ರೀಡಾಕೂಟದ ಉದ್ಘಾಟನೆಯನ್ನು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ ನೆರವೇರಿಸಿದರು. ಕ್ರಿಕೆಟ್‌ನ  ಅಂತಿಮ ಪಂದ್ಯ ಸಿಐಟಿ ಪೊನ್ನಂಪೇಟೆ ಹಾಗೂ ಸಾಯಿ ಶಂಕರ ತಂಡಗಳ ನಡುವೆ ನಡೆಯಿತು. ಸಾಯಿಶಂಕರ ತಂಡವು ಪ್ರಶಸ್ತಿಯನ್ನು ಪಡೆಯಿತು.

ಉತ್ತಮ ಬೌಲರ್‌ ಪ್ರಶಸ್ತಿಯನ್ನು ಸಾಯಿ ಶಂಕರ್‌ನ ಲಕ್ಷ್ಮೀ ಉತ್ತಮ ಬ್ಯಾಟ್ಸಮನ್‌ ಪ್ರಶಸ್ತಿಯನ್ನು ಸಂತ ಅನ್ನಮ್ಮ ಕಾಲೇಜಿನ ಹೇಮಂತ್‌, ಕೀಪರ್‌ ಪ್ರಶಸ್ತಿಯನ್ನು ಕಾವೇರಿ ಕಾಲೇಜಿನ ಕುಶಾಲಪ್ಪ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪ್ರವೀಣ್‌ ಹಾಹೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸಿಐಟಿಯ ದಿಲೀಪ್‌ ಪಡೆದರು.

ಥ್ರೋಬಾಲ್‌ ಟೂರ್ನಿಯ ಅಂತಿಮ ಪಂದ್ಯದಲ್ಲಿ  ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಪ್ರಥಮ ಹಾಗೂ ವಿರಾಜಪೇಟೆಯ ಕಾವೇರಿ ಕಾಲೇಜು ತಂಡವು  ರನ್ನರ್ಸ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಡಗು ಹಾಕಿ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ದೀನಾ ಪೂವಯ್ಯ  ಅವರು ಬಹುಮಾನ ವಿತರಿಸಿ ಮಾತನಾಡಿದರು. ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ ಅವರು ವೇದಿಕೆಯಲ್ಲಿದ್ದರು. 

ಬೆಳಗಿನಿಂದ ಸಂಜೆಯವರೆಗೂ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಆಟದಲ್ಲಿ ತಲ್ಲಿನರಾಗಿ ಕ್ರೀಡೆಯ ಆನಂದವನ್ನು ಅನುಭವಿಸಿದರು. ಕೆಲವು ಶಿಕ್ಷಕರಂತೂ ವಿಕೆಟ್‌ ಬಿದ್ದಾಗ, ಸಿಕ್ಸ್‌ ಹೊಡೆದಾಗ ಮಕ್ಕಳು ಸಹ ನಾಚುವಂತೆ ಕುಣಿದು ಸಂಭ್ರಮಿಸಿದರು.

ಮೈದಾನದಲ್ಲಂತೂ ಹಲವು ಮಂದಿ ಉಪನ್ಯಾಸಕರಿಗೆ ತಮ್ಮ ಬಾಲ್ಯದ ನೆನಪು ಕಾಡಿದ್ದು ಮಾತ್ರ ಸುಳ್ಳಲ್ಲ! ಟೂರ್ನಿಯಲ್ಲಿ ಯಾರೇ ಗೆದ್ದಿರಲಿ – ಸೋತಿರಲಿ... ಅಂತಿಮವಾಗಿ ಎಲ್ಲರನ್ನು ಕಾಡಿದ್ದು ನೆನಪು ಮಾತ್ರ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.