ADVERTISEMENT

ಒಂದೇ ಶಾಲೆಯಲ್ಲಿ ತಂದೆ-ಮಗಳು ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:16 IST
Last Updated 5 ಸೆಪ್ಟೆಂಬರ್ 2013, 9:16 IST

ನಾಪೋಕ್ಲು: ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಡ ಹೆಂಡತಿ ಜೋಡಿ ಅಪರೂಪವೇನಲ್ಲ. ಗುರುವಿನೊಂದಿಗೆ ಶಿಷ್ಯರು ಗುರುವಿನ ಸ್ಥಾನಕ್ಕೇರಿ ಜೊತೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದಾಹರಣೆಗಳು ಹೇರಳವಾಗಿವೆ.

ಆದರೆ ಒಂದೇ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ತಂದೆ- ಮಗಳ ಅಪರೂಪದ ಉದಾಹರಣೆ ಇಲ್ಲಿದೆ.
ಸಮೀಪದ ಎಮ್ಮೆಮಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ತಂದೆ ವಿಜಯ ಮತ್ತು ಮಗಳು ಯಶಸ್ವಿನಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇಬ್ಬರೂ ಸಮೀಪದ ಮೂರ್ನಾಡು ಪಟ್ಟಣದಲ್ಲಿ ವಾಸವಾಗಿದ್ದಾರೆ. ತಂದೆ ವಿಜಯ 2001ರಿಂದ ಎಮ್ಮೆಮಾಡಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತ್ದ್ದಿದು, ಯಶಸ್ವಿನಿ ಅದೇ ಶಾಲೆಯಲ್ಲಿ 2007ರಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ವಿಜಯ ಅವರ ನಿವೃತ್ತಿಗೆ ಎರಡು ವರ್ಷ ಬಾಕಿ ಇದೆ.  ವಿಜಯ ಅವರು 1982ರಲ್ಲಿ ಶಿಕ್ಷಕ ವೃತ್ತಿಗೆ ಸೇರಿಕೊಂಡಿದ್ದಾರೆ. ಶನಿವಾರ ಸಂತೆಯ ಮಾದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ನಿರ್ವಹಿಸಿದ ವಿಜಯ 1995ರಲ್ಲಿ ಮದೆನಾಡು ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ ಆರು ವರ್ಷಗಳ ಸೇವೆ ಸಲ್ಲಿಸಿ 2001ರಿಂದ ಎಮ್ಮೆಮಾಡು ಶಾಲೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದಾರೆ.

`ಯಶಸ್ವಿನಿ ಸರ್ಕಾರಿ ಕೆಲಸಕ್ಕೆ ಆಯ್ಕೆಯಾಗಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಗಿನ ಉಪನಿರ್ದೇಶಕ ಮಹಮದ್ ಬಷೀರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರಿಧರ್ ಅವರು ಅಪ್ಪ ಮಗಳು ಒಂದೇ ಶಾಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಎಂದು ಹಾರೈಸಿ ನೇಮಕಾತಿ ಮಾಡಿದರು' ಎಂದು ಶಿಕ್ಷಕ ವಿಜಯ ನೆನಪಿಸಿಕೊಂಡರೆ, `ಮೊದಮೊದಲು ತಂದೆಯೊಡನೆ ಒಂದೇ ಸ್ಟಾಫ್ ರೂಮಿನಲ್ಲಿ ಕುಳಿತುಕೊಳ್ಳಲು ಮುಜುಗರ ವಾಗುತಿತ್ತು. ಈಗಲೂ ಶಾಲೆಯಲ್ಲಿ ನಮ್ಮಿಬ್ಬರ ನಡುವೆ ಮಾತುಕತೆ ಕಡಿಮೆ ಎನ್ನುತ್ತಾರೆ' ಯಶಸ್ವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.