ADVERTISEMENT

ಕಡಗದಾಳು:ಬೇಕಿನ್ನಷ್ಟು ಕಾಯಕಲ್ಪ

ಶ್ರೀಕಾಂತ ಕಲ್ಲಮ್ಮನವರ
Published 21 ಸೆಪ್ಟೆಂಬರ್ 2011, 6:15 IST
Last Updated 21 ಸೆಪ್ಟೆಂಬರ್ 2011, 6:15 IST
ಕಡಗದಾಳು:ಬೇಕಿನ್ನಷ್ಟು ಕಾಯಕಲ್ಪ
ಕಡಗದಾಳು:ಬೇಕಿನ್ನಷ್ಟು ಕಾಯಕಲ್ಪ   

ಮಡಿಕೇರಿ: ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲಿರುವ ಗ್ರಾಮಗಳು ಸಹಜವಾಗಿ ಪಡೆದುಕೊಳ್ಳುವಂತಹ `ಕೆಲವು~ ಸೌಲಭ್ಯಗಳು ಕಡಗದಾಳು ಗ್ರಾಮಕ್ಕೂ ದಕ್ಕಿವೆ. ಆದಾಗ್ಯೂ, ಗ್ರಾಮದ ಒಳಗೆ ಹೊಕ್ಕು ನೋಡಿದರೆ ಇತರ ಗ್ರಾಮಗಳು ಎದುರಿಸುವಂತಹ ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಹಾಳಾದ ಒಳರಸ್ತೆಗಳ ಸಮಸ್ಯೆ ಇಲ್ಲಿಯೂ ಕಾಣಸಿಗುತ್ತವೆ.

ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ ಕೇವಲ ಐದಾರು ಕಿ.ಮೀ ದೂರದಲ್ಲಿ ಕಡಗದಾಳು ಗ್ರಾಮವಿದೆ. ಸುಮಾರು 2,200 ಜನಸಂಖ್ಯೆ ಇದ್ದು, ಇವರಲ್ಲಿ 1078 ಪುರುಷರು ಹಾಗೂ 1122 ಸ್ತ್ರೀಯರು ಸೇರಿದ್ದಾರೆ. ಒಟ್ಟು 539 ಕುಟುಂಬಗಳು ನೆಲೆನಿಂತಿವೆ.

ಕಾಫಿ ತೋಟಗಳಿಂದ ಗ್ರಾಮ ಸುತ್ತುವರಿದಿದ್ದು, ಇದುವೆ ಗ್ರಾಮಸ್ಥರ ಮೂಲ ಆದಾಯ ಕೂಡ ಆಗಿದೆ. ಕೆಲವು ಜನರು ಉದ್ಯೋಗ ಅರಸಿ ಮಡಿಕೇರಿ ತೆರಳಿದರೆ, ಇನ್ನುಳಿದ ಬಹುಪಾಲು ಜನರು ಇಲ್ಲಿನ ಕಾಫಿ ತೋಟಗಳಲ್ಲಿಯೇ ಬೆವರು ಹರಿಸುತ್ತಾರೆ.

ಮಡಿಕೇರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಉತ್ತಮವಾಗಿದ್ದು, ಜನರ ಓಡಾಟಕ್ಕೆ ಅನುಕೂಲಕರವಾಗಿದೆ. ಇದರಂತೆ ಮುಖ್ಯ ರಸ್ತೆಗೆ ವಿದ್ಯುತ್ ಸಂಪರ್ಕ ಉತ್ತಮವಾಗಿದೆ. ಯಾವುದಾದರೂ ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲಿರುವ ಗ್ರಾಮಗಳಿಗೆ ಸಹಜವಾಗಿ ದಕ್ಕುವಂತಹ ಸೌಲಭ್ಯಗಳು ಇವು. ಮುಖ್ಯರಸ್ತೆಯಿಂದ ಬದಿಗೆ ಸರಿದು ಗ್ರಾಮದೊಳಗೆ ಸುತ್ತಾಡಿದರೆ ಹಲವು ಸಮಸ್ಯೆಗಳು ಕಾಣಸಿಗುತ್ತವೆ.

ಕಂಬ ನೆಟ್ಟಿದ್ದಾರೆ, ವಿದ್ಯುತ್ ಇಲ್ಲ:
ದೇಶದ ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕಿಸಬೇಕೆನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ರಾಜೀವ್‌ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಇಲ್ಲಿ ನೆಲಕಚ್ಚಿರುವುದನ್ನು ನೋಡಬಹುದು.

ಕಡಗದಾಳು ಮುಖ್ಯರಸ್ತೆಯಿಂದ ಬೊಟ್ಲಪ್ಪ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಈ ಯೋಜನೆಯಡಿ ವಿದ್ಯುತ್ ಕಂಬಗಳನ್ನು ನೆಟ್ಟಿರುವುದನ್ನು ಕಾಣಬಹುದು. ಆದರೆ, ವಿದ್ಯುತ್ ಸಂಪರ್ಕಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ನೀರಿನ ಸಮಸ್ಯೆ: ಕಡಗದಾಳು ಪಂಚಾಯಿತಿ ವ್ಯಾಪ್ತಿಯ ಮಾದೇಟಿ, ನೀರು ಕೊಲ್ಲಿ, ಬೊಯಿಕೇರಿ ಇತರೆಡೆ ಕುಡಿಯುವ ನೀರಿನ ಸಮಸ್ಯೆ ಪೂರೈಕೆ ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಡಗದಾಳು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕೇಶವ, ನೀರು ಪೂರೈಕೆ ಯೋಜನೆಗಳು ಜಿಲ್ಲಾ ಪಂಚಾಯಿತಿಯಿಂದಲೇ ಅನುಷ್ಠಾನವಾಗಬೇಕಾಗಿದೆ. ಗ್ರಾಮ ಪಂಚಾಯಿತಿಗೆ ಕೇವಲ ನಿರ್ವಹಣೆಗಾಗಿ ಅಲ್ಪ ಮೊತ್ತದ ಅನುದಾನ ಬರುತ್ತದೆ. ಈ ಹಣದಲ್ಲಿ ಪ್ರತಿ ಮನೆಗೆ ನೀರು ಪೂರೈಸಲು ಕಷ್ಟಸಾಧ್ಯ ಎಂದರು.

ಈ ಸಮಸ್ಯೆ ಬಗ್ಗೆ ಜಿಲ್ಲಾ ಪಂಚಾಯಿತಿಯ ಗಮನಕ್ಕೆ ತರಲಾಗಿದ್ದು, ಶೀಘ್ರವಾಗಿ ಕ್ರಮಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು.

ಗದ್ದೆಯಂತಿರುವ ಒಳರಸ್ತೆಗಳು...:
ಗ್ರಾಮದ ಒಳರಸ್ತೆಗಳು ಗದ್ದೆಯ ರೂಪ ಪಡೆದಿವೆ. ಬೊಟ್ಲಪ್ಪ ದೇವಸ್ಥಾನಕ್ಕೆ ಹೋಗುವ ಮಾರ್ಗವು ಅರ್ಧಕ್ಕಿಂತ ಹೆಚ್ಚು ಭಾಗ ಕೆಸರಿನ ಗದ್ದೆಯಂತೆ ಕಾಣುತ್ತದೆ. ಈ ದೇವಸ್ಥಾನಕ್ಕೆ ಹಲವು ಜನರ ಭಕ್ತರು ಹಾಗೂ ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷವಾಗಿ ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ಕೂಡ ನಡೆಯುತ್ತದೆ.

ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಭಕ್ತಾದಿಗಳಿಗೆ, ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದು ಸ್ಥಳೀಯ ಮನವಿ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT