ADVERTISEMENT

ಕಾಡಿನಿಂದ ಬಯಲುಸೀಮೆಯತ್ತ ಪಯಣ

l ಮೂಲನೆಲೆ ತೊರೆದ ಆದಿವಾಸಿಗಳು l ನಾಗರಹೊಳೆ ಹಾಡಿಯ 53 ಕುಟುಂಬಗಳಿಗೆ ಪುನರ್ವಸತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:56 IST
Last Updated 15 ಜೂನ್ 2018, 12:56 IST

ಗೋಣಿಕೊಪ್ಪಲು: ನಾಗರಹೊಳೆ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನದ ಹಾಡಿಗಳ ಮೂಲ ನಿವಾಸಿಗಳು ಗುರುವಾರ ತಮ್ಮ ಮೂಲನೆಲೆಯನ್ನು ಶಾಶ್ವತವಾಗಿ ತೊರೆದು ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಪುನರ್ವಸತಿ ಕೇಂದ್ರಕ್ಕೆ ತೆರಳಿದರು.

ಗೊಂಡಾರಣ್ಯದ ನಡುವೆ ವನ್ಯಜೀವಿಗಳ ಒಡನಾಟದಲ್ಲಿಯೇ ಹುಟ್ಟಿ ಬೆಳೆದು ನಾಗರಿಕ ಪ್ರಪಂಚವನ್ನೇ ಕಾಣದ ಆದಿವಾಸಿಗಳು ಬಿಸಿಲಿನ ಬಯಲು ಪ್ರದೇಶಕ್ಕೆ ಭಾರವಾದ ಹೃದಯದಿಂದಲೇ ಸಾಗಿದರು.

ಹೆಂಚಿನ ಮನೆ, ರಸ್ತೆ, ಕುಡಿಯುವ ನೀರು, ವಿದ್ಯುತ್ ಬೆಳಕನ್ನೇ ಕಾಣದ ಈ ಆದಿವಾಸಿಗಳು ಇವೆಲ್ಲವನ್ನೂ ಒಳಗೊಂಡ ನಾಗರಿಕ ಲೋಕಕ್ಕೆ ಗುರುವಾರ ಅರಣ್ಯಾಧಿಕಾರಿಗಳ ಮುಂದಾಳತ್ವದಲ್ಲಿ ಕಾಲಿಟ್ಟದ್ದು ಅವರ ಮನಸ್ಸಿನಲ್ಲಿ ಸಂತಸವನ್ನು ಉಂಟುಮಾಡಲಿಲ್ಲ. ಬದಲಿಗೆ ಸ್ವತಂತ್ರ, ಸ್ವಚ್ಛಂದದ ಬದುಕನ್ನೇ ಕಳೆದುಕೊಂಡಿದ್ದೇವೆ ಎಂಬ ಆಂತಕದ ಛಾಯೆ ಅವರ ಮೊಗದಲ್ಲಿ ಹುದುಗಿತ್ತು.

ADVERTISEMENT

ನಾಗರಹೊಳೆ ಮತ್ತಿಗೋಡು ವನ್ಯಜೀವಿ ವಿಭಾಗದ ಜಂಗಲ್ಹಾಡಿ, ಚೇಣಿಹಡ್ಲು, ಬೊಂಬುಕಾಡು ಹಾಡಿಗಳ 53 ಕುಟುಂಬಗಳನ್ನು ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಸ್ಥಳಾಂತರಗೊಳಿಸಿದರು. ಗಿರಿಜನರ ವಸ್ತುಗಳನ್ನು ಸಾಗಿಸಲು ಬೆಳಿಗ್ಗೆ 8 ಗಂಟೆ ವೇಳೆಗೆ ಲಾರಿಗಳು ಸಾಲಾಗಿ ಬಂದು ನಿಂತಾಗ ಆದಿವಾಸಿಗಳ ಮುಖದಲ್ಲಿ ದುಗುಡ ತುಂಬಿತ್ತು. ಪ್ಲಾಸ್ಟಿಕ್ ಹೊದಿಕೆ, ಪ್ಲಾಸ್ಟಿಕ್ ಬಿಂದಿಗೆ, ಅಲ್ಯುಮಿನಿಯಂ ಪಾತ್ರೆ, ಹರಿದ ಬಟ್ಟೆ ಬರೆಗಳನ್ನು ಚೀಲಕ್ಕೆ ತುಂಬಿಸಿ ಗುಡಿಸಲಿನಿಂದ ಹೊರಕ್ಕೆ ತಂದಿಟ್ಟರು. ಬಳಿಕ ಗುಡಿಸಲಿನ ಗಳಗಳನ್ನು ತೆಗೆದು, ಮನೆಯ ನೆರಿಕೆ ಗೋಡೆಗಳನ್ನು ಕೆಡವಿ ಬಯಲು ಮಾಡಿ ತಾವು ಹುಟ್ಟಿ ಬೆಳೆದು, ಬದುಕು ಸವೆಸಿದ ನೆಲವನ್ನು ಅರಣ್ಯಾಧಿಕಾರಿಗಳ ಸುಪರ್ದಿಗೆ ಒಪ್ಪಿಸಿದರು.

ಹಕ್ಕು ಪತ್ರ ಹಿಂದಿರುಗಿಸಿದ ಅರಣ್ಯವಾಸಿ ಗಳು: ಕೇಂದ್ರ ಸರ್ಕಾರದ 2006ರ ಅರಣ್ಯ ಹಕ್ಕು ಕಾಯ್ದೆ ಅನ್ವಯ ಇಲ್ಲಿನ ಎಲ್ಲಾ ಗಿರಿಜನರಿಗೆ ಅರಣ್ಯ ಹಕ್ಕು ಪತ್ರ ನೀಡಲಾಗಿತ್ತು. ಆದರೆ ಇದೇ ಕೇಂದ್ರ ಸರ್ಕಾರದ ಮತ್ತೊಂದು ಯೋಜನೆಯಾದ ಅರಣ್ಯವಾಸಿ ಗಿರಿಜನರ ಮನ ಒಲಿಕೆ ಪುನರ್ವಸತಿ ಕಾನೂನಿನ ಅನ್ವಯ ಸ್ವಯಂ ಇಚ್ಛೆಯಿಂದ ಈ ಕೇಂದ್ರಗಳಿಗೆ ತೆರಳುವ ಗಿರಿಜನರು ತಾವು ಪಡೆದುಕೊಂಡಿದ್ದ ಹಕ್ಕುಪತ್ರವನ್ನು ಅರಣ್ಯಾಧಿಕಾರಿಗಳಿಗೆ ಹಿಂದಿರುಗಿಸಿದರು. ಬಳಿಕ ತಾವು ಸ್ವಯಂ ಇಚ್ಛೆಯಿಂದ ಪುನರ್ವಸತಿ ಕೇಂದ್ರಕ್ಕೆ ತೆರಳುತ್ತಿರುವುದಾಗಿಯೂ, ತಾವು ಪಡೆದುಕೊಂಡಿದ್ದ ಎಲ್ಲಾ ಅರಣ್ಯ ಸಂಪತ್ತನ್ನು ಹಿಂದಿರುಗಿಸುವುದಾಗಿಯೂ ಕರಾರು (ಒಪ್ಪಂದ) ಪತ್ರ ಬರೆದುಕೊಟ್ಟರು. ಆನಂತರ 53 ಕುಟುಂಬಗಳನ್ನು ಸುಮಾರು 10 ಲಾರಿಗಳಲ್ಲಿ ಒಂದೇ ಬಾರಿಗೆ ತುಂಬಿಸಿಕೊಂಡು ಸಾಗಿಸಲಾಯಿತು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್, ‘ಪುನರ್ವಸತಿ ಕೇಂದ್ರವಾದ ಭೀಮನಹಳ್ಳಿಯಲ್ಲಿ ತಲಾ ಒಂದು ಕುಟುಂಬಕ್ಕೆ 3 ಎಕರೆ ಭೂಮಿ ನೀಡಲಾಗಿದೆ. ಜತೆಗೆ ₹ 2ಲಕ್ಷ ಹಣವನ್ನು ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಲಾಗಿದೆ. ತಾತ್ಕಾಲಿಕ ಖರ್ಚು ವೆಚ್ಚಕ್ಕೆ ₹ 75 ಸಾವಿರ ನೀಡಲಾಗಿದೆ. ಅರಣ್ಯವಾಸಿ ಗಿರಿಜನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರಿಗೆ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯುವುದು ಕೇಂದ್ರ ಸರ್ಕಾರದ ಪುನರ್ವಸತಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಬಲವಂತವಿಲ್ಲದೆ ಸ್ವಯಂ ಇಚ್ಛೆಯಿಂದ ಹೊರಬರುವವರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ. ಮುಂದೆ ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬೇರೆ ಬೇರೆ ಇಲಾಖೆಗಳು ಅವರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಒದಗಿಸಲಿವೆ’ ಎಂದು ಹೇಳಿದರು.

‘2ನೇ ಹಂತದಲ್ಲಿ ಸುಳು ಗೋಡು ಬಳಿ ಇರುವ ಹಡು ಗುಂಡಿ, ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಹಾಗೂ ಆನೆಕ್ಯಾಂಪ್ ಹಾಡಿಯ 70 ಕುಟುಂಬಗಳನ್ನು ಪುನರ್ವಸತಿ ಗೊಳಿಸಲಾಗುವುದು. ಅಲ್ಲಿಗೆ ಮತ್ತಿಗೋಡು ವಲಯದ ಎಲ್ಲಾ ಹಾಡಿಗಳ ಗಿರಿಜನರಿಗೆ ಪುನರ್ವಸತಿ ಕಲ್ಪಿಸಿದಂತಾಗುತ್ತದೆ’ ಎಂದರು.

‘ನಾಗರಹೊಳೆ ರಾಷ್ಟ್ರೀಯ ಉದ್ಯಾನ ಇದೀಗ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಗಿರಿಜನರು ನೆಲೆಸುವುದರಿಂದ ಜನರ ಪ್ರಾಣಕ್ಕೂ ಅಪಾಯ ಒದಗಲಿದೆ. ಜತೆಗೆ ವನ್ಯಜೀವಿಗಳ ಓಡಾಟಕ್ಕೂ ತೊಂದರೆಯಾಗಲಿದೆ. ಇದೆಲ್ಲವನ್ನು ಗಮನಿಸಿ ಪುನರ್ವಸತಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.