ADVERTISEMENT

ಕಾಫಿ ಪಲ್ಪಿಂಗ್ ಪ್ರಾಬ್ಲಂ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 8:10 IST
Last Updated 17 ಫೆಬ್ರುವರಿ 2012, 8:10 IST

ಮಡಿಕೇರಿ: ಕಾಫಿ ಪಲ್ಪಿಂಗ್ (ಸಂಸ್ಕರಣೆ) ಘಟಕಗಳ ತ್ಯಾಜ್ಯ ನೀರಿನ ನಿರ್ವಹಣೆ ಸಮಸ್ಯೆ ಕಾಫಿ ಬೆಳೆಗಾರರು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಡುವೆ ಬಗೆಹರಿಯದ ಕಗ್ಗಂಟ್ಟಾಗಿ ಉಳಿದಿದೆ.

ಜಿಲ್ಲೆಯ 200ಕ್ಕೂ ಹೆಚ್ಚು ಪಲ್ಪಿಂಗ್ ಘಟಕಗಳಿಗೆ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲವೆಂದು ನೋಟಿಸ್ ನೀಡಲಾಗಿದೆ. ಅಲ್ಲದೇ ಕೆಲವು ಘಟಕಗಳನ್ನು ಅಧಿಕಾರಿಗಳು ಮುಟ್ಟುಗೋಲು ಕೂಡ ಹಾಕಿಕೊಂಡಿದ್ದಾರೆ. ಈ ಸಮಸ್ಯೆ ಬೇಗನೇ ಇತ್ಯರ್ಥವಾಗದಿದ್ದಲ್ಲಿ ರಾಜ್ಯದ ಕಾಫಿ ಉತ್ಪಾದನೆಗೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.

ಪಲ್ಪಿಂಗ್ ನೀರಿನಲ್ಲಿ ರಾಸಾಯನಿಕ ಪದಾರ್ಥಗಳಿದ್ದು, ಇದನ್ನು ಶುದ್ಧೀಕರಿಸಿದೆ ತೆರೆದ ಪರಿಸರದಲ್ಲಿ ಬಿಟ್ಟರೆ ಮಣ್ಣಿನ ಫಲಿತಾಂಶ, ಅಂತರ್ಜಲ ನೀರು ಕಲುಷಿತಗೊಳ್ಳುತ್ತದೆ ಎಂದು ಪರಿಸರ ಮಂಡಳಿಯವರು ಪಲ್ಪಿಂಗ್ ಘಟಕಗಳಿಗೆ ಎಚ್ಚರಿಕೆ ನೀಡಿದ್ದಾರೆ. ತ್ಯಾಜ್ಯ ನೀರನ್ನು ವಿಲೇವಾರಿ ಮಾಡಲು ಅವರು ಕೆಲವೊಂದು ಷರತ್ತುಗಳನ್ನು ವಿಧಿಸಿದ್ದಾರೆ.

ಇದರಲ್ಲಿ ತೋಟದಲ್ಲಿ ದೊಡ್ಡ ಗುಂಡಿಯನ್ನು ತೆಗೆದು, ಅದರ ಒಳಗೆ ಸುತ್ತಲೂ 1.5ಎಚ್‌ಡಿಪಿಇ ಜಿಯೊ-ಮೆಂಬ್ರೇನ್ (ಪ್ಲಾಸ್ಟಿಕ್) ಶೀಟ್  ಹಾಕಿ ಪಲ್ಪಿಂಗ್ ನೀರು ಶೇಖರಿಸಬೇಕು ಎನ್ನುವುದು ಮುಖ್ಯ. ಇದಕ್ಕೆ ಕಾಫಿ ಬೆಳೆಗಾರರು ಸುತಾರಾಂ ಒಪ್ಪುತ್ತಿಲ್ಲ. ಮಂಡಳಿಯ ಈ ಸಲಹೆ ಪ್ರಾಕ್ಟಿಕಲ್ ಆಗಿ ಯಶಸ್ಸು ಕಾಣುವುದು ಕಷ್ಟ ಎನ್ನುತ್ತಾರೆ.

ಈ ಶೀಟ್‌ನಲ್ಲಿ ತ್ಯಾಜ್ಯ ನೀರನ್ನು ಹಾಕಿದರೆ ಅದು ಕೇವಲ ಸೂರ್ಯನ ಶಾಖಕ್ಕೆ ಆವಿಯಾಗಿ ಹೋಗುವುದೊಂದೇ ಮಾರ್ಗ. ಕೊಡಗಿನಲ್ಲಿ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ಕಾಫಿ ಪಲ್ಪಿಂಗ್ ಮಾಡಲಾಗುತ್ತದೆ. ಈ ತ್ಯಾಜ್ಯವನ್ನು 1.5ಎಚ್‌ಡಿಪಿಇ ಜಿಯೊ-ಮೆಂಬ್ರೇನ್ (ಪ್ಲಾಸ್ಟಿಕ್) ಶೀಟ್‌ನಿಂದ ಸುತ್ತುವರಿದ (ಪರಿಸರ ಮಂಡಳಿಯ ಸಲಹೆಯಂತೆ) ಗುಂಡಿಯಲ್ಲಿ ಶೇಖರಿಸಿ ಇಟ್ಟುಕೊಂಡಿದ್ದೇವೆ ಎಂದು ಅಂದುಕೊಳ್ಳೋಣ.

ಎರಡು ತಿಂಗಳು ಕಳೆಯುವಷ್ಟರಲ್ಲಿ (ಮೇ ತಿಂಗಳ ಕೊನೆಯ ವಾರದಲ್ಲಿ) ಮಳೆ ಆರಂಭವಾಗುತ್ತದೆ. ಕನಿಷ್ಠ 6-7 ತಿಂಗಳು ಮಳೆ ಸುರಿಯುತ್ತದೆ. ಈ ಅವಧಿಯಲ್ಲಿ ಸೂರ್ಯನನ್ನು ಕಾಣುವುದೇ ಕಷ್ಟ, ಅಂತಹ ಸಮಯದಲ್ಲಿ ಸೂರ್ಯನ ಶಾಖದಿಂದ ಇಡೀ ಗುಂಡಿಯ ನೀರು ಬಾಷ್ಪವಾಗಿ ಹೋಗುವುದು ಹೇಗೆ? ಇದು ಪ್ರಾಕ್ಟಿಕಲ್ ಆಗಿ ಸಾಧ್ಯವೇ ಇಲ್ಲ ಎಂದು ಹಲವು ಜನ ಬೆಳೆಗಾರರು ಹೇಳುತ್ತಾರೆ.

 ಇದಲ್ಲದೇ, ಜಿಯೊ-ಮೆಂಬ್ರೇನ್ ಶೀಟ್ ಬಳಸಬೇಕಾದರೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇದು ಬಹುವರ್ಷಗಳವರೆಗೆ ಬಾಳಿಕೆ ಕೂಡ ಬರುವುದಿಲ್ಲ, ಕೆಲವೇ ವರ್ಷಗಳಲ್ಲಿ ಹಾಳಾಗುವ ಸಾಧ್ಯತೆ ಇದೆ.

ಮಂಡಳಿಯವರು ಸೂಚಿಸುವ `ಡ್ರೈ ಪಲ್ಪರ್~ ವಿಧಾನ ಕೂಡ ಕಾರ್ಯಸಾಧುವಲ್ಲ ಎನ್ನುತ್ತಾರೆ ಅವರು.
ತೋಟದಲ್ಲಿಯೇ ತ್ಯಾಜ್ಯದ ಗುಂಡಿಯನ್ನು ನಿರ್ಮಿಸಿದರೆ ಗಬ್ಬು ವಾಸನೆ ಹರಡುತ್ತದೆ. ದಿನ ಕಳೆದಂತೆ ಈ ವಾಸನೆ ದುರ್ನಾತನವಾಗಿ ತೋಟದಲ್ಲಿ ಓಡಾಡುವುದು ಕಷ್ಟವಾಗುತ್ತದೆ ಎಂದು ಬೆಳೆಗಾರರು ಹೇಳುತ್ತಾರೆ.

ಕೆಲವು ಕಡೆ ಪ್ಲಾಸ್ಟಿಕ್ ಬಳಕೆ
ತ್ಯಾಜ್ಯದ ಗುಂಡಿಗೆ ಮೆಂಬ್ರೇನ್ ಶೀಟ್ ಅಳವಡಿಸಬೇಕೆಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು 2008ರಲ್ಲಿ ಆದೇಶ ಹೊರಡಿಸಿತ್ತು. ಅದನ್ನು ರಾಜ್ಯದ ಪರಿಸರ ಮಂಡಳಿಯು ಅನುಷ್ಠಾನಗೊಳಿಸಲು ಮುಂದಾಗಿದೆ.

ನಿಯಮಾವಳಿಯಂತೆ ಪಲ್ಪಿಂಗ್ ಘಟಕಗಳನ್ನು ಜೂನ್ 2012ರೊಳಗೆ ನಿರ್ಮಿಸುವುದಾಗಿ ಬೆಳೆಗಾರರಿಂದ ಲಿಖಿತ ಹೇಳಿಕೆಯನ್ನು ಮಂಡಳಿಯ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 595 ಪಲ್ಪಿಂಗ್ ಘಟಕಗಳು ಇದ್ದು, ಇವುಗಳಲ್ಲಿ ದೊಡ್ಡ ಬೆಳೆಗಾರರ, ಕಂಪೆನಿಗಳ ಸೇರಿದಂತೆ ಸುಮಾರು 15-16 ಘಟಕಗಳಲ್ಲಿ ಮಾತ್ರ ಇದುವರೆಗೆ ಶೀಟ್ ಅಳವಡಿಸಲಾಗಿದೆ.

`ಎಂಜೈಮ್ಸ ಚಿಕಿತ್ಸೆ~
ಡಾ.ಅನು ಕಾರ್ಯಪ್ಪ, ಡಾ.ಚಾಣಕ್ಯ, ಜಯರಾಮ ಅವರನ್ನೊಳಗೊಂಡ ವಿಜ್ಞಾನಿಗಳ ತಂಡವೊಂದು ಸಂಶೋಧನೆ ಕೈಗೊಂಡು, ಪಲ್ಪಿಂಗ್ ತ್ಯಾಜ್ಯ ನೀರನ್ನು ಸಂಸ್ಕರಿಸಲು ಎಂಜೈಮ್ಸಗಳನ್ನು ಬಳಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಎಂಜೈಮ್ಸಗಳನ್ನು ಬಳಸುವುದರಿಂದ ತ್ಯಾಜ್ಯ ನೀರಿನ ದುರ್ವಾಸನೆ ಹೊರಟು ಹೋಗುತ್ತದೆ ಹಾಗೂ ಹಾನಿಕಾರ ರಾಸಾಯನಿಕ ಪದಾರ್ಥಗಳನ್ನು ನಿರ್ನಾಮ ಮಾಡಬಹುದು. ಆದರೆ, ಈ ವಿಧಾನವನ್ನು ಪರಿಸರ ಮಂಡಳಿಯವರು ಒಪ್ಪಿಕೊಳ್ಳುತ್ತಿಲ್ಲ ಎಂದು ಕೆಲವು ಕಾಫಿ ಬೆಳೆಗಾರರು ಹೇಳುತ್ತಾರೆ.

ಪಲ್ಪಿಂಗ್ ನೀರು ಹಾನಿಕಾರಕ ಎಂದು ಎಲ್ಲಿಯೂ ರುಜುವಾತವಾಗಿಲ್ಲ. ತ್ಯಾಜ್ಯದ ನೀರನ್ನು ಗೋಡಂಬಿ, ಕರಿಮೆಣಸು ಬೆಳೆಗೆ ಉಪಯೋಗಿಸಿದರೆ ಯಾವುದೇ ಅಡ್ಡಪರಿಣಾಮ ಇಲ್ಲ ಎಂದು ಹೇಳಲಾಗುತ್ತಿದೆ. ತ್ಯಾಜ್ಯ ನೀರನ್ನು ನೀರಾವರಿಗೆ ಬಳಸುವುದಕ್ಕಾದರೂ ಅವಕಾಶ ನೀಡಲಿ ಎಂದು ಬೆಳೆಗಾರರು ಒತ್ತಾಯಿಸುತ್ತಾರೆ.

ಬೇಸತ್ತ ಬೆಳೆಗಾರರು
ಪರಿಸರ ಮಂಡಳಿಯ ನಿಯಮಾವಳಿಯಿಂದ ಬೇಸತ್ತ ಕೆಲವು ಬೆಳೆಗಾರರು ಪಲ್ಪಿಂಗ್ ಘಟಕಗಳನ್ನು ನಿಲ್ಲಿಸಿಬಿಟ್ಟಿದ್ದಾರೆ. ಕಾಫಿ ಹಣ್ಣನ್ನೇ ಕಂಪೆನಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಕಂಪೆನಿಯವರೆ ಪಲ್ಪಿಂಗ್ ಬೇಕಾದರೆ ಮಾಡಿಕೊಳ್ಳಲಿ ಎಂದು ಕಡಿಮೆ ಬೆಲೆಗೆ ಕಾಫಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಕೇಳಿಬರುತ್ತಿವೆ.

ಗ್ರಾಮಸ್ಥರ ವಿರೋಧ 
ತೋಟದ ಪಕ್ಕದ ಗದ್ದೆ ಹಾಗೂ ಬಾವಿಗೆ ಪಲ್ಪರ್ ಮಾಡಿದ ಕಲುಷಿತ ನೀರನ್ನು ಬಿಡುವುದರಿಂದ ಗಬ್ಬು ವಾಸನೆ ಬರುತ್ತದೆ, ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇದಲ್ಲದೇ ಬಾವಿಯ ನೀರನ್ನು ಕುಡಿಯಲೂ ಸಾಧ್ಯವಾಗುತ್ತಿಲ್ಲ. ಜಾನುವಾರುಗಳು ತೋಡಿನ ನೀರನ್ನು ಕುಡಿಯದ ಪರಿಸ್ಥಿತಿ ಇದೆ ಎಂದು ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ಎಮ್ಮೆಗುಂಡಿಯ ಕೃಷಿಕರು ವಿರೋಧ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.