ADVERTISEMENT

ಕೀಟ ಹತೋಟಿಗೆ ಜೀವಾಮೃತವೇ ಮದ್ದು

ಕೃಷಿ ಖುಷಿ

ಎಂ.ಎನ್.ಹೇಮಂತಕುಮಾರ್‌
Published 20 ಫೆಬ್ರುವರಿ 2014, 8:37 IST
Last Updated 20 ಫೆಬ್ರುವರಿ 2014, 8:37 IST

ವಿರಾಜಪೇಟೆ: ಸಮೀಪದ ಮೈತಾಡಿ ಗ್ರಾಮದ ಕೆ.ಎ. ಹಂಸ ಅವರಿಗೆ ಕೃಷಿ ಕುರಿತು ಚಿಕ್ಕಂದಿನಿಂದಲೂ ಆಸಕ್ತಿ. ವಿದೇಶದಲ್ಲಿದ್ದ ಇವರು ಕೃಷಿ ಮೇಲಿನ ಪ್ರೀತಿಯಿಂದಾಗಿಯೇ ಗ್ರಾಮದೆಡೆಗೆ ಮರಳಿದರು. ಆರಂಭದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದ ಇವರು ನಂತರ ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಕಥೆ ಇದಾಗಿದೆ.

1975ರಲ್ಲಿ ಯುವ ರೈತ ಸಮಾಜದ ವತಿಯಿಂದ ಕೃಷಿ ಅಧ್ಯಯನಕ್ಕಾಗಿ ಪಂಜಾಬ್‌ಗೆ ಪ್ರವಾಸ ಕೈಗೊಂಡ ತಂಡದ ಸದಸ್ಯರಲ್ಲಿ ಇವರೂ ಒಬ್ಬರು. ಅಲ್ಲಿನ ರೈತರು ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಇಳುವರಿಯನ್ನು ಪಡೆದಿದ್ದರು. ಅದರಂತೆ ಇವರೂ ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋದರು.

ಆದರೆ, ಇಂದು ಹಂಸ ಅವರು ಹೇಳುವ ಮಾತೇ ಬೇರೆ, ‘ಅಧಿಕ ಲಾಭದ ಆಸೆಯಿಂದ ರಾಸಾಯನಿಕಗಳನ್ನು ಬಳಸಿ ಭೂಮಿಯ ಮೇಲೆ ನಿರಂತರ ಶೋಷಣೆ ನಡೆಸುವ ಬದಲು ನಿಸರ್ಗದತ್ತವಾದ ಸಾವಯವ ಗೊಬ್ಬರವನ್ನು ಬಳಸುವುದರಿಂದ ನಮ್ಮನ್ನು ಪೋಷಿಸುತ್ತಿರುವ ಭೂಮಿ ತಾಯಿಯ ಒಡಲನ್ನು ಫಲವತ್ತತೆಗೊಳಿಸುವುದರ ಮೂಲಕ ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಬಹುದು’ ಎನ್ನುತ್ತಾರೆ.

ಈ ತತ್ವವನ್ನು ಕಳೆದ 4 ವರ್ಷದಿಂದಲೂ ಕಾರ್ಯಗತಗೊಳಿಸಿ ಯಶಸ್ಸನ್ನೂ ಕಂಡಿದ್ದಾರೆ. ಕೆರೆಯಿಂದ ತಂದ ಹಸಿರು ಪಾಚಿಯನ್ನು (ಅಝೋಲ) ಮನೆಯ ಬಳಿ ಬೆಳೆಸಿ ಗದ್ದೆಗೆ ಹಾಕುತ್ತಾರೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಿ ಅಧಿಕ ಇಳುವರಿ ದೊರೆಯುತ್ತದೆ. ಹಸಿರು ಪಾಚಿಯನ್ನು ಇಂಡಿಯೊಂದಿಗೆ ಮಿಶ್ರಣ ಮಾಡಿ ಹಸುವಿಗೆ ಕುಡಿಸುವುದರಿಂದ ಹಸು ದಷ್ಟ ಪುಷ್ಟವಾಗುತ್ತದೆ. ಅಲ್ಲದೆ ಹೆಚ್ಚು ಹಾಲು ಕೊಡುತ್ತದೆ. ತೋಟದಲ್ಲಿ ಟ್ಯಾಂಕ್‌ ನಿರ್ಮಿಸಿ, ಎರೆಹುಳು ಸಾಕಾಣಿಕೆ ಮಾಡಿ ಎರೆ ಗೊಬ್ಬರವನ್ನು ತಯಾರಿಸುತ್ತಿದ್ದಾರೆ.

ನಾಟಿ ಹಸುವಿನ ಸಗಣಿ, ಗಂಜಲು, ಬೆಲ್ಲ ಹಾಗೂ ಕಡಲೆ ಅಥವಾ ಯಾವುದಾದರೂ ಹಿಟ್ಟನ್ನು ಮಿಶ್ರಣ ಮಾಡಿ ಜೀವಾಮೃತ ತಯಾರಿಸಿ  ಮೂರು ದಿನಗಳ ನಂತರ ಕಾಫಿ, ಕಾಳು ಮೆಣಸು, ತರಕಾರಿ ಮುಂತಾದ ಸಸ್ಯಗಳಿಗೆ ಹಾಕುತ್ತಾರೆ. ಇದರಿಂದ ಇಳುವರಿ ಹೆಚ್ಚಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಗಿಡಗಳಿಗೆ ಯಾವುದೇ ರೋಗ ಬಾಧಿಸುವುದಿಲ್ಲ. ಸಸ್ಯಗಳಿಗೆ ಮಾರಕವಾಗಿರುವ ಕ್ರಿಮಿನಾಶಕ್ಕಾಗಿ ಅವರು ಹೇಳುವ ಮತ್ತೊಂದು ಔಷಧವೆಂದರೆ ಕೊಳಿ ಹಿಕ್ಕೆ, ಬೆಳ್ಳುಳ್ಳಿ ಹಾಗೂ ಕಾಡು ಹೊಗೆ ಸೊಪ್ಪಿನಿಂದ ತಯಾರಿಸಿದ ಮಿಶ್ರಣ.

‘ಜೀರಿಗೆ ಮುಂಡಾ’ ತಳಿ
ಕೆ.ಎ. ಹಂಸ ಅವರು ತಮ್ಮ 5 ಎಕರೆ ತೋಟದಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ, ಬಾಳೆ, ಬಗೆಬಗೆಯ ತರಕಾರಿ ಹಾಗೂ 3ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಅಲ್ಲದೆ ಜೇನು ಕೃಷಿಯಲ್ಲೂ ತೊಡಗಿದ್ದಾರೆ. ‘ಜೀರಿಗೆ ಮುಂಡಾ’ ಎನ್ನುವ ಕಾಳು ಮೆಣಸಿನ ತಳಿಯನ್ನು ತಮ್ಮ ತೋಟದಲ್ಲಿ ಬೆಳೆಸಿದ್ದಾರೆ. ಈ ತಳಿಯು ಅಡಿಕೆ ಗಿಡಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಅಲ್ಲದೆ, ಇದರ ಕಾಳು ಹೆಚ್ಚು ತೂಕವನ್ನು ಹೊಂದಿರುವುದರಿಂದ ರೈತರಿಗೆ ಅಧಿಕ ಲಾಭ. ಈ ಸಲ ಸುರಿದ ಭಾರಿ ಮಳೆಯ ಕಾರಣ ಜಿಲ್ಲೆಯ ಇತರ ಭಾಗಗಳಲ್ಲಿ ಕಾಳು ಮೆಣಸು ಸಂಪೂರ್ಣ ನಷ್ಟವಾಗಿದೆ. ಆದರೆ, ಹಂಸ ಅವರ ತೋಟದಲ್ಲಿ ಜೀರಿಗೆ ಮುಂಡಾ ತಳಿ ಉತ್ತಮ ಫಸಲನ್ನು ನೀಡಿದೆ.

ಹಂಸ ಅವರು ಸಾವಯವ ಕೃಷಿ ಆರಂಭಿಸುವುದಕ್ಕಿಂತ ಮೊದಲು, ಅಡಿಕೆಗೆ ಕೊಳೆ ರೋಗ, ಕಾಳು ಮೆಣಸಿಗೆ ಸೊರಗು ರೋಗ, ಬೆಂಕಿ ರೋಗ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ, ರಾಸಾಯನಿಕ ಗೊಬ್ಬರಗಳ ಬಳಕೆ ನಿಲ್ಲಿಸಿ ಸಾವಯವ ಗೊಬ್ಬರಗಳ ಮಾಡಿದ ನಂತರ ಯಾವುದೇ ರೋಗ ಕಾಣಿಸಿಕೊಂಡಿಲ್ಲ.

‘ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿ ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಿಂದೆ ನಮ್ಮ ಹಿರಿಯರು ವಯಸ್ಸಾದರೂ ದೈಹಿಕವಾಗಿ ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನವರಿಗೆ ಬಹಳ ಬೇಗನೆ ರಕ್ತದ ಒತ್ತಡ, ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ.

ಇದಕ್ಕೆ ಕಾರಣ, ನಾವು ಬೆಳೆಗಳಿಗೆ ಬಳಸುವ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿ ನಾಶಕಗಳೇ ಆಗಿವೆ. ಇಂದು ನಾವೂ ವಿಷವನ್ನು ತಿಂದು, ನಮ್ಮ ಮಕ್ಕಳಿಗೂ ವಿಷವನ್ನೇ ಕೊಡುತ್ತಿದ್ದೇವೆ’ ಎಂದು ನೋವಿನಿಂದ ನುಡಿಯುತ್ತಾರೆ ಹಂಸ. ಸಾವಯವ ಕೃಷಿ ಬಗ್ಗೆ ಆಸಕ್ತಿ ಇರುವ ರೈತರಿಗೂ ಅವರು ಮಾಹಿತಿ ನೀಡುತ್ತಾರೆ. ಸಾವಯವ ಕೃಷಿ ಬಗ್ಗೆ ಆಸಕ್ತಿಯಿರುವವರು ಇವರನ್ನು ಮೊ: 87623 03482 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.