ADVERTISEMENT

ಕೂತಿಯಲ್ಲಿ ಕಾಡಾನೆ ದಾಳಿ: ರೂ. 10 ಲಕ್ಷ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 6:25 IST
Last Updated 26 ಫೆಬ್ರುವರಿ 2012, 6:25 IST

ಸೋಮವಾರಪೇಟೆ: ಸಮೀಪದ ಕೂತಿ ಗ್ರಾಮದ ಸುತ್ತ ಮುತ್ತಲು ಕಾಡಾನೆ ದಾಳಿಯಿಂದಾಗಿ ಸುಮಾರು ರೂ.10 ಲಕ್ಷಕ್ಕೂ ಹೆಚ್ಚು ಮೌಲ್ಯದ ಫಸಲು ನಾಶವಾಗಿದ್ದು, ಗ್ರಾಮಸ್ಥರು ಜೀವ ಭಯದಿಂದ ತತ್ತರಿಸುತ್ತಿದ್ದಾರೆ. ಮುಂದಿನ 8 ದಿನಗಳೊಳಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಕುಂದಳ್ಳಿ ಗ್ರಾಮದ ಬಳಿ ಇದ್ದ ಆನೆಗಳು ಇದೀಗ ಕೂತಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀಡುಬಿಟ್ಟಿವೆ. ಕಳೆದ 20 ದಿನಗಳಿಂದ 2 ಮರಿಯಾನೆ ಸಹಿತ 8ಆನೆಗಳ ಹಿಂಡು ಬೀಡು ಬಿಟ್ಟಿದೆ. ಗ್ರಾಮದ ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ. ಇದೇ ಮೊದಲ ಬಾರಿಗೆ ಆನೆ ದಾಳಿಯಿಂದ ಗ್ರಾಮದ ಜನರು ಕಂಗೆಟ್ಟಿದ್ದಾರೆ.

ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿರುವ ಆನೆಗಳಿಗೆ    ಹೆದರಿ ಕೃಷಿ ಕಾರ್ಮಿಕರು ತೋಟ ಗದ್ದೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆನೆ ಭೀತಿಯಿಂದಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಮನೆ ಬಿಟ್ಟು ಹೊರಬರಲು ಹೆದರುವಂತಾಗಿದೆ. ಕೂತಿ, ಸಿಂಗನಳ್ಳಿ ಹಾಗೂ ಹೊಸಕೋಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಸದಾ ಅಡ್ಡಾಡಿಕೊಂಡಿರುತ್ತವೆ.

ಬತ್ತದ ರಾಶಿ ಬೆಟ್ಟದ ಬಳಿ ಗುರುವಾರ ಮಧ್ಯಾಹ್ನ ಕಾಡಾನೆಗಳು ಕಾಣಿಸಿಕೊಂಡು ಗ್ರಾಮಸ್ಥರಿಗೆ ಆತಂಕ ಒಡ್ಡಿವೆ. ಗ್ರಾಮದ ಬಿ.ಡಿ.ವೀರೇಶ್ ಎಂಬುವವರ ಬತ್ತದ    ಸಸಿಮಡಿಗಳು, ಎಂ.ಪಿ.ಬಸಪ್ಪ ಹಾಗೂ      ವೀರಪ್ಪ ಎಂಬುವವರ ನಾಟಿ ಮಾಡಿದ ಗದ್ದೆಗಳು, ಬಿ.ಎಸ್.ಚಿನ್ನಪ್ಪ ಎಂಬುವವರಿಗೆ ಸೇರಿದ ಬಾಳೆ ಹಾಗೂ ಅನಾನಸು, ಬಿ.ಎಸ್.ಬೆಳ್ಯಪ್ಪ ಅವರ ಬಾಳೆ ಹಾಗೂ ಏಲಕ್ಕಿ ಗಿಡಗಳು ಕಾಡಾನೆ ದಾಳಿಗೆ ನಾಶವಾಗಿವೆ. 

ಈ ಭಾಗದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ಹಾನಿಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ಗ್ರಾಮಗಳು ಹಾಸನ ಹಾಗೂ ಕೊಡಗಿನ ಗಡಿ ಪ್ರದೇಶದಲ್ಲಿ ಬರುವುದರಿಂದ ಈ ಎರಡೂ ಜಿಲ್ಲೆಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸಕ್ಕೆ ಮುಂದಾಗಬೇಕು.

 ಇಲ್ಲವಾದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಅಧಿಕವಾಗಿದೆ. ಆದ್ದರಿಂದ ಮುಂದಿನ 8 ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ,  ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.