ADVERTISEMENT

ಕೆ.ಜೆ.ಜಾರ್ಜ್‌ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:31 IST
Last Updated 7 ನವೆಂಬರ್ 2017, 8:31 IST
ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿರಾಜಪೇಟೆ ಪಟ್ಟಣದಲ್ಲಿರುವ ಯೋಧರ ಸ್ಮಾರಕದ ಬಳಿ ಸೋಮವಾರ ಜೆಡಿಎಸ್ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ ನಡೆಯಿತು
ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿರಾಜಪೇಟೆ ಪಟ್ಟಣದಲ್ಲಿರುವ ಯೋಧರ ಸ್ಮಾರಕದ ಬಳಿ ಸೋಮವಾರ ಜೆಡಿಎಸ್ ಕಾರ್ಯಕರ್ತರಿಂದ ಉಪವಾಸ ಸತ್ಯಾಗ್ರಹ ನಡೆಯಿತು   

ವಿರಾಜಪೇಟೆ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಸೋಮವಾರ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದರು.

ಪಟ್ಟಣದಲ್ಲಿನ ಯೋಧರ ಸ್ಮಾರಕದ ಬಳಿ ನಡೆದ ಧರಣಿಯಲ್ಲಿ ಮಾತನಾಡಿದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಂಕೇತ್‌ ಪೂವಯ್ಯ, ‘ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಲವಾದ ಸಾಕ್ಷಿ ಇರುವುದರಿಂದಲೇ ಸಿಬಿಐ ಸಚಿವ ಜಾರ್ಜ್‌ ಅವರ ಮೇಲೆ ಒಂದನೇ ಆರೋಪಿಯಾಗಿ ಎಫ್ಐಆರ್ ದಾಖಲಿಸಿದೆ.

ಈ ಹಿಂದೆ ರಾಜ್ಯ ಸರ್ಕಾರ ಸಿಐಡಿ ತನಿಖೆ ಆರಂಭಿಸಿದಾಗ ಅದರಿಂದ ಪಾರಾಗಬಹುದು ಎನ್ನುವ ಆಲೋಚನೆಯಿಂದ ರಾಜೀನಾಮೆ ನೀಡಿದ ಸಚಿವರು, ಇದೀಗ ಸಿಬಿಐ ತನಿಖೆ ಸಂದರ್ಭದಲ್ಲಿ ರಾಜಿನಾಮೆ ನೀಡದಿರಲು ಕಾರಣವೇನು’ ಎಂದು ಪ್ರಶ್ನಿಸಿದರು.

ADVERTISEMENT

‘ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲೆಯ ರಂಗಸಮುದ್ರಕ್ಕೆ ಬಂದು ಡಿವೈಎಸ್ಪಿ ಕುಟುಂಬಕ್ಕೆ ನೈತಿಕ ಸ್ಥೈರ್ಯ ತುಂಬಿ, ಪ್ರಕರಣ ದಾಖಲಾಗುವಂತೆ ಒತ್ತಡ ಹೇರಿದ್ದರು. ಡಿವೈಎಸ್ಪಿ ಕುಟುಂಬಕ್ಕೆ ನ್ಯಾಯ ದೊರೆಕಿಸಿಕೊಡಲು ಪಕ್ಷ ಕಟಿಬದ್ಧವಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಈವರೆಗೆ ಐದು ಉಸ್ತುವಾರಿ ಸಚಿವರು ಬಂದರೂ ಯಾವುದೇ ಅಭಿವೃದ್ಧಿ ಆಗಿಲ್ಲ. ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ 32 ಮಂದಿ ಪ್ರಾಣ ಕಳೆದುಕೊಂಡಿದ್ದರೂ ಅರಣ್ಯ ಸಚಿವರು ಗಂಭೀರವಾಗಿ ಪರಿಗಣಿಸಲಿಲ್ಲ. ಸಂಸದರು ಕೂಡ ಕೊಡಗನ್ನು ಮರೆತಿದ್ದಾರೆ’ ಎಂದು ಆರೋಪಿಸಿದರು.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷದ ಅಧ್ಯಕ್ಷ ಎಸ್.ಎಚ್.ಮತ್ತಿನ್, ಉಪಾಧ್ಯಕ್ಷ ಬಾಳೆಕುಟ್ಟಿರ ಬೋಪಯ್ಯ, ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಎಂ.ಕೆ. ಪೂವಯ್ಯ, ವಿರಾಜಪೇಟೆ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಕಾಕೋಟುಪರಂಬು ವಲಯ ಅಧ್ಯಕ್ಷ ಅಮ್ಮಂಡ ವಿವೇಕ್, ಕೆದಮುಳ್ಳೂರು ವಲಯ ಅಧ್ಯಕ್ಷ ಮಾತಂಡ ಚಂಗಪ್ಪ, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮನ್ಸೂರ್ ಅಲಿ, ಪಟ್ಟಣ ಪಂಚಾಯಿತಿ ಸದಸ್ಯೆ ನಾಗಮ್ಮ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲೋಹಿತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.