ADVERTISEMENT

ಕೊಡಗಿನಲ್ಲಿ ಕುಂದಿದ ಕಿತ್ತಳೆ ವೈಭವ

ರೋಗಬಾಧೆಯಿಂದ ಕುಗ್ಗಿದ ಇಳುವರಿ: ಬೆಳೆಗಾರರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 10:26 IST
Last Updated 11 ಜುಲೈ 2017, 10:26 IST
ಕೊಡಗಿನಲ್ಲಿ ಕುಂದಿದ ಕಿತ್ತಳೆ ವೈಭವ
ಕೊಡಗಿನಲ್ಲಿ ಕುಂದಿದ ಕಿತ್ತಳೆ ವೈಭವ   

ನಾಪೋಕ್ಲು: ಕೊಡಗು ಎಂದರೆ ತಟ್ಟನೆ ನೆನಪಾಗುವುದು ಕಿತ್ತಳೆ ಮತ್ತು ಜೇನು. ತನ್ನದೇ ಆದ ರುಚಿ, ಗಾತ್ರ, ಪರಿಮಳ ಹಾಗೂ ಬಣ್ಣದ ಮೂಲಕ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ‘ಕೊಡಗಿನ ಕಿತ್ತಳೆ’ ಈಗ ಜಿಲ್ಲೆಯಲ್ಲಿ ಕಣ್ಮರೆಯಾಗುತ್ತಿದೆ.

ಈ ಕಿತ್ತಳೆಯನ್ನು ಹಿಡಿಯಲು ಎರಡೂ ಹಸ್ತಗಳನ್ನು ಸೇರಿಸಬೇಕಾಗಿತ್ತು. ಆದರೆ, ಈಗ ಕೊಡಗಿನ ಕಿತ್ತಳೆ ದೊರೆಯುತ್ತಿದೆಯಾದರೂ, ಅದರ ಗಾತ್ರ ಸೊರಗಿದೆ. ರುಚಿಯೂ ಕಡಿಮೆಯಾಗಿದೆ. ಇದಕ್ಕೆ ‘ಗ್ರೇನಿಂಗ್‌’ ರೋಗ ಕಾರಣ.

ಅನೇಕ ಬೆಳೆಗಾರರು ತಮ್ಮ ತೋಟದಲ್ಲಿ ಕಿತ್ತಳೆ ಬೆಳೆಯುತ್ತಿದ್ದರು. ಅದನ್ನೇ ಆದಾಯದ ಮೂಲವನ್ನಾಗಿಸಿಕೊಂಡಿದ್ದರು. ಈಗ ಫಲಭರಿತ ಗಿಡಗಳನ್ನು ತೋಟಗಳಲ್ಲಿ ಅರಸುವ ಪರಿಸ್ಥಿತಿ ಬಂದಿದೆ. ಕಿತ್ತಳೆಯಲ್ಲಿ ವರ್ಷದಲ್ಲಿ ಎರಡು ಬಾರಿ ಅಂದರೆ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಫಲ ದೊರೆಯುತ್ತದೆ.

ADVERTISEMENT

ಎರಡು ದಶಕದ, ಹಿಂದೆ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಎಕರೆ ಕಾಫಿ ತೋಟದ ನಡುವೆ ಅಂತರಬೆಳೆಯಾಗಿ ಕಿತ್ತಳೆಯನ್ನು ಬೆಳೆಯಲಾಗುತ್ತಿತ್ತು. ಅಂದಾಜು ಒಂದು ಸಾವಿರ ಲಾರಿ ಲೋಡ್‌ ಕಿತ್ತಳೆಯನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ, 1999ರಲ್ಲಿ  ಕೇರಳದಿಂದ ಬಂದ ‘ಗ್ರೇನಿಂಗ್‌’ ರೋಗ ಕೇವಲ ಎರಡು ವರ್ಷದಲ್ಲಿ ಇಲ್ಲಿನ ಕಿತ್ತಳೆ ಬೆಳೆಯನ್ನು ಬಹುತೇಕವಾಗಿ ನಾಶ ಮಾಡಿತು.

ಕಿತ್ತಳೆಯನ್ನು ಆದಾಯ ತಂದುಕೊಡುವ ಬೆಳೆ ಎಂದು ಪರಿಗಣಿಸಿದವರು ಕಡಿಮೆ. ಕಾಫಿ ತೋಟಗಳಲ್ಲಿ ನೆರಳಿನ ಮರವಾಗಿ ಬೆಳೆಯುವ ಕಿತ್ತಳೆ ಬಗ್ಗೆ ಬಹುತೇಕ ಕೃಷಿಕರು ಕಾಳಜಿ ವಹಿಸದ್ದರಿಂದ ರೋಗಕ್ಕೆ ತುತ್ತಾಗುತ್ತಿವೆ. ಈ ರೋಗಕ್ಕೆ ತುತ್ತಾದ ಕಿತ್ತಳೆ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಚಿಗುರೊಡೆಯುವುದನ್ನು ನಿಲ್ಲಿಸಿ ಒಣಗಿ ಹೋಗುತ್ತವೆ.

‘ಗ್ರೇನಿಂಗ್ ರೋಗ ಈಗ ಹತೋಟಿಗೆ ಬಂದಿದ್ದರೂ ಹಣ್ಣು ಬೆಳೆಯಲು ಬೆಳೆಗಾರರು ಆಸಕ್ತರಾಗಿಲ್ಲ. ಕಾರ್ಮಿಕರ ಕೊರತೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದರೂ ಬೆಳೆಗಾರರು ಕಿತ್ತಳೆಯನ್ನು ನಿರ್ಲಕ್ಷಿಸಿದ್ದಾರೆ. ಅದರ ಬದಲಿಗೆ ಹೆಚ್ಚಿನ ಆದಾಯ ತರುತ್ತಿರುವ ಕಾಳುಮೆಣಸಿನತ್ತ ಗಮನ ಹರಿಸುತ್ತಿದ್ದಾರೆ’ ಎನ್ನುತ್ತಾರೆ ಬೆಳೆಗಾರ ಬಿದ್ದಾಟಂಡ ದಿನೇಶ್.

‘ಚೆಟ್ಟಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರ ಬೀಜದ ಬದಲು ಕಸಿ ಮೂಲಕ ರೋಗ ನಿರೋಧಕ ಶಕ್ತಿ ಇರುವ ತಳಿ ಅಭಿವೃದ್ಧಿಪಡಿಸುತ್ತಿದೆ. ಕಿತ್ತಳೆಬೆಳೆ ಪ್ರೋತ್ಸಾಹಕ್ಕೆ ತೋಟಗಾರಿಕಾ ಇಲಾಖೆಯಿಂದ ಸಹಾಯಧನವನ್ನು ನೀಡಲಾಗುತ್ತಿದೆ’ ಎಂದು ವಿಜ್ಞಾನಿ ಡಾ.ಕುರಿಯನ್‌ ತಿಳಿಸಿದ್ದಾರೆ.

ಸುರೇಶ್‌
***

ಈಗ ನಾಗಪುರ ಕಿತ್ತಳೆಯದ್ದೇ ದರ್ಬಾರು

ಜಿಲ್ಲೆಯ ವಿವಿಧೆಡೆ ರಸ್ತೆ ಬದಿಗಳಲ್ಲಿ ಜನರನ್ನು ಆಕರ್ಷಿಸುತ್ತಿರುವ ರಂಗುರಂಗಿನ ಕಿತ್ತಳೆ ಕೊಡಗಿನ ಕಿತ್ತಳೆ ಅಲ್ಲ. ಆದರೆ, ಅವು ನಾಗಪುರ ಕಿತ್ತಳೆಗಳು. ಇಲ್ಲಿನ ಕಿತ್ತಳೆಗೆ ರೋಗ ಬಂದ ನಂತರ, ಅವುಗಳ ಜಾಗವನ್ನು ನಾಗಪುರ ಕಿತ್ತಳೆ ಆವರಿಸಿಕೊಂಡಿದೆ. ಆದ್ದರಿಂದ ಈಗ ಜಿಲ್ಲೆಯಲ್ಲಿ ವಿಶೇಷ ಹೊಳಪನ್ನು ಹೊಂದಿರುವ ನಾಗಪುರ ಕಿತ್ತಳೆಯದ್ದೇ ದರ್ಬಾರು ನಡೆಯುತ್ತಿದೆ.

ಈ ಹಿಂದೆ ದೊರೆಯುತ್ತಿದ್ದ ಕೊಡಗಿನ ಕಿತ್ತಳೆ ಹಣ್ಣಿನ ಸೊಗಡು ಮತ್ತು ಬಾಳಿಕೆ ನಾಗಪುರ ಕಿತ್ತಳೆಯನ್ನು ಮೀರಿಸುವಂತದ್ದು ಎಂದು ಇಲ್ಲಿನ ಬೆಳೆಗಾರರು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.