ಮಡಿಕೇರಿ: ಪ್ರತಿಯೊಂದು ಕಡುಬಡವರ (ಬಿಪಿಎಲ್) ಕುಟುಂಬಗಳಿಗೆ ಕಳೆದ ತಿಂಗಳು ಮಾರ್ಚ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ `ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆ~ ಕೊಡಗಿನಲ್ಲಿ ಇದುವರೆಗೆ ಪೂರ್ಣಗೊಂಡಿಲ್ಲ.
ಜಿಲ್ಲೆಯ ಸುಮಾರು 300 ಗ್ರಾಮಗಳ 17,300 ಮನೆಗಳನ್ನು ಈ ಯೋಜನೆಯಡಿ ಗುರುತಿಸಲಾಗಿತ್ತು. ಜಿಲ್ಲೆಯಲ್ಲಿ 2009ರ ಆಗಸ್ಟ್‌ನಿಂದ ಆರಂಭಗೊಂಡ ಯೋಜನೆಯಡಿ ನಿಗದಿತ ಸಮಯದೊಳಗೆ (2012ರ ಮಾರ್ಚ್) ಕೇವಲ 10,000 ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗಿದ್ದು, 7,300 ಮನೆಗಳು ಬಾಕಿ ಉಳಿದಿವೆ.
ಇದುವರೆಗೆ ಯೋಜನೆ ತಲುಪದ ಗ್ರಾಮಗಳಲ್ಲಿ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಗ್ರಾಮವೂ ಒಂದು. ಇಲ್ಲಿನ ರಸ್ತೆಯ ಬದಿಗಳಲ್ಲಿ ವಿದ್ಯುತ್ ಕಂಬಗಳನ್ನು ಇಳಿಸಲಾಗಿದ್ದು, ನೆಡುವ ಕೆಲಸ ಇನ್ನೂ ಆರಂಭವಾಗಿಲ್ಲ. ಕೆಲವೆಡೆ ಕಂಬಗಳನ್ನು ನೆಟ್ಟಿದ್ದರೂ ವಿದ್ಯುತ್ ತಂತಿಗಳನ್ನು ಹಾಕಿಲ್ಲ.
ಯೋಜನೆಯ ಅಂತಿಮ ಗಡುವು ಮುಗಿದಿರುವ ಕಾರಣ ಇನ್ನು ತಮ್ಮ ಗ್ರಾಮಕ್ಕೆ ವಿದ್ಯುತ್ ಬೆಳಕು ಹರಿಯುವುದು ಅನುಮಾನ ಎಂದು ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರ ಎದುರು ಅಳಲು ತೋಡಿಕೊಂಡರು.
ಮುಕ್ಕೋಡ್ಲು ಗ್ರಾಮದ ಚಿತ್ರಣವನ್ನು ಜಿಲ್ಲೆಯ ಇನ್ನೂ ಕೆಲವು ಗ್ರಾಮಗಳಲ್ಲಿ ಕಾಣಬಹುದಾಗಿದೆ.
`ದೇಶಕ್ಕೆ ಸ್ವಾತಂತ್ರ್ಯ ಬಂದು ಅರವತ್ತು ವರ್ಷಗಳಾದರೂ ಇದುವರೆಗೆ ನಮ್ಮ ಹಳ್ಳಿಗಳಿಗೆ ವಿದ್ಯುತ್ ಬಂದಿರಲಿಲ್ಲ. ಇತ್ತೀಚೆಗಷ್ಟೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ರೂಪಿಸಿದ್ದ ಈ ಯೋಜನೆಯೂ ನಮ್ಮಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿತ್ತು. ಈಗಲೂ ನಮ್ಮಲ್ಲಿ ವಿದ್ಯುತ್ ಹರಿಯಲಿಲ್ಲವೆಂದರೆ ಇನ್ಯಾವಾಗ ?~ ಎಂದು ಗ್ರಾಮಸ್ಥರಾದ ಕಾಳಚಂಡ ರವಿ ತಮ್ಮಯ್ಯ, ನಂದೀರ ಸುಖೇಶ್ ಮಂದಣ್ಣ, ಕಾಳಚಂಡ ಟಿ.ಕಾರ್ಯಪ್ಪ, ಮೋರ್ಕಂಡ ಸುಬ್ರಮಣಿ, ಕಾಳಚಂಡ ಸುಜು ವಿಜಯಕುಮಾರ್ ಮತ್ತಿತರರು ಹತಾಶರಾಗಿ ನುಡಿದರು.
ವಿದ್ಯುತ್ ಕಂಬಗಳನ್ನು ನೆಡಲು ಹಾಗೂ ವಿದ್ಯುತ್ ತಂತಿಗಳನ್ನು ಹಾಕಲು ಸ್ಥಳೀಯರು ಸಾಕಷ್ಟು ಸಹಕರಿಸುತ್ತಿದ್ದಾರೆ. ಆದರೆ, ಸೆಸ್ಕ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ತಮ್ಮಂದಿಗೆ ಸಹಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋರ್ಟ್‌ಗೆ ಮೊರೆ
ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಕಾಳಚಂಡ ರವಿ ತಮ್ಮಯ್ಯ ಹೇಳಿದರು.
ಯೋಜನೆ ಇನ್ನೊಂದು ವರ್ಷಕ್ಕೆ ಮುಂದುವರಿಕೆ- ಸೆಸ್ಕ್ ವಿಶ್ವಾಸ
ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ದಿವಾಕರ ಪ್ರತಿಕ್ರಿಯಿಸಿ, ಇದುವರೆಗೆ ಜಿಲ್ಲೆಯಲ್ಲಿ ಎಲ್ಲ ಕಡುಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗದ ಕಾರಣ ಯೋಜನೆಯ ಕಾಲಾವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಕಾರಾತ್ಮಕ ಉತ್ತರ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 200ಕ್ಕಿಂತಲೂ ಹೆಚ್ಚು ಗ್ರಾಮಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದ್ದು, ಬಾಕಿ 55 ಗ್ರಾಮಗಳು ಮಾತ್ರ ಉಳಿದಿವೆ ಎಂದು ಅವರು ಹೇಳಿದರು.
ರಾಜ್ಯದ ಬಹುತೇಕ ಕಡೆ ಈ ಯೋಜನೆ ಪೂರ್ಣಗೊಂಡಿದೆ. ಆದರೆ, ಕೊಡಗಿನಲ್ಲಿ ಮಾತ್ರ ನಿಧಾನವಾಗಿದೆ. ಮುಖ್ಯವಾಗಿ ಇಲ್ಲಿ ಬೆಟ್ಟ-ಗುಡ್ಡ ಹಾಗೂ ಅರಣ್ಯ ಪ್ರದೇಶದಿಂದ ಸುತ್ತುವರಿದಿರುವುದರಿಂದ ಹಾಗೂ ಜನವಸತಿ ಬಿಡಿಬಿಡಿಯಾಗಿ ವಾಸ ಇರುವ ಕಾರಣ ನಿಧಾನವಾಗಿದೆ. ಹೀಗಾಗಿ ಯೋಜನಾ ವೆಚ್ಚ ಕೂಡ ಹೆಚ್ಚಾಗಿದೆ.
ಮೊದಲಿಗೆ ರೂ. 38.39 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಕೇಂದ್ರದಿಂದ ಒಪ್ಪಿಗೆ ಕೂಡ ಬಂದಿತ್ತು. ತದನಂತರ ಯೋಜನಾವೆಚ್ಚವನ್ನು ಪರಿಷ್ಕರಿಸಿದಾಗ ಮೊತ್ತವು ರೂ. 55 ಕೋಟಿಗೆ ತಲುಪಿತ್ತು. ಈಗ ವ್ಯತ್ಯಾಸವಾಗಿರುವ ರೂ. 17 ಕೋಟಿಗೆ ಸರ್ಕಾರ ಇದುವರೆಗೆ ಒಪ್ಪಿಕೊಂಡಿಲ್ಲ. ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.