ADVERTISEMENT

ಕೊಡಗು ಪ್ರತ್ಯೇಕ ರಾಜ್ಯ ಬೇಡಿಕೆ: ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 8:15 IST
Last Updated 21 ಜುಲೈ 2012, 8:15 IST

ಮಡಿಕೇರಿ: ಕರ್ನಾಟಕದಲ್ಲಿ ವಿಲೀನಗೊಂಡ ನಂತರ ಕೊಡಗಿನ ಹಿತಾಸಕ್ತಿಯನ್ನು ನಿರ್ಲಕ್ಷಿಸಿಕೊಂಡು ಬರಲಾಗುತ್ತಿದ್ದು, ಇದನ್ನು ಖಂಡಿಸಿ ಯಾರಾದರೂ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಿದರೆ ಅದಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಕೊಡಗು ಪಶ್ಚಿಮ ಘಟ್ಟ ಮೂಲ ನಿವಾಸಿಗಳ ವಿಮೋಚನಾ ಸಮಿತಿಯ ಪ್ರಧಾನ ಸಂಚಾಲಕ ರವಿ ತಮ್ಮಯ್ಯ ಹೇಳಿದರು.  

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1956 ರಲ್ಲಿ ಕೊಡಗು ಕರ್ನಾಟಕದೊಂದಿಗೆ ವಿಲೀನವಾಗುವಾಗ ಮಾಡಿಕೊಂಡಿದ್ದ ಹಲವಾರು ಒಪ್ಪಂದಗಳನ್ನು                   ಮುರಿಯುವ ಮೂಲಕ ಕೊಡಗಿಗೆ ಮಾರಕವಾಗುವ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೊಡಗಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಸಿಗುವುದರಿಂದ ಒಳ್ಳೆಯದಾಗುವುದಾದರೆ ಜಿಲ್ಲೆಯ ಎಲ್ಲರೂ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.

ಪ್ರತ್ಯೇಕ ರಾಜ್ಯದ ಬೇಡಿಕೆಯನ್ನಿಟ್ಟಿರುವ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ರಾಜೀನಾಮೆ ಕೇಳಿರುವ ಕರ್ನಾಟಕ ರಕ್ಷಣಾ ವೇದಿಕೆಯ  ನಿಲುವನ್ನು ಅವರು ಖಂಡಿಸಿದರು.

ದೇಶದ ರಕ್ಷಣೆಗೆ ಜಿಲ್ಲೆಯ ಹಲವಾರು ಗಣ್ಯರು ಪ್ರಾಣ ಲೆಕ್ಕಿಸದೇ ಹೋರಾಟ ನಡೆಸಿದ ಈ ನಾಡಿನಲ್ಲಿ ಅರಣ್ಯ ಭೂಮಿಯನ್ನು ರಕ್ಷಿಸ್ದ್ದಿದು, ಈ ಕರವೇ ಕಾರ್ಯಕರ್ತರು ಹಾಗೂ ಸಾಹಿತಿಗಳು ಅರಣ್ಯ ರಕ್ಷಣೆಯ ಬಗ್ಗೆ ಜಿಲ್ಲೆಯ ಜನತೆಗೆ ಪಾಠ ಹೇಳುವ ಬದಲು ದೇಶದ ಗಡಿ ಭಾಗದಲ್ಲಿ ಹೋರಾಟ ನಡೆಸಲಿ ಎಂದು ತಾಕೀತು ಮಾಡಿದರು.

ಜಿಲ್ಲೆಗೆ ಪ್ರತ್ಯೇಕ ಸಂಸದರಿಲ್ಲ. ಇರುವ ಸಂಸದರಿಗೆ ಇಲ್ಲಿನ ನಿವಾಸಿಗಳ ಸಮಸ್ಯೆಯ ಬಗ್ಗೆ ಅರಿವಿಲ್ಲ. ಜನತೆಯ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಸದರ ಅಂಗಳ ಎಂಬ ಕಾರ್ಯಕ್ರಮ ಕೇವಲ ರಾಜಕೀಯ ನಾಟಕವಾಗಿದ್ದು, ಸಂಸದರು ಯಾವುದೇ ಸಮಸ್ಯೆ ಪರಿಹರಿಸಿಲ್ಲ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಳಚಂಡ ಬೆಳಿಯ್ಯಪ್ಪ, ಐಲಪಂಡ ಪೂಣಚ್ಚ, ಕಾರೇರ ಕಾಳಪ್ಪ ಹಾಜರಿದ್ದರು.

ಸಿಎನ್‌ಸಿ ಬೆಂಬಲ
ಮಡಿಕೇರಿ: ಪ್ರತ್ಯೇಕ ಕೊಡಗು ರಾಜ್ಯದ ಬಗ್ಗೆ ಪ್ರಸ್ತಾಪಿಸಿರುವ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿಕೆಯನ್ನು ಸ್ವಾಗತಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಇದೊಂದು ಕೊಡಗಿನ ಪರ ಕಾಳಜಿಯಿಂದ ಕೂಡಿದ ಹೇಳಿಕೆಯಾಗಿದೆ ಎಂದು ಹೇಳಿದರು. 

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಬಗ್ಗೆಸರ್ಕಾರ ನಿರ್ಲಕ್ಷ ತೋರಿರುವುದರಿಂದ ಮನನೊಂದು ಬೋಪಯ್ಯ ಈ ಹೇಳಿಕೆಯನ್ನು ನೀಡಿದ್ದಾರೆ. 90ರ ದಶಕದಲ್ಲಿ 10 ವರ್ಷಗಳ ಕಾಲ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಸಿಎನ್‌ಸಿ ಹೋರಾಟ ನಡೆಸಿತ್ತು ಎನ್ನುವುದನ್ನು ಅವರು ಸ್ಮರಿಸಿದರು.

 ಈಗ ತಮ್ಮ ಸಂಘಟನೆಯು ಈ ಹೋರಾಟವನ್ನು ಕೈಬಿಟ್ಟಿದ್ದು, ಬೋಪಯ್ಯ ಅವರು ಹೋರಾಟವನ್ನು ಕೈಗೆತ್ತಿಕೊಂಡರೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಜುಲೈ 27ರಂದು ಪ್ರತಿಭಟನೆ
ನೂತನ ರಾಷ್ಟ್ರಪತಿಗಳು ಅಧಿಕಾರ ಸ್ವೀಕರಿಸಿದ ನಂತರ ಜಮ್ಮಾ ಮಾಲೀಕತ್ವವನ್ನು ದೃಢೀಕರಿಸುವಂತೆ ಒತ್ತಾಯಿಸಿ ಜು.27 ರಂದು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟಿಸಲಾಗುವುದು ಎಂದು ಎನ್.ಯು. ನಾಚಪ್ಪ ತಿಳಿಸಿದರು.

ಜಮ್ಮಾ ಭೂ ಹಿಡುವಳಿ ಮಾಲೀಕತ್ವವನ್ನು ದೃಢೀಕರಿಸಬೇಕೆಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳ ಸಚಿವಾಲಯಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಕಲಿಯಂಡ ಪ್ರಕಾಶ್, ಕಲಿಯಂಡ ಮಿನಾ, ಮನವಟ್ಟಿರ ಜಗದೀಶ್, ಇತರರು ಹಾಜರಿದ್ದರು. 

ಪ್ರತ್ಯೇಕ ರಾಜ್ಯ ಬೇಡ: ಕರವೇ

ಕುಶಾಲನಗರ: ರಾಜ್ಯದ ಅವಿಭಾಜ್ಯ ಅಂಗವಾಗಿರುವ ಕೊಡಗು ಜಿಲ್ಲೆಯ ಪ್ರತ್ಯೇಕತೆಯ ಕೂಗಿನ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ರೂಪಿಸಲಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಶುಕ್ರವಾರ ಇಲ್ಲಿ ತಿಳಿಸಿದರು.

ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯು ರಾಜ್ಯದ ಒಂದು ಭಾಗವಾಗಿದೆ. ಪ್ರತ್ಯೇಕತೆಯ ಪರ ಧ್ವನಿ ಎತ್ತಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೇಳಿದ್ದಾರೆ ಎಂಬ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ನಂತರ ಬೋಪಯ್ಯ ತಾವು ಕೊಡಗು ಪ್ರತ್ಯೇಕತೆ ಬಗ್ಗೆ ಸ್ಪಷ್ಟನೆ ನೀಡಿರುವುದನ್ನು ವೆಂಕಟೇಶ್ ಪೂಜಾರಿ ಸ್ವಾಗತಿದರು.

ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಕೊಡಗಿನ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಬಿ.ಎ.ದಿನೇಶ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಟಿ.ಆರ್.ಪ್ರಭುದೇವ್, ಜಿಲ್ಲಾ ಸಂಚಾಲಕ ಗೋವಿಂದರಾಜ್ ದಾಸ್,  ಮುಖಂಡರಾದ ಸತೀಶ್, ಮಣಿಕಂಠ, ರಾಮೇಗೌಡ ಇತರರು ಇದ್ದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT