ವಿರಾಜಪೇಟೆ: ಕೊಡವರ 42 ಪ್ರಾಚೀನ ನಾಡುಗಳನ್ನು ‘ಕೊಡವ ಲ್ಯಾಂಡ್’ ಎಂದು ಘೋಷಿಸುವವರೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್‌ನ ಸಂಚಾಲಕ ಎನ್.ಯು. ನಾಚಪ್ಪ ಬುಧವಾರ ಇಲ್ಲಿ ಹೇಳಿದರು. ಇಲ್ಲಿನ ಗಡಿಯಾರ ಕಂಬದ ಬಳಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ನಾಗಾಲ್ಯಾಂಡ್, ಗೂರ್ಖಾ ಲ್ಯಾಂಡ್ ಹಾಗೂ ಉಲ್ಫಾ ಸಂಘಟನೆಗಳು ರಕ್ತಪಾತದ ಮೂಲಕ ಸ್ವಾಯತ್ತತೆ ಪಡೆಯಲು ಹವಣಿಸುತ್ತಿವೆ.ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಬೆದರಿಕೆಯನ್ನೂ ಹಾಕುತ್ತಿವೆ. ಆದರೆ, ಸಿಎನ್‌ಸಿ ಸಂಘಟನೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
‘ಕೊಡವ ಲ್ಯಾಂಡ್’ಗೆ ಸ್ವಾಯತ್ತತೆ ನೀಡುವುದರಿಂದ ಕೊಡವರ ಭಾಷೆ, ಆಚಾರ- ವಿಚಾರ, ಸಂಸ್ಕೃತಿ ಶಾಶ್ವತವಾಗಿ ಉಳಿಯಲು ಸಾಧ್ಯ. ಸಂವಿಧಾನದ 6ನೇ ಪರಿಚ್ಛೇದದಲ್ಲಿ ನಮೂದಿಸಿರುವಂತೆ ಕೊಡವರ 42 ಪ್ರಾಚೀನ ನಾಡುಗಳಿಗೆ ಸ್ವಾಯತ್ತತೆ ದೊರೆಯಬೇಕಿದೆ. ಸಂವಿಧಾನದ ಪ್ರಕಾರ, ದೇಶದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಬೇಕು. ವಿದೇಶದಲ್ಲಿಯೂ ಈ ಪದ್ಧತಿ ಜಾರಿಯಲ್ಲಿದೆ. ಅಲ್ಲಿಯೂ ಸ್ವಾಯತ್ತತೆಗೆ ಅವಕಾಶ ಇದೆ. ಆದರೆ, ಭಾರತದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ರಕ್ಷಿಸಬೇಕಾದ ದುಃಸ್ಥಿತಿ ಬಂದೊದಗಿದೆ. ಅಲ್ಪಸಂಖ್ಯಾತರೆಂದರೆ ಮುಸ್ಲಿಂ ಸಮುದಾಯವಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯನ್ನು ಉದ್ದೇಶಿಸಿ ಸಂಘಟನೆಯ ಕಾರ್ಯಕರ್ತರಾದ ಎ.ಲೊಕೇಶ್, ಸುರೇಶ್ ನಾಣಯ್ಯ, ಬಿ.ರವಿ, ಎಂ.ಪ್ರೇಮ್, ಕೋಡೀರ ಪ್ರವೀಣ್, ಕೆ. ಸುಮಂತ್ ಪೊನ್ನಣ್ಣ, ಬಿ.ಬಿದ್ದಪ್ಪ, ಬಿ.ರಾಜಾ ಮತ್ತಿತರರು ಮಾತನಾಡಿದರು. ಸಾರ್ವಜನಿಕ ಸಭೆಗೆ ಮೊದಲು ಕಾರ್ಯಕರ್ತರು ಇಲ್ಲಿನ ಗಡಿಯಾರ ಕಂಬದ ಬಳಿ ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿದರು. ನಾಚಪ್ಪ ಮಾತನಾಡಿದರು. ಚಂಬಾಂಡ ಜಯಂತ್ ಸ್ವಾಗತಿಸಿ, ನಿರೂಪಿಸಿದರು.
ಪೊಲೀಸರು- ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಸಿಎನ್‌ಸಿ ಕಾರ್ಯಕರ್ತರು ಸಭೆಗೆ ಮೊದಲು ಇಲ್ಲಿನ ಗಡಿಯಾರ ಕಂಬದ ಬಳಿ ರಸ್ತೆ ತಡೆ ನಡೆಸಿ ಮಾನವ ಸರಪಳಿಗೆ ಮುಂದಾದಾಗ ಎಸ್‌ಐ ಅನೂಪ್ ಮಾದಪ್ಪ ಕಾರ್ಯಕರ್ತರನ್ನು ತಡೆದರು. ಇದರಿಂದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವರ್ತನೆಯಿಂದ ರೋಸಿ ಹೋದ ಇಬ್ಬರು ಕಾರ್ಯಕರ್ತರು ರಸ್ತೆಯಲ್ಲಿ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆಯದಿರುವದಕ್ಕೆ ಅನೂಪ್ ಮಾದಪ್ಪ ರಸ್ತೆ ತಡೆ ಹಾಗೂ ಮಾನವ ಸರಪಳಿಗೆ ವಿರೋಧ ವ್ಯಕ್ತಪಡಿಸಿದರು. ಸಂಘರ್ಷದ ಮಧ್ಯೆಯೇ ಕಾರ್ಯಕರ್ತರು ಸಭೆ ನಡೆಸಿ ಪ್ರತಿಭಟನೆ ಮುಕ್ತಾಯಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.