ADVERTISEMENT

`ಗ್ರಾಮೀಣ ಪರಿಸರದಲ್ಲಿ ಮೌಲಿಕ ಶಿಕ್ಷಣ ಸಾಧ್ಯ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:55 IST
Last Updated 27 ಡಿಸೆಂಬರ್ 2012, 7:55 IST

ಗೋಣಿಕೊಪ್ಪಲು: ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಗಿಡ ಮರ, ಪ್ರಾಣಿ ಪಕ್ಷಿಗಳೊಂದಿಗೆ ಬದುಕುವ ಮಕ್ಕಳಿಗೆ ನಿಜವಾದ ಪರಿಸರ ಜ್ಞಾನ ಮತ್ತು ಮಾನವೀಯ ಗುಣ ಇರುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ  ಹೇಳಿದರು.

ಸಮೀಪದ ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಆತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಗುರುಹಿರಿಯರಿಗೆ ಗೌರವ ಕೊಡುವುದನ್ನು ಮನೆಯಲ್ಲಿಯೇ ಮಕ್ಕಳು ಕಲಿಯುತ್ತಾರೆ. ಬದುಕಿನ ಅನುಭವ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಹೆಚ್ಚಿರುತ್ತದೆ. ಎಳೆಯ ಪ್ರಾಯದಲ್ಲಿಯೇ ಎಲ್ಲ ಕಷ್ಟಸುಖಗಳಿಗೆ ಹೊಂದಿಕೊಂಡು ಬದುಕುವುದನ್ನು ಕಲಿಯುತ್ತಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಬಿ.ಭಾಗ್ಯಲಕ್ಷ್ಮಿ ಮಾತನಾಡಿ  6ರಿಂದ 14ವರ್ಷದೊಳಗಿನ ಯಾವುದೇ  ಮಕ್ಕಳು ಶಾಲೆಯಿಂದ ವಂಚಿತರಾಗದಂತೆ ಜನಪ್ರತಿನಿಧಿಗಳು ಹೆಚ್ಚಿನ ಹಮನ ಹರಿಸಬೇಕು.  ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಓದಿನಲ್ಲಿ ಮುಂದೆ ಬರಬೇಕು ಎಂದರು.

ಸರ್ವಶಿಕ್ಷಣ ಅಭಿಯಾನದಲ್ಲಿ ಬರುವ ಚಿಣ್ಣರ ಜಿಲ್ಲಾ ದರ್ಶನ, ಕೃಷಿ ವೃತ್ತಿ ದರ್ಶನ ಮೊದಲಾದ ಯೋಜನೆಗಳನ್ನು ಶಿಕ್ಷಣ ಇಲಾಖೆ  ರೂಪಿಸಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಶಾಲಾಭಿವೃದ್ಧಿ ಪದನಿಮಿತ್ತ ಸದಸ್ಯ ಕೆ.ಟಿ.ಬಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪೃಥ್ಯು, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಟಾಟು ಮೊಣ್ಣಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ಎಚ್.ಎಸ್. ನಂಜಮ್ಮ ಮಾತನಾಡಿದರು.

ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಕಾಳಪಂಡ ಸುಧೀರ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎಸ್. ಸುಬ್ಬಯ್ಯ, ದೇವಕಿ, ವಿ ಎಸ್ ಎಸ್ ಎನ್ ಅಧ್ಯಕ್ಷ ಸಿ.ಎಂ.ಅಪ್ಪಯ್ಯ, ದಾನಿಗಳಾದ ದರ್ಶನ್ ಬೆಳ್ಳಿಯಪ್ಪ, ಸಿ.ಕೆ.ಪ್ರದೀಪ್ ಪೂವಯ್ಯ, ಬಿ.ಬಿ.ವಾಸಪ್ಪ. ಕೆ.ಕೆ.ನಾಗು ಹಾಜರಿದ್ದರು.  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪಿ.ಬಿ.ಬೋಜಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಿರುನೆಲ್ಲಿಮಾಡ ಜೀವನ್, ಪೈಕಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮಲ್ಲೆಂಗಡ ಪ್ರಜ್ಞಾ ಪೂಣಚ್ಚ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ತಿರುನೆಲ್ಲಿಮಾಡ ಜೀವನ್  ಸ್ವಾಗತಿಸಿದರು. ಶಿಕ್ಷಕಿ ತುಳಸಿ ಮಾಲಾ ವಂದಿಸಿದರು. ಬೆಳಿಗ್ಗೆ ನಡೆದ  ಕ್ರೀಡಾ ಕೂಟವನ್ನು ದಾನಿ ಚೆಪ್ಪುಡೀರ ನಾಣಯ್ಯ ಉದ್ಘಾಟಿಸಿದರು. ಸಂಜೆ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.