ADVERTISEMENT

ಚರ್ಚೆಗೆ ಬಂದ ಜಮ್ಮಾ, ರಸ್ತೆ ದುರಸ್ತಿ, ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 6:00 IST
Last Updated 25 ಏಪ್ರಿಲ್ 2013, 6:00 IST

ಮಡಿಕೇರಿ: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಾದ ಮಡಿಕೇರಿ ಹಾಗೂ ವಿರಾಜಪೇಟೆಗೆ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳು ಒಟ್ಟಾಗಿ ಮಾಧ್ಯಮದ ಎದುರು  ತಮ್ಮ ಅಹವಾಲುಗಳನ್ನು ಮಂಡಿಸಿದ ಪ್ರಸಂಗ ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆಯಿತು.

ಮಡಿಕೇರಿ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿಯ ಅಪ್ಪಚ್ಚು ರಂಜನ್, ಕಾಂಗ್ರೆಸ್ಸಿನ ಕೆ.ಎಂ. ಲೋಕೇಶ್, ಜೆಡಿಎಸ್‌ನ ಜೀವಿಜಿಯ, ಪಕ್ಷೇತರರಾಗಿರುವ ಡಾ.ಬಿ.ಸಿ. ನಂಜಪ್ಪ, ವಿರಾಜಪೇಟೆ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಕೆ.ಜಿ. ಬೋಪಯ್ಯ, ಕಾಂಗ್ರೆಸ್ಸಿನ ಬಿ.ಟಿ. ಪ್ರದೀಪ್ ಹಾಗೂ ಪಕ್ಷೇತರರಾಗಿರುವ  ಸೋಮೆಯಂಡ ಡಿ. ಉದಯ ಅವರು ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

ಆರಂಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು, ಕಳೆದ ಬಾರಿ ಚುನಾವಣೆಯಲ್ಲಿ ನಾವು ಭರವಸೆ ನೀಡಿದಂತೆ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಲು ಈ ಬಾರಿಯೂ ನಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಹಲವು ವರ್ಷಗಳ ಕಾಲ ಸಮಸ್ಯೆಯಾಗಿದ್ದ ಜಮ್ಮಾ ಸಮಸ್ಯೆಯನ್ನು ಇತ್ಯರ್ಥಪಡಿಸಿರುವುದು ನಮ್ಮ ಸರ್ಕಾರದ ದೊಡ್ಡ ಸಾಧನೆ. ಅತಿ ಹೆಚ್ಚು ಸುಮಾರು 1,500 ಕೋಟಿ ರೂಪಾಯಿ ಅನುದಾನವನ್ನು ಜಿಲ್ಲೆಗೆ ತಂದಿದ್ದೇವೆ. ಜಿಲ್ಲೆಯ ಬಹುತೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎಂದರು.

ಚುನಾವಣೆ ಹತ್ತಿರ ಬಂದಿರುವ ಕಾರಣ ಕಳೆದ 6 ತಿಂಗಳಿನಿಂದ ಈಚೆಗೆ ರಸ್ತೆ ಅಭಿವೃದ್ಧಿಗೆ ಕೈಹಾಕಿದ್ದೀರಿ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಲ್ಲ? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಬೋಪಯ್ಯ, `ಕೇವಲ ಆರೋಪ ಮಾಡಬಾರದು. ಅಂಕಿ ಅಂಶಗಳ ದಾಖಲೆ ನೀಡಲಿ. ರಸ್ತೆ ಅಭಿವೃದ್ಧಿ ಕಾರ್ಯವು ಹಂತಹಂತವಾಗಿ ಕಳೆದ 5 ವರ್ಷಗಳಿಂದಲೂ ನಡೆಯುತ್ತ ಬಂದಿದೆ. ಪೊನ್ನಂಪೇಟೆ- ಕುಟ್ಟ, ಮಡಿಕೇರಿ- ಕುಟ್ಟ, ವಿರಾಜಪೇಟೆ- ಬೈಂದೂರು, ರಸ್ತೆ ಅಭಿವೃದ್ಧಿ ಮೊದಲಿನಿಂದಲೇ ನಡೆಯುತ್ತಿದೆ' ಎಂದರು.

`ನಾನು ಶಾಸಕನಾಗುವ ಮೊದಲು ವಿರಾಜಪೇಟೆಯಲ್ಲಿ ಬಹಳ ನೀರಿನ ಸಮಸ್ಯೆ ಇತ್ತು. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ, ಈಗ ಅಂತಹ ಯಾವ ಪರಿಸ್ಥಿತಿಯಿಲ್ಲ. ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕಾಗಿದೆ ಎನ್ನುವುದು ನಿಜ. ಅದರ ಬಗ್ಗೆ ಗಮನ ಹರಿಸುತ್ತೇವೆ' ಎಂದರು.

ಅಪ್ಪಚ್ಚು ರಂಜನ್ ಮಾತನಾಡಿ, ಜಿಲ್ಲೆಯ ಒಟ್ಟು ಅಭಿವೃದ್ಧಿಗೆ ಶ್ರಮಿಸಲಾಗಿದೆ. ಮಡಿಕೇರಿ (ಕುಂಡಾ ಮೇಸ್ತ್ರಿ) ಹಾಗೂ ಸೋಮವಾರಪೇಟೆಗೆ ಕುಡಿಯುವ ನೀರು ಪೂರೈಕೆಗೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಕಂದಾಯ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಿ.ಟಿ. ಪ್ರದೀಪ್ ವಿರೋಧ ಪಕ್ಷವಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರ ಬಗ್ಗೆ ಮಾತನಾಡಿದರು. `ಜಿಲ್ಲೆಯ ಹಿತಾಸಕ್ತಿಗೆ ಧಕ್ಕೆ ಬಂದಾಗ ನಾವೆಲ್ಲ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಕಳೆದ ವರ್ಷ ಜಿಲ್ಲೆಯ ರಸ್ತೆಗಳು ಅಧ್ವಾನವಾಗಿದ್ದಾಗ ಮಡಿಕೇರಿಯಲ್ಲಿ ಬೃಹತ್ ಹೋರಾಟ ಮಾಡಿದೆವು. ಗೋಣಿಕೊಪ್ಪದಿಂದ ವಿರಾಜಪೇಟೆಯವರೆಗೆ ಪಾದಯಾತ್ರೆ ಮಾಡ್ದ್ದಿದೇವೆ' ಎಂದು ವಿವರಣೆ ನೀಡಿದರು.

ಕೊಡಗಿನಲ್ಲಿ ಎಷ್ಟೋ ಪಡಿತರ ಚೀಟಿಗಳು ರದ್ದಾಗಿದ್ದವು, ಬಿಪಿಎಲ್/ ಎಪಿಎಲ್/ ಅಂತ್ಯೋದಯ ಕಾರ್ಡ್‌ದಾರರಿಗೆ ನೀಡಲಾಗುತ್ತಿದ್ದ ಅಕ್ಕಿ, ಸೀಮೆಎಣ್ಣೆ ಪ್ರಮಾಣ ಕಡಿಮೆಯಾದುದರ ಬಗ್ಗೆ ಹೋರಾಟ ಮಾಡಿದ್ದೆವು. ಸರ್ಕಾರದ ವೈಫಲ್ಯಗಳ ವಿರುದ್ಧ ಜನರಿಗೆ ಅರಿವು ಮೂಡಿಸಿದ್ದೇವೆ ಎಂದು ಹೇಳಿದರು.
ಬಿ.ಎ. ಜೀವಿಜಯ ಮಾತನಾಡಿ, ಆಡಳಿತ ಪಕ್ಷದ ಸಾಧನೆ ತೃಪ್ತಿ ತಂದಿಲ್ಲ. ಇವರು ಹೇಳುವ 1,500 ಕೋಟಿ ಅನುದಾನದಲ್ಲಿ ಶೇ 80ರಷ್ಟು  ಕೇಂದ್ರ ಸರ್ಕಾರದ ಅನುದಾನವಿದೆ. ಜನರ ತೆರಿಗೆ ಹಣವನ್ನೇ ಸರ್ಕಾರ ನೀಡುತ್ತಿದೆ. ಇದರಲ್ಲಿ ಶಾಸಕರ ಹೆಚ್ಚುಗಾರಿಕೆ ಏನಿಲ್ಲ ಎಂದು ನುಡಿದರು.

ಹಿಂದೆ ನಾನು ಅರಣ್ಯ ಸಚಿವನಾಗಿದ್ದಾಗ, ಕಾಫಿ ಬೆಳೆಗಾರರಿಗೆ ತೆರಿಗೆಯಿಂದ ವಿನಾಯಿತಿ ಕೊಡಿಸಿದ್ದೆ. ಆದರೆ, ಈ ಸರ್ಕಾರದಲ್ಲಿ ವಿಶೇಷವಾಗಿ ಜಿಲ್ಲೆಯಲ್ಲಿ ಭ್ರಷ್ಟಾಚಾರ, ಮರಳು ದಂಧೆ, ಎಗ್ಗಿಲ್ಲದೇ ನಡೆದಿದೆ. ಟೆಂಡರ್ ಕಾಮಗಾರಿ ಹಂಚಿಕೆಯಲ್ಲಿ ಗುತ್ತಿಗೆದಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡುವೆ ನಂಟಿದೆ ಎಂದು ಅವರು ಆರೋಪಿಸಿದರು.

ಕೆ.ಎಂ. ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಕೇವಲ ರಸ್ತೆ ಸಮಸ್ಯೆ ಇಲ್ಲ. ಸಿ-ಡಿ ಲ್ಯಾಂಡ್ ಸಮಸ್ಯೆ, ಗಿರಿಜನರ ಸಮಸ್ಯೆ ಇದೆ. ಆದರೆ, ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಕೇಂದ್ರದ ಕಾಂಗ್ರೆಸ್ ಸರ್ಕಾರವು ರೈಲು ಮಾರ್ಗ ನಿರ್ಮಾಣ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ಕೊಡಗಿಗೆ ನೀಡಿದೆ ಎಂದರು.

ಡಾ.ಬಿ.ಸಿ. ನಂಜಪ್ಪ ಮಾತನಾಡಿ, `ಕೊಡಗಿನ ನೆಲ, ಜಲ, ಪ್ರಕೃತಿಯನ್ನು ಸಂರಕ್ಷಿಸಲು ಯಾವ ರಾಜಕಾರಣಿಗಳೂ ಮುಂದಾಗುತ್ತಿಲ್ಲ. ಎಲ್ಲರೂ ವೋಟ್ ಬ್ಯಾಂಕ್ ಆಸೆಗಾಗಿ ಮೌನ ವಹಿಸಿದ್ದಾರೆ. ಕೊಡಗನ್ನು ರಕ್ಷಿಸುವ ದೃಷ್ಟಿಯಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ' ಎಂದರು.

ಸೋಮೆಯಂಡ ಡಿ. ಉದಯ ಮಾತನಾಡಿ, ಕೊಡಗಿನ ರಸ್ತೆಗಳು ಹಾಳಾಗಿವೆ. ಇವುಗಳನ್ನು ಸರಿಪಡಿಸಲು ಇಷ್ಟು ಸಮಯ ಬೇಕೆ? ಮುಂದಿನ ದಿನಗಳಲ್ಲಿ ವಲಸೆ ಸಮಸ್ಯೆ ಬೃಹದಾಕಾರವಾಗಿ ಬೆಳೆಯಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯ ಅನಂತ ಶಯನ್, ಪ್ರೆಸ್ ಕ್ಲಬ್ ಉಳ್ಳಿಯಡ ಪೂವಯ್ಯ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಪತ್ರಿಕಾ ಭವನ ಟ್ರಸ್ಟ್ ಸದಸ್ಯ ಮನು ಶೆಣೈ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.