ADVERTISEMENT

ಜನಸಂಪರ್ಕ ಸಭೆಯಲ್ಲಿ ತೀವ್ರ ಚರ್ಚೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 6:15 IST
Last Updated 20 ಸೆಪ್ಟೆಂಬರ್ 2011, 6:15 IST
ಜನಸಂಪರ್ಕ ಸಭೆಯಲ್ಲಿ ತೀವ್ರ ಚರ್ಚೆ
ಜನಸಂಪರ್ಕ ಸಭೆಯಲ್ಲಿ ತೀವ್ರ ಚರ್ಚೆ   

ಗೋಣಿಕೊಪ್ಪಲು: ಕಾಡಾನೆ ಹಾವಳಿ, ಹದಗೆಟ್ಟ ರಸ್ತೆ, ವಿದ್ಯುತ್ ಸಮಸ್ಯೆ ಮೊದಲಾದವು ಸೋಮವಾರ ಬಾಳೆಲೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ  ತೀವ್ರ ಚರ್ಚೆಗೆ ಒಳಪಟ್ಟವು.

 ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂ ಡಿದ್ದ ಗ್ರಾಮಸ್ಥರು ಬಾಳೆಲೆ ಮತ್ತು ಸುತ್ತಮುತ್ತಲಿನ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿ ಬಗ್ಗೆ ಮೊದಲಿಗೆ ಪ್ರಸ್ತಾಪಿಸಿದ ಆರ್‌ಎಂಸಿ ಮಾಜಿ ಅಧ್ಯಕ್ಷ ಅಳೆಮೇಂಗಡ ಬೋಸ್ ಮಂದಣ್ಣ ಕಾಡಾನೆ ಹಾವಳಿಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಕಾಡಾನೆಗಳು ಮನುಷ್ಯರನ್ನೆ  ಬೇಟೆಯಾಡುತ್ತಿವೆ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕಿಂತ ಕಾಡಾನೆಗಳ ಪ್ರಮಾಣ ಹೆಚ್ಚಾಗಿದೆ. ವರ್ಷಕ್ಕೆ 20 ರಿಂದ 30 ಆನೆಗಳು  ಹೆಚ್ಚುತ್ತಿವೆ. ಇವುಗಳನ್ನು ಹಿಡಿದು  ಕೇರಳ ಮತ್ತಿತರ ಅರಣ್ಯ ಪ್ರದೇಶಗಳಿಗೆ ಕಳಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಂಜನ್ ಚಂಗಪ್ಪ ಮಾತನಾಡಿ ಅರಣ್ಯ ಇಲಾಖೆಗೆ ಆನೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ  ಜನತೆಗೆ ಬಂದೂಕು ಹಿಡಿದು  ನಿಯಂತ್ರಿಸಲು ಅನುಮತಿ ನೀಡಿ ಎಂದು ಒತ್ತಾಯಿಸಿದರು.

  ಬಾಳೆಲೆ ಮತ್ತು ಗೋಣಿಕೊಪ್ಪಲು ರಸ್ತೆ ತೀರ ಹದಗೆಟ್ಟಿದೆ. ಹೊಂಡ ಬಿದ್ದ ರಸ್ತೆಗಳಲ್ಲಿ  ವಾಹನ ಓಡಿಸುವುದು ಸವಾಲಿನ ಕೆಲಸ. ಇದರಿಂದ  ವಾಹನ ಗಳು ಹಾಳಾಗುವುದಲ್ಲದೆ ಅಪಘಾತಗಳು ಸಂಭವಿ ಸುತ್ತಿವೆ. ರಸ್ತೆ ಕಿರಿದಾಗಿದ್ದು ಚರಂಡಿಗಳ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ಗ್ರಾಮಸ್ಥರು ದೂರಿದರು.

 ರಸ್ತೆ ಪಕ್ಕದ ತೋಟದ ಮಾಲೀಕರು ಚರಂಡಿ ಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಬಿಡಿಸಿ ರಸ್ತೆ ಅಗಲೀಕರಣ ಮಾಡಬೇಕು. ರಸ್ತೆ ಹೊಂಡವನ್ನು ಮುಚ್ಚಿ ದುರಸ್ತಿಗೊಳಿಸಬೇಕು ಎಂದು ರವಿ ಕುಶಾಲಪ್ಪ ಅವರಿಗೆ ಮನವಿ ಮಾಡಿದರು.

 ಕೃಷಿ ಅಧಿಕಾರಿಗಳು ಬತ್ತದ ತಳಿ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಬಾಳೆಲೆ ವ್ಯಾಪ್ತಿಗೆ ತುಂಗಾ ತಳಿ ನೀಡಿದ್ದು ಇದು ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಬಿತ್ತನೆ ಬೀಜಗಳನ್ನು ನೀಡುವ  ಮುನ್ನ ಆಯಾ ಪ್ರದೇಶಕ್ಕೆ ಹೊಂದುವ ತಳಿ ನೀಡಬೇಕು. ಬೆಳೆದ ಬತ್ತವನ್ನು ಗೋದಾಮಿನಲ್ಲಿ ಶೇಖರಿಸಿ ಇಡುವ  ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಿರಂತರ ವಿದ್ಯುತ್ ವ್ಯತ್ಯಯದಿಂದ ನಿಟ್ಟೂರು, ಬಾಳೆಲೆ, ಪೊನ್ನಪ್ಪಸಂತೆ ಗ್ರಾಮಗಳಿಗೆ ತುಂಬ ತೊಂದರೆ ಯಾಗಿದೆ. ರಾಜಾಪುರದ ರಾಜೀವ್ ಗಾಂಧಿ ವನ್ಯಜೀವಿ ವಿಭಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರು ವಿದ್ಯುತ್ ಸಂಪರ್ಕದಿಂದ ವಂಚಿತ ರಾಗಿದ್ದಾರೆ. ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದು ಎಂ. ಕಾರ್ಯಪ್ಪ ದೂರಿದರು.

  ಲೈನ್‌ಮೆನ್‌ಗಳ ಕೊರತೆ ಇದ್ದು ವಿದ್ಯುತ್ ಮಾರ್ಗ ದುರಸ್ತಿ ಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಾ ಗುತ್ತಿದೆ. ಜತೆಗೆ ಇರುವ ನೌಕರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅಧ್ಯಕ್ಷ ರವಿ ಕುಶಾಲಪ್ಪ  ಮುಂದಿನ ನಾಲ್ಕು ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಡೋಂಗಿ ಪರಿಸರವಾದಿಗಳಿಂದ ಪರಿಸರ  ಸೂಕ್ಷ್ಮ ತಾಣ ಬಂದಿದೆ. ಇದರ ವಿರುದ್ಧ ಪ್ರತಿ ಯೊಬ್ಬರು ಹೋರಾಟ ನಡೆಸುವುದು ಅನಿವಾರ್ಯ ಎಂದು  ಹೇಳಿದರು .

 ಜಿ.ಪಂ.ಸದಸ್ಯೆ ಶಕುಂತಲಾ ರವೀಂದ್ರ, ತಾ.ಪಂ.ಸದಸ್ಯ ಜೆ.ಕೆ.ರಾಮು,  ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ ಕೋಡಿಪಾಳ್ಯ, ತಾ.ಪಂ.  ಕಾರ್ಯನಿರ್ವಾಹಣಾಧಿಕಾರಿ ಶಂಕರಪ್ಪ ನಾಯ್‌ಕೋಡ್, ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ಅಡ್ಡೆಂಗಡ ಪೊನ್ನಮ್ಮ, ಪೊನ್ನಪ್ಪಸಂತೆ ಗ್ರಾ.ಪಂ.ಅಧ್ಯಕ್ಷ ಕುಶಾಲಪ್ಪ, ನಿಟ್ಟೂರು ಗ್ರಾ.ಪಂ.ಅಧ್ಯಕ್ಷ ಗಣೇಶ್, ಪಿಡಿಒ ರಾಕೇಶ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.