ವಿರಾಜಪೇಟೆ: ಸಮೀಪದ ಮೈತಾಡಿಯಲ್ಲಿ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಳ್ಳುವ ಹಂತ ತಲುಪಿದೆ. ಶಾಲೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮೇಲ್ಛಾವಣಿ ಸೋರುತ್ತಿದೆ.
ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಅನೇಕ ಗ್ರಾಮೀಣ ಪ್ರತಿಭೆಗಳಿಗೆ 125 ವರ್ಷಗಳಿಂದ ಶಿಕ್ಷಣ ಭಾಗ್ಯ ಕಲ್ಪಿಸಿ, ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ. ಈಚೆಗೆ ಬೇರೆ ಬೇರೆ ಕಾರಣದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೂ, ಗ್ರಾಮಕ್ಕೆ ಈ ಶಾಲೆಯ ಅಗತ್ಯತೆ ಇದೆ. ಆದರೆ, ಅನೇಕ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಈ ಶಾಲೆಯೇ ಇಂದು ಕುಸಿಯುವ ಹಂತ ತಲುಪಿರುವುದು ಮಾತ್ರ ದುರಂತ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಹಿರಿಯರು ಗ್ರಾಮೀಣ ಪ್ರದೇಶದಲ್ಲೂ ಶಾಲೆ ಸ್ಥಾಪಿಸಿ ಸಾಮಾಜಿಕ ಕಳಕಳಿ ತೋರಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಕುಸಿದು ಸರ್ಕಾರಿ ಶಾಲೆಗಳೆಂದರೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಕಾಲದಲ್ಲಿ ಇರುವ ಶಾಲಾ ಕಟ್ಟಡವನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ವಿಷಾದನೀಯ.
ಶಾಲೆಯಲ್ಲಿ ಸುಮಾರು 45 ವಿದ್ಯಾರ್ಥಿಗಳು 1ರಿಂದ 7ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ಮೂವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯ 3 ಕೊಠಡಿಗಳು ದುಸ್ಥಿತಿಗೆ ತಲುಪಿದ್ದು, ಕುಸಿಯುವ ಹಂತದಲ್ಲಿದೆ. ಗೋಡೆಯಲ್ಲಿ ಕಾಣಿಸಿಕೊಂಡಿರುವ ಬಿರುಕು ದಿನೆೇದಿನೆೇ ದೊಡ್ಡದಾಗುತ್ತಿದ್ದು, ಮಣ್ಣಿನ ಗೋಡೆಯಾಗಿರುವುದರಿಂದ ಯಾವ ಕ್ಷಣವಾದರೂ ಬೀಳುವ ಸ್ಥಿತಿಯಲ್ಲಿದೆ. ಮೇಲ್ಛಾವಣಿಯ ಮರದ ಪಟ್ಟಿಗಳು ಕಿತ್ತು ಹೋಗಿರುವುದರಿಂದ ಸೋರುತ್ತಿದೆ. ಕಟ್ಟಡ ಕುಸಿಯುವ ಹಂತ ತಲುಪಿರುವುದರಿಂದ ಶಾಲೆಯ ಮೂರು ಕೊಠಡಿ ನಿರುಪಯುಕ್ತವಾಗಿದೆ.
ಹಿಂದೆ ಸಹ ಶಾಲೆಯ ಕಟ್ಟಡ ದುಸ್ಥಿತಿಗೆ ತಲುಪಿದ್ದರಿಂದ 2013ರಲ್ಲಿ ತಾಲ್ಲೂಕು ಪಂಚಾಯಿತಿಯಿಂದ ₨ 50 ಸಾವಿರ ಹಾಗೂ ಜಿಲ್ಲಾ ಪಂಚಾಯಿತಿಯ ₨್1 ಲಕ್ಷ ಅನುದಾನದಲ್ಲಿ 2 ಕೊಠಡಿಗಳು ಹಾಗೂ ಸಭಾಂಗಣ ದುರಸ್ತಿಯಾಗಿದೆ. ಆದರೆ, ಇದೀಗ ಮತ್ತೆ ಮೂರು ಕೊಠಡಿಗಳು ದುಸ್ಥಿತಿಗೆ ತಲುಪಿವೆ.
ಅಧಿಕಾರಿಗಳು ಇಲ್ಲವೇ ಜನಪ್ರತಿನಿಧಿಗಳು ಸ್ಪಂದಿಸಿ ಸಕಾಲದಲ್ಲಿ ಅನುದಾನ ದೊರೆಯುವಂತೆ ಮಾಡಿದರೆ ಕಟ್ಟಡ ಉಳಿಸಬಹುದು. ಆದರಿಂದ ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಹಿರಿಯರು ಕಟ್ಟಿ ಬೆಳೆಸಿದ ಗ್ರಾಮೀಣ ಶಾಲೆ ಉಳಿಸಿಕೊಳ್ಳಬೇಕಾಗಿದೆ. ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳೆೇ ಈ ಶಾಲೆಯಲ್ಲಿ ಓದುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಯಾವ ತೊಂದರೆ ಬರದಂತೆ ನೋಡಿಕೊಳ್ಳವಲ್ಲಿ ಮುತುವರ್ಜಿವಹಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳು ಕಾಳಜಿ ವಹಿಸಲಿ
ಶಾಲಾ ಕೊಠಡಿ ಕುಸಿಯುವ ಹಂತಕ್ಕೆ ಬಂದಿದ್ದು, ದುರಸ್ಥಿ ವಿಚಾರವಾಗಿ ನಾವು ಸ್ಥಳಿಯ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಹಾಗೂ ಈಚೆಗೆ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕು.
– ಬಾಳೆಕುಟ್ಟಿರ ಮಂದಣ್ಣ, ಮೈತಾಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಶೀಘ್ರ ದುರಸ್ತಿ
ಅಧಿಕಾರಿಗಳಿಗೆ ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಸರ್ವ ಶಿಕ್ಷಣ ಅಭಿಯಾನದಡಿ ಅನುದಾನ ಒದಗಿಸಲು ಕೋರಿದ್ದು, ಶೀಘ್ರ ಕೊಠಡಿ ದುರಸ್ತಿಯಾಗಲಿದೆ.
-ಕಾಂತಿ ಬೆಳ್ಯಪ್ಪ, ಸ್ಥಳಿಯ ಜಿ.ಪಂ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.