ADVERTISEMENT

ನಗರಸಭೆ ಚುನಾವಣೆ; ಸಿದ್ಧತೆ ಆರಂಭ

ಶ್ರೀಕಾಂತ ಕಲ್ಲಮ್ಮನವರ
Published 9 ಡಿಸೆಂಬರ್ 2013, 8:59 IST
Last Updated 9 ಡಿಸೆಂಬರ್ 2013, 8:59 IST

ಮಡಿಕೇರಿ: ಹಲವು ಅಡೆ–ತಡೆಗಳ ನಂತರ ಮಡಿಕೇರಿ ನಗರಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆ ಎದುರಿಸಲು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಇತರ ಎಲ್ಲ ಪಕ್ಷಗಳು ಸಿದ್ಧತೆ ಆರಂಭಿಸಿವೆ.

ಈಗಾಗಲೇ ಜೆಡಿಎಸ್‌ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಸದ್ಯದಲ್ಲಿಯೇ ಪ್ರಕಟಿಸಲಿವೆ. ಈ ಪಕ್ಷಗಳ ಜೊತೆ ಇದೇ ಮೊದಲ ಬಾರಿಗೆ ನಗರಸಭೆ ಚುನಾವಣಾ ಕಣಕ್ಕೆ ಎಸ್‌ಡಿಪಿಐ, ಸಮಾಜವಾದಿ ಪಕ್ಷಗಳು ಕೂಡ ಪ್ರವೇಶಿಸಿವೆ. ಇದಲ್ಲದೇ ಪಕ್ಷೇತರರು ಕೂಡ ಚುನಾವಣಾ ಕಣಕ್ಕೆ ಧುಮಕಲಿದ್ದಾರೆ.

ಹಿಂದೆಂದಿಗಿಂತಲೂ ಈ ಬಾರಿ ಚುನಾವಣೆಯು ತೀವ್ರ ಸ್ಪರ್ಧೆ ಕಾಣಲಿದೆ. ಪ್ರತಿಯೊಂದು ವಾರ್ಡ್‌ ಕನಿಷ್ಠ 4– 5 ಅಭ್ಯರ್ಥಿಗಳು ಸ್ಪರ್ಧಿಸುವ ಕಾರಣ, ತುರುಸಿನ ಪೈಪೋಟಿ ನಡೆಯುವುದಂತೂ ಖಚಿತ.

ಕಳೆದ ಬಾರಿ ಮಡಿಕೇರಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿದ ಪರಿಣಾಮ 23 ವಾರ್ಡ್‌ಗಳಿದ್ದನ್ನು 31 ವಾರ್ಡ್‌ಗಳಿಗೆ ಹೆಚ್ಚಿಸಲಾಗಿತ್ತು. ಕೇವಲ 33,000 ಜನಸಂಖ್ಯೆ ಹೊಂದಿರುವ ಪುಟ್ಟ ನಗರಕ್ಕೆ 31 ವಾರ್ಡ್‌ಗಳ ಅವಶ್ಯಕತೆ ಇಲ್ಲ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇದರ ಪರಿಣಾಮವಾಗಿ ಪುನಃ ವಾರ್ಡ್‌ಗಳ ಸಂಖ್ಯೆಯು 23ಕ್ಕೆ ಇಳಿದಿದೆ.

ಮಹಿಳೆಯರಿಗೆ ಮೀಸಲು:  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ 50ರಷ್ಟು ಮಹಿಳೆಯರಿಗೆ ಮೀಸಲು ಘೋಷಿಸಿದ ನಂತರ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ನಗರಸಭೆ ಚುನಾವಣೆ ಇದಾಗಿದೆ. 23 ವಾರ್ಡ್‌ಗಳಲ್ಲಿ 12 ವಾರ್ಡ್‌ಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ ಮೀಸಲು ಪ್ರಕಟಿಸಲಾಗಿದೆ.

ಹೀಗಾಗಿ ಮಹಿಳಾ ಅಭ್ಯರ್ಥಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ ಸೂಕ್ತ ಮಹಿಳಾ ಅಭ್ಯರ್ಥಿಗಳಿಗೆ ಎಲ್ಲ ಪಕ್ಷಗಳು ಹುಡುಕಾಟ ನಡೆಸಿವೆ. ಹಲವು ಕಡೆ ಜಾತಿ ಆಧಾರಿತ (ಎಸ್‌ಸಿ–ಎಸ್‌ಟಿ, ಓಬಿಸಿ) ಮಹಿಳಾ ಮೀಸಲು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹುಡುಕುವುದು ಕಷ್ಟವಾಗಿ ಪರಿಣಮಿಸುತ್ತಿದೆ. ಸಾಮಾನ್ಯ ಮಹಿಳಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗೆ ಕೊರತೆಯೇನು ಇಲ್ಲ.

ಹಲವು ವಾರ್ಡ್‌ಗಳಲ್ಲಿ ಈಗಾಗಲೇ ಅಭ್ಯರ್ಥಿಗಳು ಚುನಾವಣಾ ಪ್ರಚಾರವನ್ನು ಆರಂಭಿಸಿ ಬಿಟ್ಟಿದ್ದಾರೆ. ಮತದಾರ ತನ್ನ ಒಲವನ್ನು ಡಿ. 22ರಂದು ವ್ಯಕ್ತಪಡಿಸಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT