ADVERTISEMENT

ನೀರಿನ ಕೊರತೆ: ವಿದ್ಯುತ್ ಉತ್ಪಾದನೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 8:44 IST
Last Updated 3 ಜೂನ್ 2013, 8:44 IST

ನಾಪೋಕ್ಲು: ಕೊಡಗಿನ ಗಡಿಯಾದ ಕರಿಕೆ ಸಮೀಪದ ಚೆತ್ತುಕಾಯದಲ್ಲಿ ಖಾಸಗಿ ಸಂಸ್ಥೆಯೊಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹರಿಯುವ ಹೊಳೆ ನೀರಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿ ಪ್ರಾರಂಭಿಸಿದ ವಿದ್ಯುತ್ ಉತ್ಪಾದನಾ ಘಟಕ ನೀರಿನ ಕೊರತೆಯಿಂದ ಸ್ಥಗಿತಗೊಂಡಿದೆ. ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಮಳೆಯಾಗಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣಕ್ಕೆ ವಿದ್ಯುತ್ ಸರಬರಾಜುಗೊಳಿಸುತ್ತಿದ್ದ ಈ ಘಟಕವು ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇದಕ್ಕೆ ನೀರು ಪೂರೈಸಲು ನಿರ್ಮಿಸಿದ ಕೃತಕ ಕಾಲುವೆಗಳು ನೀರಿಲ್ಲದೆ ಭಣಗುಡುತ್ತಿದೆ. ವರ್ಷದ 12 ತಿಂಗಳೂ ಹರಿಯುವ  ಜಲರಾಶಿಯನ್ನು ನಂಬಿ ಪ್ರಾರಂಭಿಸಿದ  ಉದ್ಯಮ ನೀರಿನ ಕೊರತೆಯಿಂದ  ತೊಂದರೆಯಲ್ಲಿ ಸಿಲುಕಿದೆ. ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 23 ಜನ ಸಿಬ್ಬಂದಿ ಈಗ ಈ ಘಟಕದ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದಾರೆ.

ಪ್ರಕೃತಿ ಸೌಂದರ್ಯಕ್ಕೆ, ತಂಪಾದ ವಾತಾವರಣಕ್ಕೆ, ಹೆಸರುವಾಸಿಯಾದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಲಮೂಲಗಳು ಬತ್ತುತ್ತಿವೆ. ಕರಿಕೆಯಲ್ಲಿ ಮಳೆಗಾಲದಲ್ಲಿ ಭೋರ್ಗರೆಯುತ್ತಿದ್ದ ಜಲಧಾರೆಗಳು ಬತ್ತಿವೆ. ಕಳೆದ ವರ್ಷಕ್ಕಿಂತ ಶೇ 40ರಷ್ಟು ನೀರಿನ ಕೊರತೆ ಈ ವರ್ಷ ಎದುರಾಗಿದೆ. ಕಳೆದ ಮೂರು ತಿಂಗಳಿನಿಂದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನುತ್ತಾರೆ ವಿದ್ಯುತ್ ಉತ್ಪಾದನಾ ಘಟಕದ ವ್ಯವಸ್ಥಾಪಕ ಶಿವಶಂಕರ್ ಬಿರಾದರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.