ADVERTISEMENT

ಭ್ರಷ್ಟಾಚಾರಿಗಳಿಗೆ ಜೀವಾವಧಿಗಿಂತ ಕಠಿಣ ಶಿಕ್ಷೆಯಾಗಬೇಕು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 7:15 IST
Last Updated 16 ಏಪ್ರಿಲ್ 2011, 7:15 IST
ಭ್ರಷ್ಟಾಚಾರಿಗಳಿಗೆ ಜೀವಾವಧಿಗಿಂತ ಕಠಿಣ ಶಿಕ್ಷೆಯಾಗಬೇಕು
ಭ್ರಷ್ಟಾಚಾರಿಗಳಿಗೆ ಜೀವಾವಧಿಗಿಂತ ಕಠಿಣ ಶಿಕ್ಷೆಯಾಗಬೇಕು   

ಮಡಿಕೇರಿ: ‘ವಿಶ್ವದಲ್ಲಿಯೇ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಚಾರಿತ್ರಿಕವಾಗಿ ಅತ್ಯಂತ ಸಂಪದ್ಭರಿತವಾಗಿರುವ ಭಾರತ ದೇಶಕ್ಕೆ ಎಂದಿಗೂ ದಾರಿದ್ರ್ಯ ಅಂಟಿಲ್ಲ. ಆದರೆ, ಭಾರತೀಯರಲ್ಲಿ ದಾರಿದ್ರ್ಯವಿದೆ. ಭ್ರಷ್ಟಾಚಾರವೇ ಇದಕ್ಕೆ ಮುಖ್ಯ ಕಾರಣ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದರೆ ಭ್ರಷ್ಟಾಚಾರಿಗಳಿಗೆ ಜೀವಾವಧಿಗಿಂತಲೂ ಕಠಿಣವಾದ ಶಿಕ್ಷೆ ವಿಧಿಸುವಂತಹ  ಕಾನೂನು ಜಾರಿಗೆ ತರಬೇಕಾಗಿದೆ’ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಶುಕ್ರವಾರ ಇಲ್ಲಿ ಒತ್ತಾಯಿಸಿದರು.

ಭಾರತ್ ಸ್ವಾಭಿಮಾನ ಸಂಘಟನೆ ಹಾಗೂ ಪತಂಜಲಿ ಯೋಗ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಯೋಗ ಹಾಗೂ ಜನ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಲೋಕಾಯುಕ್ತದಂತಹ ‘ಬುಸುಗುಟ್ಟುವ’ ಸಂಸ್ಥೆಗಳನ್ನು ಸ್ಥಾಪಿಸಿದರೆ ಸಾಲದು. ಲೋಕಾಯುಕ್ತ ಎಂಬುದು ಪೂತ್ಕರಿಸುವ ಸರ್ಪವೇ ಹೊರತು ಕಚ್ಚುವುದಿಲ್ಲ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರಿಗಳಿಗೆ ಜೀವಾವಧಿ ಶಿಕ್ಷೆಗಿಂತಲೂ ಕಠಿಣವಾದ ಅಂದರೆ, ಗಲ್ಲುಗೇರಿಸುವಂತಹ ಶಿಕ್ಷೆ ವಿಧಿಸಬೇಕಾಗಿದೆ. ಅಲ್ಲದೆ, ಜನರಿಂದ ಲಂಚ ಸ್ವೀಕರಿಸುವ ಅಧಿಕಾರಿಗಳಿಂದ ಹಣ ವಾಪಸು ಕೊಡಿಸಲು ಜನ ಲೋಕಪಾಲ್ ಮಸೂದೆಯಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

‘ದೇಶದಲ್ಲಿ ಆರ್ಥಿಕ ಭ್ರಷ್ಟಾಚಾರವೇ ಶೇ 99ರಷ್ಟಿದೆ. ಈ ಹಿನ್ನೆಲೆಯಲ್ಲಿ 500 ಹಾಗೂ 1000 ರೂಪಾಯಿಗಳ ಮುಖಬೆಲೆಯ ನೋಟುಗಳ ಬಳಕೆಯನ್ನು ಸರ್ಕಾರ ವಾಪಸು ತೆಗೆದುಕೊಳ್ಳಬೇಕು. ನಮ್ಮ ರಾಜಕಾರಣಿಗಳು ದೇಶವನ್ನು ಲೂಟಿ ಮಾಡಿ ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ ಸುಮಾರು ಒಂದು ಸಾವಿರ ಲಕ್ಷ ಕೋಟಿ ರೂಪಾಯಿಗಳನ್ನು ವಾಪಸು ತರಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬಾಬಾ ರಾಮ್‌ದೇವ್ ಮನವಿ ಮಾಡಿದರು.

ಭ್ರಷ್ಟ, ರೋಗ ಮುಕ್ತ ಭಾರತ ನಿರ್ಮಾಣ ಗುರಿ: ‘ಭಾರತವನ್ನು ರೋಗ ಹಾಗೂ ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಭಾರತ್ ಸ್ವಾಭಿಮಾನ ಸಂಘಟನೆ ಮೂಲಕ ದೇಶಾದ್ಯಂತ ಒಂದು ಲಕ್ಷ ಕಿ.ಮೀ. ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದ 20 ಕೋಟಿ ಯುವ ಜನರ ಸಹಕಾರದೊಂದಿಗೆ ಸಮೃದ್ಧವಾದ ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಭಾರತೀಯ ಸ್ವಾಭಿಮಾನ ಸಂಘಟನೆಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೊಡಗಿನ ಕುಶಾಲನಗರ ತಲುಪುವ ಮೂಲಕ ಯಾತ್ರೆ 70 ಸಾವಿರ ಕಿ.ಮೀ. ದೂರ ಸಾಗಿ ಬಂದಂತಾಗಿದೆ. ಗೋವಾ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಮೂಲಕ ಜೂನ್ 1ರಂದು ಈ ಯಾತ್ರೆ ಕೊನೆಗೊಳ್ಳಲಿದೆ. ಆನಂತರ ದೇಶದ ರಾಜಧಾನಿ ನವದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ಒಂದು ಲಕ್ಷ ಜನರ ನೆರವಿನೊಂದಿಗೆ ನಿರಶನ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 10 ಕೋಟಿ ಜನರ ಸಹಿ ಸಂಗ್ರಹಿಸಲಾಗಿದೆ’ ಎಂದು ಬಾಬಾ ರಾಮ್‌ದೇವ್ ತಿಳಿಸಿದರು.

‘ರೋಗ, ನಶೆ, ಹಿಂಸೆ, ಅಜ್ಞಾನರಹಿತ ದೇಶ ನಿರ್ಮಾಣ ಹಾಗೂ ಸಾಮಾಜಿಕ, ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ ಈ ಯಾತ್ರೆಯ ಮುಖ್ಯ ಉದ್ದೇಶಗಳಲ್ಲೊಂದು’ ಎಂದು ಯೋಗ ಗುರು ಹೇಳಿದರು.

ಕೊಡಗು ಬಣ್ಣನೆ: ‘ಜೀವನದಿ ಕಾವೇರಿಯ ಉಗಮ ಸ್ಥಾನವಾದ ಕೊಡಗು ಪುಣ್ಯ ಭೂಮಿ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯನವರಂತಹ ವೀರಸೇನಾನಿಗಳನ್ನು ದೇಶಕ್ಕೆ ನೀಡಿದ ವೀರಭೂಮಿ. ಪ್ರತಿ ಮನೆ-ಮನೆಗಳಿಂದಲೂ ರಾಷ್ಟ್ರ ಸೇವೆಗೆ ಯೋಧರನ್ನು ಕಳಿಸಿಕೊಟ್ಟ ಪ್ರಭಾವಿ ಹಾಗೂ ಆಧ್ಯಾತ್ಮ ಹಿನ್ನೆಲೆಯಿರುವಂತಹ ಭೂಮಿ’ ಎಂದು ಅವರು ಬಣ್ಣಿಸಿದರು.

‘ನಮ್ಮ ಆಹಾರ ಹಾಗೂ ವಿಚಾರಗಳೆರಡರಲ್ಲಿಯೂ ಹಿಂಸಾ ಸ್ವರೂಪವಿದೆ. ಒತ್ತಡಗಳಿಂದ ಜನ ರಕ್ತದೊತ್ತಡ, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಯೋಗವೊಂದೇ ಪರಿಹಾರ. ನಾನೇನೂ ದೇವರಲ್ಲ. ಸಾಮಾನ್ಯ ಮನುಷ್ಯ. ಆದರೆ, ಯೋಗದಿಂದ ನಾವೆಲ್ಲಾ ರೋಗದಿಂದ ಮುಕ್ತರಾಗಬಹುದು ಎಂಬುದನ್ನು ದೇಶದ 121 ಕೋಟಿ ಜನರನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜವಾಬ್ದಾರಿಯಿಂದ ಹೇಳಿಕೆ ನೀಡುತ್ತಿದ್ದೇನೆ’ ಎಂದರು.

‘ಭಾರತದಲ್ಲಿನ ಬಡತನ, ನಕ್ಸಲೀಯತೆ, ಭ್ರಷ್ಟಾಚಾರವನ್ನು ಕೊನೆಗಾಣಿಸಬೇಕಾಗಿದೆ. ನಮ್ಮ ಆಹಾರ ಪದ್ಧತಿಯಲ್ಲೂ ನಾವು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ನಾವು ಯಾವುದನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲವೋ ಅದನ್ನು ಕೊಲ್ಲುವ ಹಕ್ಕು ಕೂಡ ನಮಗಿಲ್ಲ. ಹೇಗೆ ನಮ್ಮ ದೇಹದೊಳಗೆ ರೋಗ ಅಂಟುತ್ತದೋ ಅದೇ ರೀತಿ ದೇಹದೊಳಗೇ ರೋಗವನ್ನು ನಿರ್ಮೂಲನೆ ಮಾಡುವ ಪರಿಹಾರವಿದೆ. ಅದೇ ಯೋಗ. ಯೋಗದ ನಿರಂತರ ಅಭ್ಯಾಸದಿಂದ ರೋಗ ಮುಕ್ತರಾಗಬಹುದು’ ಎಂದು ಸಲಹೆ ಮಾಡಿದರು.

‘ಲೋಳೆ ಸರ, ತುಳಸಿ ಹಾಗೂ ಅಮೃತಬಳ್ಳಿ ನಮ್ಮ ಮನೆಯಂಗಳದಲ್ಲಿದ್ದರೆ ಯಾವ ಋಣಾತ್ಮಕ ಶಕ್ತಿಯೂ ನಮ್ಮನ್ನು ಮುಟ್ಟಲಾಗದು. ಅವುಗಳನ್ನು ದೇಹದೊಳಕ್ಕೆ ತೆಗೆದುಕೊಂಡರೆ ಯಾವ ರೋಗವೂ ಬಾಧಿಸುವುದಿಲ್ಲ’ ಎಂದರು.

‘ನಮ್ಮ ಜಗತ್ತು ಸೃಷ್ಟಿಯಾದಾಗಿನಿಂದಲೇ ಆಯುರ್ವೇದ ಪದ್ಧತಿ ನಮ್ಮಲ್ಲಿ ಜಾರಿಯಲ್ಲಿದೆ. ಉಪಾಸನೆ ಹಾಗೂ ಉಪವಾಸ ಪ್ರಕೃತಿ ಚಿಕಿತ್ಸೆಯ ಎರಡು ಪ್ರಮುಖ ಆಧಾರ ಸ್ತಂಭಗಳು. ಪ್ರಕೃತಿಯನ್ನು ನಾವು ಬ್ರಹ್ಮಾವದಿಂದ ನೋಡಬೇಕು. ಅದನ್ನು ಭೋಗ ಭಾವದಿಂದ ಕಂಡಲ್ಲಿ ವಿನಾಶದ ಅಂಚಿಗೆ ತಲುಪುತ್ತೇವೆ’ ಎಂದು ಎಚ್ಚರಿಸಿದರು.
‘ಪ್ರಸ್ತುತ ವಿಶ್ವದ 200 ರಾಷ್ಟ್ರಗಳಲ್ಲಿ 10 ಕೋಟಿ ಜನತೆ ‘ಆಸ್ತಾ’ ಚಾನೆಲ್‌ನ ಮೂಲಕ ಯೋಗ ಕಲಿಯುತ್ತಿದ್ದಾರೆ. ದೇಶದ 6.38 ಲಕ್ಷ ಗ್ರಾಮಗಳಲ್ಲಿಯೂ ಯೋಗ ಸಮಿತಿ ರಚನೆಯಾಗಬೇಕಿದೆ. ಗ್ರಾಮ ಗ್ರಾಮಗಳಲ್ಲಿಯೂ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳು ಸ್ಥಾಪನೆಯಾಗಬೇಕಿದೆ. ಆ ಮೂಲಕ ಪ್ರತಿಯೊಬ್ಬರೂ ಯೋಗ ಕಲಿಯಬೇಕು’ ಎಂದು ಮನವಿ ಮಾಡಿರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.