ADVERTISEMENT

ಮತ್ತಿಗೋಡು: ಆನೆ ಹೊಟ್ಟೆಗೆ ಅರೆಕಾಸಿನ ನೀರು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 7:12 IST
Last Updated 21 ಏಪ್ರಿಲ್ 2013, 7:12 IST

ಗೋಣಿಕೊಪ್ಪಲು: `ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂದು ನೀವು ಕೇಳಿಯೇ ಇರುತ್ತೀರಿ. ಆದರೆ, ಆನೆ ಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಈಗ `ಆನೆ ಹೊಟ್ಟೆಗೆ ಅರೆಕಾಸಿನ ನೀರೂ' ಸಿಗುತ್ತಿಲ್ಲ.

ಹೌದು. ಈ ಸಾಕಾನೆ ಶಿಬಿರದಲ್ಲಿ ಈಗ ಎಲ್ಲಿಲ್ಲದ ಬರ ಬಂದಿದೆ. ಕಾಡಿನ ಹಸಿರಿನೊಂದಿಗೆ ಮಾವುತರು ನೀಡಿದ ಆಹಾರ ತಿಂದು, ಕೆರೆಯಲ್ಲಿ ಬಿದ್ದು ಹೊರಳಾಡಿ ಬಿಸಿಲಿನ ಧಗೆ ಆರಿಸಿಕೊಳ್ಳುತ್ತಿದ್ದ ಆನೆಗಳು; ಈಗ ಕೊಳವೆಬಾವಿ ನೀರಿಗೆ ಮೊರೆ ಹೋಗಬೇಕಾಗಿದೆ! ಕೊಳವೆ ಬಾವಿಗೆ ಸೊಂಡಿಲೊಡ್ಡಿ ನೀರು ಕುಡಿಯುವ ಸ್ಥಿತಿ ಬಂದಿದೆ!

ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕಾಲಿಟ್ಟರೆ ನಿಮಗೆ ಇಲ್ಲಿನ ನೈಜ ಚಿತ್ರಣ ಅರಿವಾಗುತ್ತದೆ. ಶಿಬಿರದಲ್ಲಿ 17 ಆನೆಗಳಿವೆ. ಇವುಗಳಲ್ಲಿ 13 ಬಾರಿ ದಸರಾ ಅಂಬಾರಿ ಹೊತ್ತ ಬಲರಾಮನೇ ಅತ್ಯಂತ ಹಿರಿಯ. 53 ವರ್ಷದ ಬಲರಾಮ ಇನ್ನು ಹೆಸರಿಡದ 1 ವರ್ಷದ ಮರಿಯಾನೆಯೊಂದಿಗೆ ಈ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾನೆ.

ಆನೆಗಳ ಅವಿಭಕ್ತ ಕುಟುಂಬವಿದು
ಉಳಿದಂತೆ ಗಂಡಾನೆಗಳಾದ ರಾಜೇಶ (48), ರಾಜೇಂದ್ರ (46), ಕೃಷ್ಣ (46), ಅಭಿಮನ್ಯು (44), ಸೋಮಶೇಖರ (42), ಅಶೋಕ (40), ಶೇಖರ (39), ರವಿ (34), ಗಣೇಶ (27), ಗೋಪಾಲಕೃಷ್ಣ (27), ಖ್ಯಾತ (10), ಭೀಮ (10), ಶ್ರೀನಿವಾಸ (7), ಹೆಣ್ಣಾನೆಗಳಾದ ಚಾಮುಂಡಿ (14), ತುಂಗಾ (10), ಚಾಮುಂಡಿ ಮರಿ (1) ಸೇರಿ ಇಲ್ಲೊಂದು ಅವಿಭಕ್ತ ಕುಟುಂಬ ನಿರ್ಮಾಣವಾಗಿದೆ. ಈ ದೊಡ್ಡ ಕುಟುಂಬದಲ್ಲಿ ಅಭಿಮನ್ಯು ಅತ್ಯಂತ ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬರ ಕಣ್ಣು ಕುಕ್ಕುತ್ತಾನೆ ಈ `ಧೀರ' ಅಭಿಮನ್ಯು.

ಬೆಳಿಗ್ಗೆ ಆಹಾರ ನೀಡಿದ ಬಳಿಕ ಆನೆಗಳನ್ನು ಮೇಯಲು ಕಾಡಿಗೆ ಬಿಡಲಾಗುತ್ತದೆ. ಅಲ್ಲಿ ಕಾಡಿನ  ಕೆರೆಗಳ ನೀರಿನಲ್ಲಿ ಆಟವಾಡಿ ಬಂದು ಸಂಜೆ ಮತ್ತೆ ಶಿಬಿರ ಸೇರುತ್ತಿದ್ದವು. ಆದರೆ, ಈ ಬಾರಿ ಅತಿಯಾದ ಬಿಸಲಿದ್ದು, ಕಾಡಿನ ಬಹುತೇಕ ಕೆರೆಗಳು ಒಣಗಿ ಹೋಗಿವೆ. ಹೀಗಾಗಿ ಆನೆಗಳ ಸ್ವಚ್ಚಂದ ಜಲವಿಹಾರಕ್ಕೆ ತಡೆ ಬಿದ್ದಿದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಶಿಬಿರದಲ್ಲಿ ತೆಗೆಸಿರುವ ಕೊಳವೆಬಾವಿ ಮತ್ತು ಸಿಮೆಂಟ್ ಟ್ಯಾಂಕ್ ನೀರೇ ಆನೆಗಳಿಗೆ ಆಸರೆಯಾಗಿದೆ.

39 ಕೆರೆಗಳೂ ಣಗಿವೆ
ಆನೆಚೌಕೂರು ವಲಯದ ಅರಣ್ಯದಲ್ಲಿ 39 ಕೆರೆಗಳಿವೆ. ಇದರಲ್ಲಿ ಬಹುಪಾಲು ಕೆರೆಗಳಲ್ಲಿ ಕೆಸರಿನ ನೀರು ಮಾತ್ರ ಇದೆ. ಮಲ್ಲಿಪಟ್ಟಣ ಕೆರೆ, ಹಂಡಿಗೆರೆ ಕೆರೆ, ಹಳೆ ಮತ್ತಿಗೋಡು ಕೆರೆ, ಸಿಡಿಲಿನ ಕೆರೆ, ಈಚೂರು ಕೆರೆ, ಕಾಡು ಬಸವನ ಕೆರೆ, ಗಣಗೂರು ಗದ್ದೆ ಕೆರೆ, ಮೆಟ್ಲುಹೊಳೆ ಕೆರೆ, ಕಡಬುಕಟ್ಟೆ ಕೆರೆ, ಗಿರಿಕೆ ಕಟ್ಟೆ, ಹುಣಿಸೆಕಟ್ಟೆ, ಎಲಗಳ್ಳಿ ಕೆರೆಗಳು ಸಂಪೂರ್ಣ ಒಣಗಿ ಮೂರು ತಿಂಗಳೇ ಕಳೆದಿವೆ. ಉಳಿದ ಕೆರೆಗಳು ಕೂಡ ಬರಿದಾಗುತ್ತಿವೆ.

ಕಳೆದ ವರ್ಷ ಉತ್ತಮ ಮಳೆಯಾಗದಿರುವುದೇ ಕೆರೆಗಳು ಬೇಗ ಬರಿದಾಗಲು ಕಾರಣ. ಕಾಡಿನ ಆನೆಗಳು ಕೆರೆಯ ಅಂಗಳದಲ್ಲಿ ನಿಂತಿರುವ ಕೆಸರು ನೀರನ್ನೇ ಕುಡಿಯುತ್ತಿವೆ. ಇದರಿಂದಾಗಿ ಕೆಲ ಆನೆಗಳ ಕರಳುಬೇನೆ ಬಂದು ಸತ್ತಿವೆ.

ಬೇಸಿಗೆಯಲ್ಲಿ ಬೇಕು ಯಥೇಚ್ಚ ನೀರು
ಬೇಸಿಗೆಯಲ್ಲಿ ಆನೆಗಳಿಗೆ ಯಥೇಚ್ಚವಾಗಿ ನೀರು ಬೇಕು. ಅವುಗಳಿಗೆ ಆಹಾರ ಇಲ್ಲದಿದ್ದರೂ ಪರವಾಗಿಲ್ಲ. ಆದರೆ, ತೃಪ್ತಿಕರವಾಗಿ ನೀರು ಬೇಕು ಎನ್ನುತ್ತಾರೆ ಅರಣ್ಯ ಸಿಬಂದಿ. ಈ ಬಾರಿ ಹಿಂದೆಂದೂ ಕಾಣದಂತಹ ಬರಗಾಲ ಹಾಗೂ ಬಿಸಿಲಿನ ಧಗೆ ಕೊಡಗಿನಲ್ಲಿ ಆರಂಭಗೊಂಡಿದೆ. ಏಪ್ರಿಲ್ ತಿಂಗಳಿನಲ್ಲಿಯೇ 37 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮೇ ತಿಂಗಳ ಪರಿಸ್ಥಿತಿ ಊಹಿಸಲೂ ಆಗುವುದಿಲ್ಲ.
ಇಂಥ ಸಂದರ್ಭದಲ್ಲಿ ಸಾಕಾನೆಗಳ ಕುಡಿಯುವ ನೀರಿಗೆ ಅರಣ್ಯ ಇಲಾಖೆ ಶಿಬಿರದಲ್ಲಿ ಕೊಳವೆ ಬಾವಿ ತೋಡಿಸಿ ನೀರಿನ ಸಮಸ್ಯೆ ಪರಿಹರಿಸಿದೆ. ಆದರೆ, ಆನೆಗಳ ಮೈ ಮೇಲಿನ ಶಾಖ ಆರಿಸಲು, ಅವುಗಳ ಮೈತೊಳೆಯಲು ನೀರಿಲ್ಲದಂತಾಗಿದೆ. ಪ್ರಕೃತಿಯ ಮುನಿಸಿಗೆ ಸಿಕ್ಕು ನಲುಗುತ್ತಿರುವ ಈ `ದೈತ್ಯದೇಹಿ'ಗಳ ಗೋಳು ನೋಡಲಾಗುತ್ತಿಲ್ಲ ಎಂಬು ಕೊರಗು ಮಾವುತ ಕೃಷ್ಣ ಅವರದು.

ಬೋರ್‌ವೆಲ್‌ನಿಂದ ನೀರಿನ ವ್ಯವಸ್ಥೆ
ಶಿಬಿರದಲ್ಲಿ ಸಾಕಾನೆಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಣಗಿದ ಬತ್ತದ ಹುಲ್ಲು ಹಾಗೂ ಬತ್ತವನ್ನು ನೀರಿಗೆ ಅದ್ದಿ ಕೊಡಲಾಗುತ್ತಿದೆ. ಆನೆಗಳ ಗಾತ್ರ, ವಯಸ್ಸು ನೋಡಿ ಆಹಾರ ಪ್ರಮಾಣವ್ನು ಹೆಚ್ಚಿಸಲಾಗುತ್ತಿದೆ. ಬೋರ್‌ವೆಲ್ ಮೂಲಕ  ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲಾಗಿದೆ.
-ದೇವರಾಜು, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT