ADVERTISEMENT

ಮರು ಜಮಾಬಂದಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 9:56 IST
Last Updated 14 ಡಿಸೆಂಬರ್ 2013, 9:56 IST

ಸಿದ್ದಾಪುರ: ಗ್ರಾಮ ಪಂಚಾಯಿತಿ ಆಯ–ವ್ಯಯಗಳ ಪಟ್ಟಿ ಸಮರ್ಪಕವಾಗಿಲ್ಲ , ಹಲವು ಯೋಜನೆಗಳಲ್ಲಿ ಹಣ ದುರುಪಯೋಗ, ಬಸವ ವಸತಿ ಯೋಜನೆ ಸೇರಿದಂತೆ ಸ್ವಚ್ಛ ಗ್ರಾಮ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಇಲ್ಲಿನ ಹಿತರಕ್ಷಣಾ ಸಮಿತಿಯ ಸದಸ್ಯರು ಶುಕ್ರವಾರ  ಸಿದ್ದಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಜಮಾಬಂದಿ ಸಭೆಯನ್ನು ಮತ್ತೊಮ್ಮೆ ನಡೆಸುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿ ಕುಟ್ಟಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಜಮಾಬಂದಿ ಸಭೆಯ ಕುರಿತು ಸಭೆಗೆ ಆಗಮಿಸಿದ ನೋಡಲ್ ಅಧಿಕಾರಿ ಮುಖಾಂತರ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಪ್ರತಿಭಟನೆಗೂ ಮುನ್ನ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ಆಡಳಿತ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮರು ಜಮಾಬಂದಿ ಸಭೆಯನ್ನು ನಡೆಸುವಂತೆ ಒತ್ತಾಯಿಸಿ ಹದಿನೈದು ದಿನಗಳ ಗಡುವು ನೀಡಿದರು.

ತಪ್ಪಿದ್ದಲ್ಲಿ ನಿರಂತರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸಮಿತಿ ಅಧ್ಯಕ್ಷ ಪಿ.ಎಂ. ಪುಟ್ಟುಸ್ವಾಮಿ, ಎನ್.ಕೆ. ಅನಿಲ್, ಭೈಜು, ಬಿ.ಕೆ. ಅನಿಲ್ ಶೆಟ್ಟಿ, ಎಂ.ಎ. ನವೀದ್, ಎನ್.ವಿ.ನೌಫಲ್, ಎಸ್.ಎನ್. ಮಂಜು ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.