ADVERTISEMENT

ಮಲೆತಿರಿಕೆ: ಅಯ್ಯಪ್ಪ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 10:12 IST
Last Updated 3 ಜನವರಿ 2014, 10:12 IST

ವಿರಾಜಪೇಟೆ: ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಅಯ್ಯಪ್ಪ ಉತ್ಸವವು ಬುಧವಾರ ರಾತ್ರಿ ನಡೆದ ಅದ್ದೂರಿ ಮೆರವಣಿಗೆಯೊಂದಿಗೆ ತೆರೆಕಂಡಿತು. ಮೆರವಣಿಗೆ ರಾತ್ರಿ 7ಕ್ಕೆ ಸಿದ್ದಾಪುರ ರಸ್ತೆಯಿಂದ ಆರಂಭಗೊಂಡಿತು. ಮೆರವಣಿಗೆಯೊಂದಿಗೆ ದೀಪಾರತಿ, ಆನೆ ಅಂಬಾರಿ, ಅಯ್ಯಪ್ಪನ ಚಲನವಲನವನ್ನು ಹೊಂದಿರುವ ಮಂಟಪ, ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ, ಕೇರಳದ ಚಂಡೆ ಮದ್ದಳೆ, ಮೈಸೂರು ಬ್ಯಾಂಡ್‌ ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಸಿದ್ದಾಪುರ ರಸ್ತೆಯಿಂದ ಆರಂಭಗೊಂಡ ಮೆರವಣಿಗೆಯು ತೆಲುಗರ ಬೀದಿ, ಎಫ್‌ಎಂಸಿ ರಸ್ತೆ ಮಾರ್ಗವಾಗಿ ರಾತ್ರೆ ಮೀನುಪೇಟೆಯಲ್ಲಿರುವ ಮುತ್ತಪ್ಪ ದೇವಾಲಯವನ್ನು ತಲುಪಿ ಪೂಜೆ ಸಲ್ಲಿಸಿತು. ಮೆರವಣಿಗೆಯನ್ನು ವಿಕ್ಷೀಸಲು ರಸ್ತೆಯ ಉದ್ದಕ್ಕೂ ಭಾರಿ ಜನ ನೆರೆದಿದ್ದರು. ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯು ಬಿಗಿ ಬಂದೋಬಸ್ತ್‌ ಏರ್ಪಡಿಸಿತ್ತು.

ವಿಜೃಂಭಣೆಯ ಅಯ್ಯಪ್ಪ ಸ್ವಾಮಿ ಪೂಜೆ
ನಾಪೋಕ್ಲು:
ಸಮೀಪದ ಮೂರ್ನಾಡಿನ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ವಾರ್ಷಿಕ ಪೂಜೋತ್ಸವ ವಿಜೃಂಭಣೆಯಿಂದ ಗುರುವಾರ ನಡೆಯಿತು.
ದೇವಾಲಯದ ಅರ್ಚಕ ನಟರಾಜ ಕುಣ್ಣಿಕುಳ್ಳಾಯ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ನವಗ್ರಹ ಪೂಜೆ, ಕುಂಕುಮಾರ್ಚನೆ, ನಡೆ ಪ್ರಾರ್ಥನೆ, ಸುಧಾಪಯ ಸೇವೆಗಳು ನಡೆದವು. ಭಕ್ತರಿಗೆ, ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪಾಲಂದಿರ ಪಿ. ಮಾಚಯ್ಯ, ಉಪಾಧ್ಯಕ್ಷ ದಂಬೆಕೋಡಿ ಕೆ. ಸುಬ್ರಮಣಿ, ಕಾರ್ಯದರ್ಶಿ ತಿರ್ಕಚೇರಿರ                ಯು. ತಮ್ಮಯ್ಯ, ನಿರ್ದೇಶಕ ಪುದಿಯೊಕ್ಕಡ ಬೆಲ್ಲು ಸೋಮಯ್ಯ, ನುಚ್ಚುಮಣಿಯಂಡ ಪಿ. ಕಾರ್ಯಪ್ಪ, ಎನ್.ಕೆ. ನಾರಾಯಣ, ಪಳಂಗಂಡ ಎಸ್. ಮುದ್ದಪ್ಪ, ಬಾರಿಯಂಡ ಎನ್. ಸುಬ್ರಮಣಿ, ಕುಂಜಿಲಂಡ ಪೂಣಚ್ಚ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.