ADVERTISEMENT

ರಾಜರ ಗದ್ದಿಗೆ: ಇನ್ನೂ ನಿರ್ಲಕ್ಷ್ಯ ಸಲ್ಲದು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 8:45 IST
Last Updated 28 ಫೆಬ್ರುವರಿ 2011, 8:45 IST

ಮಡಿಕೇರಿ: ಅರಸೊತ್ತಿಗೆಯ ಪ್ರತೀಕದಂತಿರುವ ಮಡಿಕೇರಿಯ ರಾಜರ ಗದ್ದಿಗೆ ಮತ್ತೆ ರಾಜ್ಯ ಮಟ್ಟದ ಸುದ್ದಿಯಾಗಿದೆ. ಇದುವರೆಗೆ, ಪುರಾತತ್ವ ಇಲಾಖೆ ಗದ್ದಿಗೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ರಾಜ್ಯಮಟ್ಟದಲ್ಲಿ ಸುದ್ದಿಯಾದರೆ, ಮೊನ್ನೆ ಫೆ. 22ರಂದು ಬೆಳಗಿನ ಜಾವ ಕಿಡಿಗೇಡಿಗಳು ಗದ್ದಿಗೆ ದ್ವಾರಕ್ಕೆ ಬೆಂಕಿ ಹಚ್ಚಿ ಭಸ್ಮ ಮಾಡಿದ್ದು ಇನ್ನೂ ಹೆಚ್ಚಿನ ಪ್ರಚಾರವಾಯಿತು.

ಬಹಳ ವರ್ಷಗಳಿಂದ ರಾಜರ ಗದ್ದಿಗೆ ಇದೇ ರೀತಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಕನಿಷ್ಠ ಭದ್ರತೆಗೂ ಪುರಾತತ್ವ ಇಲಾಖೆ ಸರಿಯಾದ ಕ್ರಮ ವಹಿಸದಿರುವುದು ಅದರ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗದ್ದಿಗೆ ಅಕ್ರಮಗಳ ತಾಣವಾಗಿ ಪರಿವರ್ತನೆಯಾಗಿದ್ದರೂ ಗಮನಹರಿಸುವವರೇ ಇಲ್ಲದಂತಾಗಿತ್ತು. ಪರಿಣಾಮ, ಕಿಡಿಗೇಡಿಗಳು ದ್ವಾರಕ್ಕೆ ಬೆಂಕಿ ಹಚ್ಚುವಂತಹ ಮಟ್ಟಕ್ಕೆ ತಲುಪಿತು. ಕಿಡಿಗೇಡಿಗಳ ಈ ಕೃತ್ಯವನ್ನು ನಂತರ ಎಲ್ಲ ಕೋಮಿನವರೂ ಒಕ್ಕೊರಲಿನಿಂದ ಖಂಡಿಸಿದರು. ಪೊಲೀಸರು ಮೂವರನ್ನು ಬಂಧಿಸಿದ್ದೂ ಆಯಿತು.

 ರಾಜರ ಕಾಲದಲ್ಲಿ ನಿರ್ಮಿಸಿದ ಈ ದ್ವಾರ ಬಹುತೇಕ ಭಸ್ಮವಾಗಿರುವ ಹಿನ್ನೆಲೆಯಲ್ಲಿ ಹೊಸ ದ್ವಾರ ಅಳವಡಿಸಲು 1.60ರಿಂದ 1.75 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಪುರಾತತ್ವ ಇಲಾಖೆಯ ಎಂಜಿನಿಯರ್‌ಗಳು ಈಗಾಗಲೇ ಅಂದಾಜು ಮಾಡಿದ್ದಾರೆ. ಅಲ್ಲದೆ, ಇನ್ನೊಂದು ತಿಂಗಳಲ್ಲಿ ಹೊಸ ದ್ವಾರವನ್ನು ಅಳವಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಆದರೆ, ಈ ಘಟನೆ ಮಾತ್ರ ಇಲಾಖೆಗೆ ಒಂದು ರೀತಿಯಲ್ಲಿ ಕಪ್ಪು ಚುಕ್ಕೆಯಾಯಿತು.

ಈ ಮಧ್ಯೆ, ಗದ್ದಿಗೆ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ರಾಜರ ಗದ್ದಿಗೆ ವ್ಯವಸ್ಥಾಪನಾ ಸಮಿತಿ ಒಂದೂವರೆ ವರ್ಷಗಳಿಂದ ಅಸ್ತಿತ್ವದಲ್ಲಿಲ್ಲ. ಹಾಲಿ ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅಧ್ಯಕ್ಷರಾಗಿದ್ದ ಸಮಿತಿಯ ಅವಧಿ ಕೊನೆಗೊಂಡು ಒಂದೂವರೆ ವರ್ಷವೇ ಉರುಳಿದರೂ ಹೊಸ ಸಮಿತಿ ಅಸ್ತಿತ್ವಕ್ಕೆ ಬಂದಿಲ್ಲ. ಪರಿಣಾಮ, ರಾಜರ ಗದ್ದಿಗೆ ಅನಾಥ ಸ್ಮಾರಕವಾಗಿ ನಿಂತಿದೆ.ಈ ಹಿಂದೆ ಮಡಿಕೇರಿಗೆ ಆಗಮಿಸಿದ್ದ ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್. ಗೋಪಾಲ್, ಗದ್ದಿಗೆ ಸುತ್ತ ತಂತಿ ಬೇಲಿ ಹಾಕುವುದರ ಜತೆಗೆ, ಸುಂದರ ಉದ್ಯಾನ, ಕಾರಂಜಿ, ಮಡಿಕೇರಿ ದರ್ಶನಕ್ಕೆ ಕಲ್ಲು ಬೆಂಚಿನ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಅವ್ಯಾವೂ ಈಡೇರಿಲ್ಲ. ಮೊನ್ನೆ ಕಿಡಿಗೇಡಿಗಳ ಕೃತ್ಯದಿಂದ ಗದ್ದಿಗೆ ದ್ವಾರ ಭಸ್ಮವಾದ ನಂತರ ಆಗಮಿಸಿದ್ದ ಅವರು ಮತ್ತದೇ ಭರವಸೆ ನೀಡಿದ್ದಾರೆ. ಗದ್ದಿಗೆ ಅಭಿವೃದ್ಧಿಗಾಗಿ 13ನೇ ಹಣಕಾಸು ಯೋಜನೆಯಡಿ ಏಪ್ರಿಲ್ ತಿಂಗಳಲ್ಲಿ 20 ಲಕ್ಷ ರೂಪಾಯಿಗಳನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ಗದ್ದಿಗೆ ಅಭಿವೃದ್ಧಿಗೆ ಜಿಲ್ಲಾಡಳಿತ ನಿರ್ಮಿತಿ ಕೇಂದ್ರದ ಮೂಲಕ 20 ಲಕ್ಷ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ. ಹೀಗಾಗಿ, 2011-12ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆಯಡಿ ಏಪ್ರಿಲ್‌ನಲ್ಲಿ ಈ ಹಣ ಬಿಡುಗಡೆಯಾಗಲಿದೆ. ಹಣ ಬಂದ ತಕ್ಷಣ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡುವುದಾಗಿಯೂ ಅವರು ಆಶ್ವಾಸನೆ ನೀಡಿದ್ದಾರೆ.ಇನ್ನು, ಪ್ರತಿನಿತ್ಯ ರಾಜರ ಸಮಾಧಿಗಳಿಗೆ ಪೂಜೆ ಸಲ್ಲಿಸುತ್ತಿರುವ ಬಸವರಾಜು ಅವರಿಗೆ ಮುಜರಾಯಿ ಇಲಾಖೆ ಕಳೆದ ಹಲವು ವರ್ಷಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅದಕ್ಕೆ ಮುಜರಾಯಿ ಇಲಾಖೆಯತ್ತ ಬೆಟ್ಟು ತೋರಿಸುತ್ತಾರೆ.

ಕೊಡಗನ್ನು ಆಳಿದ ಹಾಲೇರಿ ವಂಶದ ವೀರರಾಜೇಂದ್ರ, ಲಿಂಗರಾಜೇಂದ್ರ, ಆತನ ಪಟ್ಟದ ರಾಣಿ ಮಹದೇವಮ್ಮಾಜಿ, ಮಗ ಚಿಕ್ಕವೀರರಾಜೇಂದ್ರ ಹಾಗೂ ರಾಜಗುರು ರುದ್ರಪ್ಪ ಸಮಾಧಿಗಳು ಇಲ್ಲಿನ ಮೂರು ಗದ್ದಿಗೆಗಳಲ್ಲಿವೆ. ಗದ್ದಿಗೆಯನ್ನು ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಕಲಾತ್ಮಕ ಕೆತ್ತನೆಗಳು ಗಮನಸೆಳೆಯುತ್ತವೆ. ಕಿಟಕಿಗಳ ಮೇಲಿರುವ ಗಾರೆಯ ಉಬ್ಬು ಶಿಲ್ಪಗಳು ಇಂದಿಗೂ ಕಂಗೊಳಿಸುತ್ತವೆ. ಗೋಪುರದ ಕಲಶದ ತುದಿಗೆ ಸ್ವರ್ಣಲೇಪ ಮಾಡಲಾಗಿದೆ. ಇಂತಹ ಐತಿಹ್ಯವುಳ್ಳ ಗದ್ದಿಗೆ ನಿಜಕ್ಕೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಪರ್ಯಾಸದ ಸಂಗತಿ. ಇನ್ನಾದರೂ ಇಲಾಖೆ ಅದರ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಕೊಡಗಿನ ಐತಿಹ್ಯ ಕೂಡ ನಿರ್ಲಕ್ಷ್ಯಕ್ಕೊಳಗಾಗಿ ಭವಿಷ್ಯದಲ್ಲಿ ಕೇವಲ ನೆನಪಾಗಿ ಉಳಿಯಬಹುದೇನೋ? ಕೇವಲ ಪುರಾತತ್ವ ಇಲಾಖೆಯಿಂದ ಇಂತಹ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವುದು ಕಷ್ಟ. ಬದಲಿಗೆ, ಜನರ ಸಹಕಾರವೂ ಮುಖ್ಯ.

ಕೇವಲ ಗದ್ದಿಗೆ ದ್ವಾರಕ್ಕೆ ಬೆಂಕಿ ಬಿದ್ದಾಗಲೋ ಅಥವಾ ಇನ್ನೂ ಏನಾದರೂ ಘಟನೆ ಸಂಭವಿಸಿದಾಗಲೋ ಮಾತ್ರ ಅದರ ಸಂರಕ್ಷಣೆ ಬಗ್ಗೆ ಕಾಳಜಿ ತೋರುವ ನಮ್ಮ ಜನ, ಜಿಲ್ಲಾಡಳಿತ ಹಾಗೂ ಪುರಾತತ್ವ ಇಲಾಖೆಯೊಂದಿಗೆ ಕೈಜೋಡಿಸಿ ಐತಿಹಾಸಿಕ ಸ್ಮಾರಕ ಉಳಿಸಲು ಮುಂದಾದರೆ ಆ ಕಾರ್ಯ ಎಲ್ಲರ ಮೆಚ್ಚುಗೆಗೂ ಪಾತ್ರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.