ADVERTISEMENT

ವಾರದ ಸಂತೆಗೆ ನೂರೆಂಟು ಚಿಂತೆ!

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 6:30 IST
Last Updated 29 ಮಾರ್ಚ್ 2011, 6:30 IST
ವಾರದ ಸಂತೆಗೆ ನೂರೆಂಟು ಚಿಂತೆ!
ವಾರದ ಸಂತೆಗೆ ನೂರೆಂಟು ಚಿಂತೆ!   

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಹೈಟೆಕ್ ಮಾರುಕಟ್ಟೆ ಹಾಗೂ ಖಾಸಗಿ ಬಸ್ ನಿಲ್ದಾಣದ ಕಾಂಕ್ರೀಟ್ ಕಾಮಗಾರಿಯಿಂದಾಗಿ ವರ್ತಕರು, ಸಾರ್ವಜನಿಕರು ಹಾಗೂ ಬಸ್ ಮಾಲೀಕರು ಕಳೆದ ಎರಡು ತಿಂಗಳಿನಿಂದ ತೊಂದರೆಗೆ ಒಳಗಾಗಿದ್ದು, ವಾರದ ಸಂತೆಯನ್ನು ಮಾಡುವುದು ಎಲ್ಲಿ ಎಂಬ ಸಮಸ್ಯೆ ಉದ್ಭವವಾಗಿದೆ.ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ 1.30 ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಈಗಾಗಲೆ ಮಾರುಕಟ್ಟೆಯ ಹಳೆಯ ಕಟ್ಟಡಗಳನ್ನು ಕೆಡವಲಾಗಿದೆ.

ಅಲ್ಪಸ್ವಲ್ಪ ಪ್ರಮಾಣದ ಕಾಮಗಾರಿಯೂ ಆರಂಭಗೊಂಡಿದೆ. ಆದರೆ ಸೋಮವಾರದ ಸಂತೆ ನಡೆಸಲು ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಇದುವರೆಗೂ ಪಟ್ಟಣ ಪಂಚಾಯಿತಿ ಮಾಡದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.ಸಂತೆಯೊಳಗೆ ವ್ಯಾಪಾರ ಮಾಡುವ ತರಕಾರಿ ಮತ್ತು ದಿನಸಿ ವ್ಯಾಪಾರಸ್ಥರು ತಾವು ತಂದಿರುವ ವಸ್ತುಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದಾರೆ.

ಅತಿ ಹೆಚ್ಚಿನ ವಾಹನ ದಟ್ಟಣೆಯಿರುವ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿಯೇ ಕಳೆದ ಎರಡು ವಾರದಿಂದ ಸಂತೆ ನಡೆಯುತ್ತಿದೆ. ರಸ್ತೆಯ ಮಧ್ಯದಲ್ಲಿಯೇ ತರಕಾರಿಗಳನ್ನು ಗುಡ್ಡೆ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಈ ರಸ್ತೆಯಲ್ಲಿ ತಿರುಗಾಡುವುದೇ ಅಸಾಧ್ಯವಾಗಿದೆ. ಮುಂದಿನ ಸೋಮವಾರ ಕಾಂಕ್ರೀಟ್ ಕಾಮಗಾರಿ ಮುಗಿದ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೊಂಡರೆ ಸಿ.ಕೆ.ಸುಬ್ಬಯ್ಯ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಳ್ಳುತ್ತದೆ.

ಹೀಗಾಗಿ ಮುಂದಿನ ವಾರದಿಂದ ಸಂತೆಯ ವ್ಯಾಪಾರವನ್ನು ಎಲ್ಲಿ ಮಾಡುವುದೆಂಬ ಚಿಂತೆ ವರ್ತಕರನ್ನು ಕಾಡುತ್ತಿದೆ. ಹೈಟೆಕ್ ಮಾರುಕಟ್ಟೆ ಕಾಮಗಾರಿ ಮುಗಿಯಲು ಹಲವಾರು ತಿಂಗಳುಗಳೇ ಬೇಕಾಗುತ್ತದೆ. ಅಲ್ಲದೆ ಮಳೆಗಾಲದಲ್ಲಿ ಸಂತೆಯು ಎಲ್ಲಿ ನಡೆಯುತ್ತದೆ ಎಂಬ ಜಿಜ್ಞಾಸೆಯೂ ಆರಂಭಗೊಂಡಿದೆ. ಪಂಚಾಯಿತಿಯವರು ಸಂತೆಗೊಂದು ಪರ್ಯಾಯ ಸ್ಥಳ ಕಲ್ಪಿಸದಿದ್ದರೆ ದೊಡ್ಡ ಸಮಸ್ಯೆಯೇ ಎದುರಾಗುವ ಸಂಭವವಿದೆ ಎಂಬುದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.