ADVERTISEMENT

ವಿರಾಜಪೇಟೆಯಲ್ಲಿ ಹಾಕಿ ರಸದೌತಣ

ಎಂ.ಎನ್.ಹೇಮಂತಕುಮಾರ್‌
Published 16 ಏಪ್ರಿಲ್ 2014, 6:29 IST
Last Updated 16 ಏಪ್ರಿಲ್ 2014, 6:29 IST

ವಿರಾಜಪೇಟೆ: ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡುವ ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ ಈ ಬಾರಿ ವಿರಾಜಪೇಟೆ ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿ  ಏ. 20ರಿಂದ ಆರಂಭಗೊಳ್ಳಲಿದೆ.

18ನೇ ವರ್ಷದ ಹಾಕಿ ಹಬ್ಬದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ವಿರಾಜಪೇಟೆಯ ಕುಕ್ಲೂರಿನ ತಾತಂಡ ಕುಟುಂಬ. 18ನೇ ತಾತಂಡ ಕಪ್ ಹಾಕಿ ಟೂರ್ನಿಯ ಉದ್ಘಾಟನೆಯು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ  ಏ. 20ರಂದು ನಡೆಯಲಿದೆ. ಇದೇ ಮೊದಲ ಬಾರಿಗೆ ಕೌಟುಂಬಿಕ ಹಾಕಿ ಟೂರ್ನಿ ವಿರಾಜಪೇಟೆ ಪಟ್ಟಣದಲ್ಲಿ ನಡೆಯಲಿದೆ.

ಕಳೆದ ಬಾರಿ ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದಲ್ಲಿ ಮಾದಂಡ ಕಪ್ ಹಾಕಿ ಉತ್ಸವ ನಡೆದಿತ್ತು. ಈ ಬಾರಿಯೂ ಅಲ್ಲಿಯೇ ನಡೆಸುವ ಉದ್ದೇಶ ಮೊದಲು ತಾತಂಡ ಕುಟುಂಬಕ್ಕೆ ಇತ್ತಾದರೂ 2001ರಲ್ಲಿ ತಾತಂಡ ಕುಟುಂಬದವರು ಕೌಟುಂಬಿಕ ಕ್ರಿಕೆಟ್ ಟೂರ್ನಿಯನ್ನು ಪಟ್ಟಣದ ಜೂನಿಯರ್‌ ಕಾಲೇಜು ಮೈದಾನದಲ್ಲಿಯೇ  ನಡೆಸಿ ಯಶಸ್ವಿಗೊಳಿಸಿದ್ದರು. ಆ ನಿಟ್ಟಿನಲ್ಲಿ ಜನಾಕರ್ಷಣೆ ಪಡೆದಿರುವ ಹಾಕಿ ಉತ್ಸವವನ್ನು ಇದೇ ಮೈದಾನದಲ್ಲಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಕಳೆದ ತಿಂಗಳು ಮೈದಾನವನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮೈದಾನ ಸಿದ್ಧತೆಯ ಕಾರ್ಯ ಭರದಿಂದ ಸಾಗಿದೆ. ದಕ್ಷಿಣ ಕೊಡಗಿನ ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯ ಈ ಮೈದಾನದಲ್ಲಿ 2 ಅಂಕಣಗಳನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮೂರನೇ  ಮೈದಾನವಾಗಿ ಕಾಕೋಟುಪರಂಬು ಮೈದಾನವನ್ನು ಕಾಯ್ದಿರಿಸಲಾಗಿದೆ. ಮುಖ್ಯ ಮೈದಾನದಲ್ಲಿ 20ಸಾವಿರಕ್ಕೂ ಅಧಿಕ ಜನರಿಗೆ ಕುಳಿತುಕೊಳ್ಳಲು  ಬೃಹತ್ ಗ್ಯಾಲರಿಯನ್ನು ನಿರ್ಮಿಸಲಾಗುವುದು.  ವಾಹನ ನಿಲುಗಡೆಗಾಗಿ ಮೈದಾನದ ಸಮೀಪದ ಎಪಿಸಿಎಂಎಸ್ ಹಾಗೂ ಅರಮೇರಿ ಮಠದ ಗದ್ದೆಯನ್ನು ಉಪಯೋಗಿಸಲು ಸಿದ್ಧತೆ ನಡೆದಿದೆ.

ಈಗಾಗಲೇ ತಂಡಗಳ ನೋಂದಣಿಗೆ ವಿವಿಧೆಡೆಗಳಲ್ಲಿ 23 ಕೇಂದ್ರಗಳನ್ನು ತೆರೆಯಲಾಗಿದೆ. ಈ ಬಾರಿಯ ಹಾಕಿ ಉತ್ಸವವನ್ನು ವಿಭಿನ್ನವಾಗಿ ನಡೆಸಲು ತೀರ್ಮಾನಿಸಿರುವ ತಾತಂಡ ಕುಟುಂಬಸ್ಥರು ಕೊಡಗಿನ ಎಲ್ಲಾ ಕುಟುಂಬಗಳು ಈ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದೆ. ಆದರೂ, ಟೂರ್ನಿಗೆ 300ಕಿಂತಲೂ ಅಧಿಕ ತಂಡಗಳನ್ನು ಈ ಬಾರಿ ನಿರೀಕ್ಷಿಸಲಾಗುತ್ತಿದ್ದು, ‘ಗಿನ್ನಿಸ್ ಬುಕ್‌ ಆಫ್ ರೆಕಾರ್ಡ್‌’ಗೆ ಸೇರುವ ನಿರೀಕ್ಷೆಯನ್ನು ತಾತಂಡ ಕುಟುಂಬ ಹೊಂದಿದೆ.

15ಂದು ಸಂಜೆ  ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯ ಕೃತಕ ಹುಲ್ಲುಹಾಸಿನ ಮೈದಾನದಲ್ಲಿ ಟೂರ್ನಿಯ ಟ್ರೋಫಿಯನ್ನು ಅನಾವರಣಗೊಳಿಸಲಾಗಿದೆ. ತಾತಂಡ ಕಪ್‌ ಟೂರ್ನಿಯ ವಿಜೇತರಿಗೆ ಪ್ರಥಮ ಬಹುಮಾನ           ₨ 1 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₨ 50 ಸಾವಿರ ಹಾಗೂ ಆಕರ್ಷಕ ಟ್ರೋಫಿ, ಉಳಿದಂತೆ ಮೂರು ಹಾಗೂ ನಾಲ್ಕನೇ ಸ್ಥಾನ ಗಳಿಸಿದ ತಂಡಗಳು ಸೇರಿದಂತೆ ಇನ್ನು ಹಲವು ಬಹುಮಾನಗಳನ್ನು ನೀಡಲಾಗುವುದು.

ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಕಿ ಆಟವನ್ನು ಕಲಿತ ಹಲವು  ಆಟಗಾರರು ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಆಟಗಾರರ ತಂಡ ಹಾಗೂ ಕೊಡಗು ತಂಡ, ಮಡಿಕೇರಿ ಸಾಯಿ ಹಾಗೂ ಮೈಸೂರು ಸಾಯಿ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿದೆ.

ಕಲೆ ಹಾಗೂ ಕ್ರೀಡೆಗೂ ಅವಿನಾಭಾವ ಸಂಬಂಧ ಇರುವುದರಿಂದ ಉದ್ಘಾಟನೆಯ ದಿನದಂದು ಕೊಡಗಿನ ವಿವಿಧ ಕಲಾ– ಸಾಂಸ್ಕೃತಿಕ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಂಘಟಕರು ತೀರ್ಮಾನಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಕೊಡಗಿನ 18 ಮೂಲ ನಿವಾಸಿಗಳ ತಂಡದಿಂದ ಆಯ್ದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆಲ್ಲದೇ ಕುಶಾಲನಗರದ ಟಿಬೆಟನ್‌್ ಸಮುದಾಯದ ಡ್ಯ್ರಾಗನ್ ಶೋ ಅಂದೇ ಏರ್ಪಡಿಸಲಾಗಿದೆ.

‘ರಿಂಕ್‌ ಹಾಕಿ’ 
ತಾತಂಡ ಕಪ್‌ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳಿಗೆ ಪಂದ್ಯಾಟದ ಪ್ರಥಮ ಸುತ್ತಿನ ನಂತರ ಇದೇ ಪ್ರಥಮ ಪ್ರಯತ್ನವಾಗಿ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಹೊನಲು ಬೆಳಕಿನ ರಿಂಕ್ ಹಾಕಿ ಟೂರ್ನಿಯನ್ನು ಏರ್ಪಡಿಸಲಾಗಿದೆ. ರಿಂಕ್‌ ಹಾಕಿ ಟೂರ್ನಿಯಲ್ಲಿ ವಿಜೇತರಾದವರಿಗೂ ಪ್ರತ್ಯೇಕ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

ಟೂರ್ನಿಗೆ  ₨ 65 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.  ಸರ್ಕಾರ ಹಾಕಿ ಹಬ್ಬಕ್ಕೆ ₨ 30 ಲಕ್ಷ ಹಣ ಬಿಡುಗಡೆ ಮಾಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ಉಳಿದ ಭಾಗದಲ್ಲಿ ಪ್ರಾಯೋಜಕತ್ವ ಪಡೆದುಕೊಳ್ಳಲಾಗುತ್ತಿದೆ.

ತಾತಂಡ ಕಪ್‌ ಹಾಕಿ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ. ಹಿರಿಯರಾದ ಶಂಬು ನಾಣಯ್ಯ ಸಮಿತಿಯ ಅಧ್ಯಕ್ಷರು.  ತಾತಂಡ ಕಬೀರ್‌ ಗಣಪತಿ ಕೋಶಾಧಿಕಾರಿ,  ಬಿಪಿನ್ ಕಾವೇರಪ್ಪ ಸಮನ್ವಯಾಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ದೇಶಕರಾಗಿ ಪ್ರತಾಪ್‌, ತಿಮ್ಮಣ್ಣ, ನವೀನ್, ಪ್ರಭ ನಾಣಯ್ಯ ಸಮಿತಿಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.