ADVERTISEMENT

ಶಂಖುಹುಳು ಕಾಟಕ್ಕೆ ನಲುಗಿದ ಕಾಫಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 8:47 IST
Last Updated 1 ಅಕ್ಟೋಬರ್ 2017, 8:47 IST
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಭಾಗದ ಕಾಫಿ ತೋಟಗಳಲ್ಲಿ ಕಂಡುಬರುತ್ತಿರುವ ಶಂಖುಹುಳು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಭಾಗದ ಕಾಫಿ ತೋಟಗಳಲ್ಲಿ ಕಂಡುಬರುತ್ತಿರುವ ಶಂಖುಹುಳು   

ಮಡಿಕೇರಿ: ಕಾಫಿ ಹಾಗೂ ಕಾಳುಮೆಣಸಿನ ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ ಹಾಗೂ ಕಾಡಾನೆ ಹಾವಳಿಯಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆಯ ಬೆಳೆಗಾರರಿಗೆ ಇತ್ತೀಚೆಗೆ ಮತ್ತೊಂದು ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಉತ್ತರ ಕೊಡಗು ವ್ಯಾಪ್ತಿಯ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದ ಕಾಫಿ ತೋಟದಲ್ಲಿ ಶಂಖುಹುಳು ಕಾಟ ಕಾಣಿಸಿಕೊಂಡಿದ್ದು ಈ ವರ್ಷ ಸುರಿದ ಮಳೆಗೆ ಅದು ವ್ಯಾಪಕವಾಗಿ ಹಬ್ಬುತ್ತಿದೆ.

ಬೆಳ್ಳಾರಳ್ಳಿ, ಹಂಡ್ಲಿ, ಕೆರಳ್ಳಿ, ಬೀಕಳ್ಳಿ, ಶಾಂತಳ್ಳಿ, ಹುಲಸೆ ಗ್ರಾಮದ ನೂರಾರು ಎಕರೆ ಕಾಫಿ ತೋಟದ ಗಿಡಗಳಲ್ಲಿ ಶಂಖುಹುಳುಗಳು ಚಿತ್ತಾರ ಬಿಡಿಸಿದಂತೆ ಕಾಣಿಸುತ್ತಿವೆ. ಈ ವರ್ಷ ಹುಳುಗಳು ಕೊಡಗಿನ ಮಧ್ಯಭಾಗದ ತೋಟಗಳಿಗೂ ತಟ್ಟಿದ್ದು, ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ, ಪೊನ್ನಂಪೇಟೆಯ ಬೆಳೆಗಾರರೂ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕಾಫಿ ಗಿಡ, ಬಾಳೆ, ಕಾಳುಮೆಣಸಿನ ಬಳ್ಳಿ, ಅಡಿಕೆ, ಕಿತ್ತಳೆ ಗಿಡಗಳ ಮೇಲೆ ಈ ಹುಳುಗಳು ಗೆಜ್ಜೆಕಟ್ಟಿರುವಂತೆ ಕಾಣಿಸುತ್ತಿದ್ದು, ಬೆಳೆಗಾರರು ಹೈರಾಣಾಗಿದ್ದಾರೆ.
ಎಲೆಗಳನ್ನು ತಿನ್ನುವ ಮೂಲಕ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಚಿಕ್ಕ ಗಿಡಗಳಿಗೆ ಹೆಚ್ಚು ಹಾನಿ ಮಾಡುತ್ತಿವೆ. ಎಲೆಗಳನ್ನು ತಿಂದರೆ ಮಳೆ ಮುಗಿದ ಬಳಿಕ ಗಿಡಗಳು ಒಣಗಿ ನಿಲ್ಲುವ ಆತಂಕ ಎದುರಾಗಿದೆ.

ADVERTISEMENT

2015ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಹುಳುಗಳು ಈ ಬಾರಿ ಮಲೆನಾಡು ಭಾಗದಲ್ಲಿ ತೀವ್ರ ಸಮಸ್ಯೆ ತಂದೊಡ್ಡುತ್ತಿವೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು, ಜನ್ನಾಪುರ ಹಾಗೂ ಬಾಳೆಹೊನ್ನೂರು, ಹಾಸನ ಜಿಲ್ಲೆಯ ಸಕಲೇಶಪುರದ ಕೆಲವು ಭಾಗದ ಕಾಫಿ ತೋಟಗಳಲ್ಲೂ ಈ ಸಮಸ್ಯೆ ಇದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮೇಲ್ಭಾಗದಲ್ಲಿ ಗಟ್ಟಿಯಾದ ಚಿಪ್ಪುಹೊಂದಿರುವ ಹುಳುಗಳು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತವೆ. ಹಗಲು ವೇಳೆ ಗಿಡಗಳ ಎಲೆಮರೆಯಲ್ಲಿ ಅವಿತುಕೊಂಡು, ರಾತ್ರಿ ವೇಳೆ ಕಾರ್ಯಾಚರಣೆಗೆ ಇಳಿಯುತ್ತವೆ. ಬೇಸಿಗೆಯಲ್ಲಿ ಭೂಮಿ ಒಳಭಾಗಕ್ಕೆ ಸೇರಿಕೊಂಡು ಮಳೆಗಾಲದಲ್ಲಿ ಎಲೆಗಳನ್ನು ಕತ್ತರಿಸಿ ಹಾಕುತ್ತವೆ.

ಜಿಲ್ಲೆಯ ಹಂಡ್ಲಿ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಹುಳುಗಳು, ಈಗ ಅಂದಾಜು 400 ಎಕರೆಯಲ್ಲಿ ವ್ಯಾಪಿಸಿಕೊಂಡಿವೆ. ಶಂಖುಹುಳುಗಳ ಮೂಲ ಪೂರ್ವ ಆಫ್ರಿಕಾ.
ಸಮಸ್ಯೆಗಳಿರುವ ತೋಟಕ್ಕೆ ಕೃಷಿ ವಿಜ್ಞಾನಿಗಳು ಹಾಗೂ ಕೀಟತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೇಲ್ಭಾಗದ ಚಿಪ್ಪು ದಪ್ಪಗಿರುವ ಕಾರಣ ಕೀಟನಾಶಕ ಸಿಂಪಡಣೆಯಿಂದ ನಿಯಂತ್ರಣ ಸಾಧ್ಯವಾಗುತ್ತಿಲ್ಲ’ ಎಂದು ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದೇಶದಲ್ಲೂ ಇವುಗಳ ನಿಯಂತ್ರಣಕ್ಕೆ ಔಷಧಿ ಸಂಶೋಧಿಸಲು ಸಾಧ್ಯವಾಗಿಲ್ಲ. 2007ರಲ್ಲಿ ಆಂಧ್ರಪ್ರದೇಶದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು, ಕೇರಳದ ರಬ್ಬರ್‌ ತೋಟಗಳನ್ನೂ ಬಿಟ್ಟಿರಲಿಲ್ಲ. ತಿಪ್ಪೆ ಗೊಬ್ಬರ ಹಾಗೂ ನರ್ಸರಿಯಿಂದ ತಂದ ಗಿಡಗಳ ಮೂಲಕ ಕೊಡಗಿಗೂ ಕಾಲಿಟ್ಟಿದ್ದು, ಅತ್ಯಂತ ವೇಗವಾಗಿ ಸಂತಾನೋತ್ಪತ್ತಿ ಆಗುತ್ತಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.

ಏಕಕಾಲದಲ್ಲಿ 150ರಿಂದ 200 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಮೂರರಿಂದ ಐದು ವರ್ಷ ಜೀವಿತಾವಧಿ. ಕೆಲವು ಎಂಟು ವರ್ಷಗಳ ತನಕವೂ ಜೀವಿಸುತ್ತವೆ.
ಎಲೆಯನ್ನು ಬಿಟ್ಟು ಕಾಫಿ ಬೀಜ ತಿನ್ನುತ್ತಿಲ್ಲ ಎಂಬುದೇ ಸಮಾಧಾನ. ಹುಳುಗಳ ಸಮಗ್ರ ನಾಶಕ್ಕೆ ಯೋಜನೆ ತಯಾರಿಸಲಾಗಿದ್ದು, ಜಿಲ್ಲಾಧಿಕಾರಿ ಜತೆಗೂ ಚರ್ಚಿಸಲಾಗಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.