ಸೋಮವಾರಪೇಟೆ: ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವು ಅಗತ್ಯ, ಪಠ್ಯಪುಸ್ತಕಗಳಿಂದ ಕೇವಲ ಕಾಲು ಭಾಗವನ್ನು ಮಾತ್ರ ತಿಳಿಯಬಹುದಾಗಿದ್ದು, ಉಳಿದಿದ್ದನ್ನು ಶಾಲೆಯ ಹೊರಗೆ ಕಲಿಯಬೇಕಾಗುತ್ತದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಚನ್ನಬಸಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಮಕ್ಕಳ ಮಾತು ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಬೇಕು. ಶಾಲೆಗಳಿಗೆ ತೆರಳಿ ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರಿಂದ ಮಾಹಿತಿ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯೆ ಅನಿವಾರ್ಯವಾಗಿದ್ದು, ವಿದ್ಯೆ ಇಲ್ಲದವರಿಗೆ ಜೀವನ ಕಷ್ಟವಾಗುತ್ತದೆ ಎಂದರು.
ಸರ್ಕಾರ ಇಂದು ಉನ್ನತ ವ್ಯಾಸಂಗಕ್ಕೆ ಸಾಲ ಸೌಲಭ್ಯ ಒದಗಿಸುತ್ತಿದೆ. ಕಷ್ಟದಲ್ಲಿರುವ ಪೋಷಕರು ಈ ಸೌಕರ್ಯವನ್ನು ಬಳಸಿಕೊಂಡು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬಹುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ವಿ.ಕೆ.ಲೋಕೇಶ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿಯನ್ನು ಶಿಕ್ಷಣಕ್ಕಾಗಿ ವ್ಯಯಿಸುತ್ತಿದೆ. ಜನರು ಇದರ ಸದುಪಯೋಗ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಶೆಣೈ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಬಿಇಓ ರಾಮಚಂದ್ರರಾಜೇ ಅರಸ್, ಸಿಡಿಪಿಓ ಎಚ್.ಎಸ್‌ಬಲರಾಂ, ಸಮಾಜ ಕಲ್ಯಾಣಾಧಿಕಾರಿ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಮಕ್ಕಳ ಮಾತು ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ ಮತ್ತು ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳು ವಿಷಯ ಮಂಡಿಸಿದರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪಾಲಕರ ಪಾತ್ರ, ಪೋಷಣೆ ಎಂಬುದರ ಬಗ್ಗೆ ಪೋಷಕರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.