ADVERTISEMENT

ಸಂಗೀತ ‘ಕಾರಂಜಿ’ಗೂ ಸಿಡಿಲ ಹೊಡೆತ!

ಮತ್ತೆ ಕೆಟ್ಟು ನಿಂತ ನೀರಿನ ವೈಭವ; ಪ್ರವಾಸಿಗರಿಗೆ ನಿರಾಸೆ

ಅದಿತ್ಯ ಕೆ.ಎ.
Published 25 ಮೇ 2018, 9:47 IST
Last Updated 25 ಮೇ 2018, 9:47 IST
ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನ ಕಾರಂಜಿ
ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್‌ನ ಕಾರಂಜಿ   

ಮಡಿಕೇರಿ: ಕೆಲವೇ ದಿನಗಳ ಹಿಂದಷ್ಟೇ ದುರಸ್ತಿಗೊಂಡು ಪ್ರವಾಸಿಗರ ಕಣ್ಮನ ತಣಿಸುತ್ತಿದ್ದ ‘ರಾಜಾಸೀಟ್‌ ಸಂಗೀತ ಕಾರಂಜಿ’ ಮತ್ತೆ ಕೆಟ್ಟು ನಿಂತಿದೆ. ಮಡಿಕೇರಿಯಲ್ಲಿ ಕಳೆದ ವಾರದ ಸಿಡಿಲಬ್ಬರದ ಬಿಸಿಯು ಈ ಕಾರಂಜಿಗೂ ತಟ್ಟಿದೆ. ಸಿಡಿಲ ಹೊಡೆತದಿಂದ ಕಾರಂಜಿಯು ವೈಯಾರ ನಿಲ್ಲಿಸಿದ್ದು, ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದಾರೆ.

ಸುಮಾರು ಒಂದು ವರ್ಷ ಸಂಗೀತ ಕಾರಂಜಿಯು ಕೆಟ್ಟು ನಿಂತಿತ್ತು. ಮಾರ್ಚ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನದ ವೇಳೆ ದುರಸ್ತಿಪಡಿಸಲಾಗಿತ್ತು. ನಿತ್ಯಸಂಜೆ ಬರುವ ಪ್ರವಾಸಿಗರಿಗೆ ಇದು ಒಂದು ಗಂಟೆ ರಸದೌತಣ ನೀಡುತ್ತಿತ್ತು. ಆದರೆ, ಒಂದು ವಾರದಿಂದ ನೀರು ಚಿಮ್ಮುತ್ತಿಲ್ಲ; ಸಂಗೀತದ ರಸಧಾರೆಯೂ ಹರಿಯುತ್ತಿಲ್ಲ.

‘ಕಾರಂಜಿ ನಡೆಯುತ್ತಿರುವಾಗಲೇ ಸಿಡಿಲು ಹೊಡೆದ ಕಾರಣ ಸಾಫ್ಟ್‌ವೇರ್‌ಗೆ ಧಕ್ಕೆಯಾಗಿದೆ. ಜೊತೆಗೆ, ಕೆಲವು ವೈರ್‌ಗಳು ಸುಟ್ಟುಹೋಗಿವೆ. ಬೆಂಗಳೂರು ಕಚೇರಿಗೆ ಮಾಹಿತಿ ನೀಡಲಾಗಿದೆ. ಎಂಜಿನಿಯರ್‌ಗಳು ಪರಿಶೀಲಿಸಿ, ಸಾಫ್ಟ್‌ವೇರ್‌ ಕೊಂಡೊಯ್ದಿದ್ದಾರೆ. ಮುಂದಿನ ವಾರ ದುರಸ್ತಿಗೊಳ್ಳಲಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಹೇಳುತ್ತಾರೆ.
ನಿರ್ವಹಣೆ ಕಷ್ಟ: ‘ಫಲಪುಷ್ಪ ಪ್ರದರ್ಶನಕ್ಕೂ ಮೊದಲು ₹ 4.90 ಲಕ್ಷ ವೆಚ್ಚದಲ್ಲಿ ಕಾರಂಜಿಯನ್ನು ದುರಸ್ತಿಪಡಿಸಲಾಗಿತ್ತು. ಬಹಳ ದಿನದಿಂದ ಕೆಟ್ಟು ನಿಂತಿದ್ದರ ಪರಿಣಾಮವಾಗಿ ನೀರಿನ ಪೈಪ್‌ಗಳು ತುಕ್ಕು ಹಿಡಿದಿದ್ದವು. ಎಲ್ಲವನ್ನು ಬದಲಾವಣೆ ಮಾಡಲಾಯಿತು. ಈಗ ಸಾಫ್ಟ್‌ವೇರ್‌ಗೆ ಮಾತ್ರ ಹಾನಿಯಾಗಿದೆ. ನೀರಿನ ನೃತ್ಯಕ್ಕೆ ತಕ್ಕಂತೆ ಸಂಗೀತವು ಹೊಂದಾಣಿಕೆ ಆಗುತ್ತಿಲ್ಲ. ದುರಸ್ತಿಯಾದ ಕೂಡಲೇ ಮತ್ತೆ ಚಾಲನೆ ನೀಡಲಾಗುವುದು. ಜಿಲ್ಲಾಧಿಕಾರಿ ಆದೇಶದಂತೆ ಕಾರಂಜಿಗೆ ಹೆಚ್ಚಿನ ಸಮಯ ನೀಡಲಾಗುತ್ತಿದೆ. ನಿತ್ಯ 6.30ರಿಂದ 7.30ರ ತನಕ ಕಾರಂಜಿ ಇರಲಿದೆ’ ಎಂದು ಅಧಿಕಾರಿ ಕೆ.ಪಿ. ದೇವಕ್ಕಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಸುಮಾರು ಒಂದು ಎಕರೆ ವಿಶಾಲ ಪ್ರದೇಶದಲ್ಲಿ ರಾಜಾಸೀಟ್‌ ಉದ್ಯಾನ ಹರಡಿಕೊಂಡಿದೆ. ಆದರೆ, ಉದ್ಯಾನ ನಿರ್ವಹಣೆ ಸಿಬ್ಬಂದಿಗೆ ಕಷ್ಟವಾಗಿದೆ. ಉದ್ಯಾನದಲ್ಲಿರುವ ಲೈಟ್‌ ಹಾಗೂ ಕಾರಂಜಿಗೆ ನೆಲದಡಿ ಕೇಬಲ್‌ ಎಳೆಯಲಾಗಿದೆ. ಉದ್ಯಾನದಲ್ಲಿ ಹುಲ್ಲು, ನರ್ಸರಿಯ ಕೆಲಸದ ವೇಳೆ ವೈರ್‌ ತುಂಡಾಗುತ್ತಿವೆ. ಉದ್ಯಾನಕ್ಕೆ ಬರುವ ಪ್ರವಾಸಿಗರು ಹುಲ್ಲು ಹಾಸಿನ ಮೇಲೆಲ್ಲಾ ನಡೆದಾಡುತ್ತಾರೆ. ಎಷ್ಟು ಎಚ್ಚರಿಕೆ ನೀಡಿದರೂ ಮಾತು ಕೇಳುವುದಿಲ್ಲ. ಪ್ರವೇಶ ಶುಲ್ಕವು ಕೇವಲ ₹5. ವಾರ್ಷಿಕ ₹4ರಿಂದ ₹ 5 ಲಕ್ಷದಷ್ಟು ನಿರ್ವಹಣೆಗೆ ಅಗತ್ಯವಿದೆ’ ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ: ‘ಉದ್ಯಾನದ ಹುಲ್ಲುಹಾಸು, ಗಿಡಗಳ ನಿರ್ವಹಣೆ ಬೇಸಿಗೆಯಲ್ಲಿ ಕಷ್ಟವಾಗಿದೆ. ಕೊಳವೆ ಬಾವಿಯ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.

ತೆರೆದ ಬಾವಿಗೆ ಮೋಟಾರ್‌ ಅಳವಡಿಸಿ, ಅದರ ನೀರನ್ನೇ ಗಿಡಗಳಿಗೆ ಬಳಸಲಾಗುತ್ತಿದೆ. ಬೇಸಿಗೆಯಲ್ಲಿ ನೀರಿಗೂ ಸಮಸ್ಯೆ ಉಂಟಾಗುತ್ತಿದೆ. ಕಳೆದ ಆರು ತಿಂಗಳಿಂದ ಈಚೆಗೆ ರಾಜಾಸೀಟ್‌ ನಿರ್ವಹಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ. ಹಿರಿಯ ಅಧಿಕಾರಿಯೂ ಕಾಳಜಿ ತೆಗೆದುಕೊಂಡಿದ್ದಾರೆ. ಪಾರ್ಕಿಂಗ್‌ ನಿರ್ವಹಣೆಯನ್ನು ಪೊಲೀಸರಿಗೆ ವಹಿಸಿದ ಬಳಿಕ ಪ್ರವಾಸಿಗರಿಗೆ ಕಿರಿಕಿರಿ ತಪ್ಪಿದೆ’ ಎಂದು ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.

**
ವಾರದೊಳಗೆ ಸಂಗೀತ ಕಾರಂಜಿ ಮತ್ತೆ ಚಿಮ್ಮಲಿದೆ. ಸ್ಥಳೀಯವಾಗಿ ‘ಸಾಫ್ಟ್‌ವೇರ್‌’ ದುರಸ್ತಿಪಡಿಸುವ ತಜ್ಞರ ಕೊರತೆಯಿಂದ ಸಮಸ್ಯೆ ಉಂಟಾಗಿದೆ
ಕೆ.ಪಿ. ದೇವಕ್ಕಿ, ತೋಟಗಾರಿಕೆ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.