ADVERTISEMENT

ಸಂಘಟಿತರಾಗಲು ಬಿಲ್ಲವ ಸಮುದಾಯಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 10 ಮೇ 2012, 8:10 IST
Last Updated 10 ಮೇ 2012, 8:10 IST

ಕುಶಾಲನಗರ: ಬಿಲ್ಲವ ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಪುತ್ತೂರು ಬಿಲ್ಲವ ಸಮಾಜದ ಅಧ್ಯಕ್ಷ ಕೆ.ಪಿ.ದಿವಾಕರ್ ಹೇಳಿದರು.

ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಕಾವೇರಿ ನಿಸರ್ಗಧಾಮದ ಬಳಿಯ ಕೆಸಿಟಾ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವ ಸ್ಥಿತಿವಂತರು ತಮ್ಮ ಜನಾಂಗದ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಬಿಲ್ಲವ ಜನಾಂಗದ ಧರ್ಮಗುರುಗಳಾಗಿದ್ದ ನಾರಾಯಣ ಗುರು ಜಯಂತಿ ದಿನವನ್ನು ರಾಜ್ಯ ಸರ್ಕಾರದ ವತಿಯಿಂದ ಸರ್ಕಾರಿ ರಜಾದಿನವನ್ನಾಗಿ ಘೋಷಿಸಬೇಕು ಎಂದು ಸಮಾರಂಭದಲ್ಲಿ ಒತ್ತಾಯಿಸಲಾಯಿತು.

ಮಡಿಕೇರಿ ತಾಲ್ಲೂಕು ಬಿಲ್ಲವ ಸಮಾಜದ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ,  ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಬಿಲ್ಲವ ಜನರು ವಾಸಿಸುತ್ತಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು  ನಿರ್ಲಕ್ಷಿಸಿವೆ. ಬಿಲ್ಲವ ಜನಾಂಗದವರು ಸಂಘಟಿತರಾಗುವ ಮೂಲಕ ಉತ್ತಮ ಸಮಾಜವನ್ನು ಕಟ್ಟಬೇಕು ಎಂದರು.

ಬಿಲ್ಲವ ಜನಾಂಗದ ಆಚಾರ ವಿಚಾರ, ಕಲೆ, ಸಾಹಿತ್ಯ, ಸಂಸ್ಕೃತಿ ಕುರಿತು ಪರಿಚಯಿಸುವ ಗ್ರಂಥವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ವಿನೋದ್ ತಿಳಿಸಿದರು.

ಸಮಾಜದ ಅಧ್ಯಕ್ಷ ಬಿ.ವಿ. ಸತೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ವಿರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಶೇಖರ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಚಂದ್ರಹಾಸ್,    ಸುಂಟಿಕೊಪ್ಪ ರಾಮ ಮಂದಿರ ಸಮಿತಿ ಅಧ್ಯಕ್ಷ ಎಂ.ಎ.ಗಂಗಾಧರ್, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಮೋಹನ್ ಕುಮಾರ್, ಉದ್ಯಮಿ ಬಿ.ಕೆ.ಕಷ್ಣ ಇತರರು ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಹಾಸಿನಿ ಪ್ರಾರ್ಥಿಸಿದರು. ಬಿ.ಎ.ರವೀಂದ್ರ ಸ್ವಾಗತಿಸಿದರು. ಬಿ.ಎಂ.ರಮೇಶ್ ನಿರ್ವಹಿಸಿದರು. ನಂತರ  ಮಕ್ಕಳು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.