ADVERTISEMENT

ಸಂಸ್ಕೃತಿ ಬಿಂಬಿಸಿದ ಸಾಯಿಶಂಕರ ಶಾಲೆ ಮಕ್ಕಳು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:55 IST
Last Updated 25 ಫೆಬ್ರುವರಿ 2012, 5:55 IST
ಸಂಸ್ಕೃತಿ ಬಿಂಬಿಸಿದ ಸಾಯಿಶಂಕರ ಶಾಲೆ ಮಕ್ಕಳು
ಸಂಸ್ಕೃತಿ ಬಿಂಬಿಸಿದ ಸಾಯಿಶಂಕರ ಶಾಲೆ ಮಕ್ಕಳು   

ಗೋಣಿಕೊಪ್ಪಲು: ವರ್ಣರಂಜಿತ ಉಡುಗೆ ತೊಟ್ಟ ಹೆಣ್ಣುಮಕ್ಕಳು, ಕೊಡವ ಸಾಂಪ್ರದಾಯಕ ದಿರಸು ಧರಿಸಿದ ಹುಡುಗರು ಉಮ್ಮತ್ತಾಟ್, ಬೊಳಕಾಟ್, ಕೋಲಾಟ ನೃತ್ಯಗಳ ಮೂಲಕ  ಈಚೆಗೆ ಸಾಯಿಶಂಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಊರ್ ನಮ್ಮೆಯಲ್ಲಿ ವಿಜೃಂಭಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಊರ್ ನಮ್ಮೆ ಸಮಾರಂಭದಲ್ಲಿ ನೃತ್ಯಮಾಡಿದ ವಿದ್ಯಾರ್ಥಿಗಳು ತಮ್ಮ ಸಹಜ ನೃತ್ಯದ  ಮೂಲಕ ಗಮನ ಸೆಳೆದರು.

ಕೊಡಗಿನ ಸಾಂಪ್ರದಾಯಕ  ಕಲೆಯಾದ ಉಮ್ಮತ್ತಾಟ್ ನೃತ್ಯ ಅದ್ಭುತವಾಗಿ ಮೂಡಿಬಂತು. ಕೊಡವ ಸಂಸ್ಕೃತಿಯ ವಸ್ತ್ರ ಧರಿಸಿದ ಯುವತಿಯರು `ಕಾವೇರಮ್ಮೆ ದೇವಿ ತಾಯಿ ಕಾಪಾಡೆಂಗಳ~ ಹಾಡಿಗೆ ಹೆಜ್ಜೆ ಇಡುತ್ತ, ಕೈಯಲ್ಲಿ  ತಾಳ ಹಾಕುತ್ತ ನರ್ತಿಸಿದರು.

ಎಲ್ಲ ಒಂದೇ ವಯೋಮಾನದ ಬಾಲಕಿಯರು ಒಂದೇ ಬಗೆಯ ಹೆಜ್ಜೆಹಾಕಿ  ನೃತ್ಯಕ್ಕೆ ಮೆರಗು ತುಂಬಿದರು. ಬಾಲಕರು ಕೂಡ ಪುರುಷರ   ಕಲೆಯಾದ ಬೊಳಕಾಟ್ ನೃತ್ಯ ಮಾಡಿದರು. ಅವರು ತೊಟ್ಟಿದ್ದ ಕೊಡಗಿನ ವೀರಪುರುಷರ ಧಿರಿಸು ನೃತ್ಯಕ್ಕೆ ಕಳೆ ತಂದಿತು. ಇದರ ಜೊತೆಗೆ ಕೋಲಾಟ ಹಾಗೂ ಇತರ ನೃತ್ಯಗಳು ರಂಜನೀಯವಾಗಿ  ಮೂಡಿ ಬಂದವು.


ನಿತ್ಯವೂ ಸಮವಸ್ತ್ರದಲ್ಲಿ ಕಂಡು ಬರುತ್ತಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ದಿನ ಕೊಡವ ಸಂಪ್ರದಾಯದ ಬಣ್ಣಬಣ್ಣದ ಸಾಂಪ್ರದಾಯಿಕ  ವಸ್ತ್ರಧರಿಸಿ ಕಾಲೇಜ್ ಕ್ಯಾಂಪಸ್‌ಗೆ ವಿಶೇಷ ಕಳೆ ತುಂಬಿದ್ದರು. 
ಕಾಲೇಜಿನ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯೂ ಸುಂದರವಾಗಿತ್ತು.  ಕಿರುಗೂರಿನ ಮಹಿಳಾ ಸಮಾಜದವರಿಂದಲೂ ಉಮ್ಮತ್ತಾಟ್  ನೃತ್ಯ ನಡೆಯಿತು. ಹಸಿರು ಪರಿಸರದ ನಡುವೆ ನಡೆದ ವಿದ್ಯಾರ್ಥಿಗಳ ನೃತ್ಯ  ಕಾರ್ಯಕ್ರಮ ಇಡೀ ಕಾಲೇಜು ಕ್ಯಾಂಪಸ್‌ಗೆ ಸಾಂಸ್ಕೃತಿಕ ಕಳೆ ತುಂಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT