ADVERTISEMENT

ಸಚಿವರ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2013, 9:42 IST
Last Updated 8 ಫೆಬ್ರುವರಿ 2013, 9:42 IST
ಅಕ್ರಮ-ಸಕ್ರಮ ಯೋಜನೆಯಲ್ಲಾಗಿರುವ ಅವ್ಯವಹಾರಕ್ಕೆ ನೈತಿಕ ಹೊಣೆ ಹೊತ್ತು ಜಿಲ್ಲೆಯ ಇಬ್ಬರೂ ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಕ್ರಮ-ಸಕ್ರಮ ಯೋಜನೆಯಲ್ಲಾಗಿರುವ ಅವ್ಯವಹಾರಕ್ಕೆ ನೈತಿಕ ಹೊಣೆ ಹೊತ್ತು ಜಿಲ್ಲೆಯ ಇಬ್ಬರೂ ಶಾಸಕರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ-ಸಕ್ರಮ ಯೋಜನೆಯ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಹಾಗೂ ಶಾಸಕ ಕೆ.ಜಿ.ಬೋಪಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಕೋಟೆ ಆವರಣದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ಅಕ್ರಮ-ಸಕ್ರಮ ಯೋಜನೆಯಡಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ, ಸಚಿವರ ಕುಟುಂಬದವರೇ ಅಕ್ರಮ-ಸಕ್ರಮ ಹಗರಣದಲ್ಲಿ ಭಾಗಿಯಾಗಿರುವ ಕಾರಣ ಸಚಿವ ರಂಜನ್ ರಾಜೀನಾಮೆ ನೀಡಬೇಕು. ಇದಲ್ಲದೇ ವಿರಾಜಪೇಟೆ ತಾಲ್ಲೂಕಿನಲ್ಲಿ ಈ ಅವ್ಯವಹಾರಗಳು ನಡೆದಿರುವ ಕಾರಣ ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ ಕೂಡ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಾನೂನಿಗೆ ವಿರುದ್ಧವಾಗಿ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಸಕ್ರಮಗೊಳಿಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ 120 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಇದು ಅಧಿಕಾರ ದುರ್ಬಳಕೆಯ ಹಾಗೂ ಭ್ರಷ್ಟಾಚಾರದ ಪರಮಾವಧಿ ಎಂದು ಹೇಳಿದರು.

ಸಚಿವರು ಹಾಗೂ ಶಾಸಕರು ಮುಂದುವರಿದರೆ ಈ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇದೆ. ಆದ್ದರಿಂದ ಇವರಿಬ್ಬರ ರಾಜೀನಾಮೆಯನ್ನು ಪಡೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ ಬಿ.ಟಿ. ಪ್ರದೀಪ್, ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು. ತೀರಿಹೋದ ಅತ್ತೆ ಹೆಸರಿನಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪಡೆದಿರುವ ಮಾಜಿ ಸಚಿವ ಬಿ.ಎ. ಜೀವಿಜಯ ವಿರುದ್ಧವೂ ತನಿಖೆ ನಡೆಸಿ, ಕಾನೂನಿನ ರೀತಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ವೀಣಾ ಅಚ್ಚಯ್ಯ, ಕುಮುದಾ ಧರ್ಮಪ್ಪ, ಸರಿತಾ ಪೂಣಚ್ಚ, ಶಕುಂತಲಾ ರವೀಂದ್ರ, ವಿ.ಪಿ. ಸುರೇಶ್, ಬಿ.ಎಸ್. ತಮ್ಮಯ್ಯ, ಅರುಣ್ ಮಾಚಯ್ಯ, ನೆರವಂಡ ಉಮೇಶ್, ಹಾರೂನ್, ಟಿ.ಎಂ. ಅಯ್ಯಪ್ಪ, ಪದ್ಮಿನಿ ಪೊನ್ನಪ್ಪ, ಸುಮಾ ವಸಂತ, ಕೊಲ್ಯದ ಗಿರೀಶ್, ಕೆ.ಎಂ. ಲೋಕೇಶ್ ಭಾಗವಹಿಸಿದ್ದರು.

ಸಚಿವರ ಹೇಳಿಕೆಗೆ ಎಸ್‌ಡಿಪಿಐ ಖಂಡನೆ
ಜಿಲ್ಲೆಯಲ್ಲಿ ಭೂ ಅಕ್ರಮ ಕಬಳಿಕೆ ಮಾಡಿರುವುದು ಎಲ್ಲರಿಗೂ ತಿಳಿದಿದ್ದರೂ, ಸಚಿವ ರಂಜನ್ ಮಾತ್ರ ತಮಗೆ ಈ ಬಗ್ಗೆ ಅರಿವಿಲ್ಲ ಎಂದು ಹೇಳಿರುವುದನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಫಜಲುಲ್ಲಾ ಖಂಡಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಭೂ ಅವ್ಯವಹಾರ ನಡೆಯುತ್ತಿದ್ದರೂ, ಇಷ್ಟು ದಿನಗಳವರೆಗೆ ಸಚಿವರು ಮೌನ ವಹಿಸಲು ಕಾರಣವೇನು? ತಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಬಡವರು ನಿವೇಶನಕ್ಕಾಗಿ ಅಂಗಲಾಚಿ ಹಲವು ಬಾರಿ ಮನವಿ ನೀಡಿದ್ದರೂ, ಅದಕ್ಕೆ ಜಾಗವಿಲ್ಲ ಎಂದು ಹೇಳಿಕೆ ನೀಡುವ ಆಡಳಿತರೂಢರು ಇದೀಗ ಭೂ ಕಬಳಿಕೆಗೆ ಜಾಗ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಹಕಾರ ನೀಡಿರುವ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸಬೇಕೆಂದು ಅವರು ಒತ್ತಾಯಿಸಿದರು.

ಅಕ್ಕಿ ಬೆಲೆ ಏರಿಕೆ-ಖಂಡನೆ: ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಫಜಲುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷವು ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 2 ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ತನ್ನ ಮಾತಿನಂತೆ ನಡೆದುಕೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದರು. ಎಸ್‌ಡಿಪಿಐ ಜಿಲ್ಲಾ ಸಮಿತಿ ಕಾರ್ಯದರ್ಶಿ ಅಮೀನ್ ಮೋಹಿಸಿನ್, ಅಬ್ದುಲ್ ಲತೀಫ್ ಇದ್ದರು.

ಅಧಿಕಾರಿಗಳ ಅಮಾನತ್ತಿಗೆ ಜೆಡಿಎಸ್ ಆಗ್ರಹ
ಮಡಿಕೇರಿ: ಜಿಲ್ಲೆಯಲ್ಲಿನ ಅಕ್ರಮ- ಸಕ್ರಮ ಸಮಿತಿಯಲ್ಲಿ ನಡೆದಿರುವ ಭೂ ಹಗರಣದಲ್ಲಿ ಭಾಗಿಯಾಗಿರುವ ತಹಶೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿ.ಪಿ. ಶಶಿಧರ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ- ಸಕ್ರಮ ಸಮಿತಿಯ ಅಧ್ಯಕ್ಷರ ಹಾಗೂ ಅವರ ಕುಟುಂಬದವರ ಹೆಸರಿಗೆ ಭೂಮಿ ಮಂಜೂರಾಗಿರುವ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಸಚಿವ ರಂಜನ್ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಭೂ ಹಗರಣ ನಡೆದಿರುವುದು ಎಲ್ಲರಿಗೂ ತಿಳಿದಿದ್ದು, ಮತ್ತೊಮ್ಮೆ ತನಿಖೆಗೆ ಆದೇಶ ಮಾಡುವ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕುವುದು ಬೇಡ ಎಂದು ಹೇಳಿದರು. ವಿರಾಜಪೇಟೆಯ ಶಾಸಕರಾಗಿರುವ ಬೋಪಯ್ಯ ಅವರು ಈ ಭೂ ಕಬಳಿಕೆಯ ವಿರುದ್ಧ ಯಾವುದೇ ಹೇಳಿಕೆ ನೀಡದಿರುವುದು ಸಾರ್ವಜನಿಕರಲ್ಲಿ ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಭೂ ಹಗರಣದ ಹಿನ್ನೆಲೆಯಲ್ಲಿ ರಂಜನ್ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕ್ಲ್ಲಿಲ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ರಂಜನ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ಹಾಗೂ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸುವಂತೆ ಒತಾಯಿಸಿ  ಫೆ.11ರಂದು (ಸೋಮವಾರ) ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಈ ಭ್ರಷ್ಟಾಚಾರದ ಕುರಿತು ಫೆ.16 ರಂದು ಶನಿವಾರಸಂತೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಜೆಡಿಎಸ್ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಬಿ.ವೈ. ರಾಜೇಶ್, ನಗರಾಧ್ಯಕ್ಷ ಮನೋಜ್ ಬೋಪಯ್ಯ, ವಿದ್ಯಾರ್ಥಿ ಜನತಾ ದಳದ ಸಂಚಾಲಕ ಪವನ್ ಪೆಮ್ಮಯ್ಯ, ಯುವ ಜೆಡಿಎಸ್ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ರಾಜ್ಯ ಜೆಡಿಎಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ಸುರೇಶ್ ಗೋಪಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.