ADVERTISEMENT

ಸರ್ಕಾರಿ ಉರ್ದು ಶಾಲೆಗಳಿಗೆ ಹೆಚ್ಚಿನ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 7:20 IST
Last Updated 6 ಜನವರಿ 2011, 7:20 IST

ಶನಿವಾರಸಂತೆ: ಮುಸ್ಲಿಂ ಜನಾಂಗದ ಮಕ್ಕಳು ಮಧ್ಯದಲ್ಲೆ ಶಾಲೆ ಬಿಡುವುದರಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹಾಗಾಗದಂತೆ ಸರ್ಕಾರ ಉರ್ದು ಶಾಲೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಕೊಡ್ಲಿಪೇಟೆ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಮುಜ್ಹಮಿಲ್ ಅಕ್ತರ್ ಹೇಳಿದರು. ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದಡಿ ಮುಸ್ಲಿಂ ಸಮುದಾಯದವರಿಗೆ ಏರ್ಪಡಿಸಿದ್ದ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಶಿಕ್ಷಣದ ಸಾಮಾನ್ಯ ಮತ್ತು ವಿಶಾಲ ಅರ್ಥದ ಬಗ್ಗೆ, ಔಪಚಾರಿಕ ಶಿಕ್ಷಣದ ಹಾಗೂ ಶಿಕ್ಷಣದಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಶಿವರಾಂ ಮಾತನಾಡಿ, ಸರ್ವ ಶಿಕ್ಷಣ ಅಭಿಯಾನದಡಿ ಅಲ್ಪಸಂಖ್ಯಾತರಿಗೆ, ಧಾರ್ಮಿಕ ಮುಖಂಡರಿಗೆ, ಪೋಷಕರಿಗೆ ಏರ್ಪಡಿಸುವ ಜಾಗೃತಿ ಶಿಬಿರಗಳ ಬಗ್ಗೆ ಮತ್ತು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳುವ ಸಾಹಿತ್ಯ, ಜಾಗೃತಿ ಮೇಳ ಹಾಗೂ ಐಕ್ಯು ಕಾರ್ಯಕ್ರಮಗಳ ಬಗ್ಗೆ ಹೇಳಿದರು. ಸ್ಥಳೀಯ ಮಸೀದಿಯ ಇಮಾಮ್ ಮೌಲವಿ ಹಫೀಜ್‌ಮಹಮ್ಮದ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜತೆಗೆ ಔಪಚಾರಿಕ ಶಿಕ್ಷಣವನ್ನು ನೀಡುವಂತೆ ಕರೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಮೀರ್‌ಜಾನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ.ಪಿ.ಶಾಲಾ ಮುಖ್ಯಶಿಕ್ಷಕ ಎಂ.ಆರ್.ಮಲ್ಲೇಶ್, ಉರ್ದು ಶಾಲಾ ಮುಖ್ಯಶಿಕ್ಷಕಿ ಫಾತಿಮುನ್ನಿಸಾ ಹಾಗೂ ಪೋಷಕರು ಉಪಸ್ಥಿತರಿದ್ದರು. ಮುಜ್ಹಮಿಲ್ ಅಕ್ತರ್ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಡಿ.ಎಲ್.ಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.