ADVERTISEMENT

ಸಹೋದರರ ಕಲಹ: ಗುಂಡು ಹಾರಿಸಿ ಕೊಲೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:28 IST
Last Updated 15 ಡಿಸೆಂಬರ್ 2012, 10:28 IST

ವಿರಾಜಪೇಟೆ: ಅಣ್ಣ ತಮ್ಮಂದಿರ ನಡುವೆ ನಡೆದ ಕಲಹದಲ್ಲಿ ತಮ್ಮನ ಎದೆಗೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಸಮೀಪದ ಕೆದಮುಳ್ಳೂರು ಗ್ರಾಮದಲ್ಲಿ ಗುರುವಾರ ಸಂಜೆ 6ರ ಸುಮಾರಿಗೆ ಸಂಭವಿಸಿದೆ.

ಕೆದಮುಳ್ಳೂರು ನಿವಾಸಿ ಸಾಬಾ ಭೀಮಯ್ಯ (42) ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿ. ಈತನ ಅಣ್ಣ ಗಣಪತಿ ಕೊಲೆ ಆರೋಪಿ. ಇವರಿಬ್ಬರೂ ಒಂದೇ ತಾಯಿಯ ಮಕ್ಕಳಾಗಿದ್ದು, ಅವರವರ ಪತ್ನಿ, ಮಕ್ಕಳ ಜತೆ ಬೇರೆಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಗುರುವಾರ ಇಬ್ಬರ ನಡುವೆ ನಡೆದ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ.

ಘಟನೆ ವಿವರ: ಬೆಂಗಳೂರಿನಲ್ಲಿ ಭದ್ರತಾ ಕೆಲಸ ಮಾಡುತ್ತಿದ್ದ ಸಾಬಾ ಭೀಮಯ್ಯ ಗುರುವಾರ ಬೆಳಿಗ್ಗೆ ಕೆದಮುಳ್ಳೂರಿನ ತನ್ನ ಮನೆಗೆ ಬಂದಿದ್ದ. ಅಣ್ಣ ಗಣಪತಿ ಜತೆ ಸೇರಿ ಮಧ್ಯಾಹ್ನದವರೆಗೂ ಕಾಲ ಕಳೆದ. ಇಬ್ಬರೂ ಸೇರಿ ಕಡಂಗ ಗ್ರಾಮಕ್ಕೆ ಹೋಗಿ ಒಟ್ಟಿಗೆ ಊಟ ಮಾಡಿದರು. ಜತೆಯಲ್ಲೇ ಮನೆಗೆ ಮರಳಿದ್ದರು. ಭೀಮಯ್ಯ ಕೆಲಹೊತ್ತು ತನ್ನ ಪತ್ನಿಯೊಂದಿಗೆ ಮಾತನಾಡಿದ. ಇದಾದ ಕೆಲವೇ ಹೊತ್ತಿನಲ್ಲಿ ಭೀಮಯ್ಯ ತನ್ನ ಅಣ್ಣನ ಮೇಲೆ ರೇಗುತ್ತ ಜಗಳಕ್ಕೆ ಬಂದ. ಏನಾಯಿತು ಎಂದು ತಿಳಿಯುವಷ್ಟರಲ್ಲಿ ಗಣಪತಿಯ ತಲೆಗೆ ಚೂರಿಯಿಂದ ಇರಿದ. ಇದರಿಂದ ಗಲಿಬಿಲಿಗೊಂಡ ಗಣಪತಿ ತಪ್ಪಿಸಿಕೊಂಡು ಓಡಿದ. ಆದರೂ ಭೀಮಯ್ಯ ಆತನನ್ನು ಅಟ್ಟಿಸಿಕೊಂಡು ಮನೆವರೆಗೂ ಹೋದ.

ಗಣಪತಿಯ ಮನೆಯಲ್ಲಿ ಆತನ ಮಗ ಜೀವನ್ ಕೂಡ ಇದ್ದ. ಮಾರಕಾಸ್ತ್ರ ಹಿಡಿದುಕೊಂಡು ಬಂದ ಭೀಮಯ್ಯ ಜೀವನ್‌ನನ್ನೂ ಕೊಲೆ ಮಾಡಬಹುದು ಎಂಬ ಭಯದಿಂದ, ಗಣಪತಿ ತನ್ನ ಮನೆಯಲ್ಲಿದ್ದ ಕೋವಿಯನ್ನು ತೋರಿಸಿ ಬೆದರಿಸಿದ. ಒಂಟಿ ನಳಿಗೆಯ ಕೋವಿಯಿಂದ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮನಿಗೆ ಎಚ್ಚರಿಕೆ ನೀಡಿದ. ಆದರೂ ಕಲಹ ನಿಲ್ಲದ ಕಾರಣ ಕೋವಿಯಿಂದ ತಮ್ಮನ ಎದೆಗೆ ಗುಂಡು ಹಾರಿಸಿದ. ಕ್ಷಣಾರ್ಧದಲ್ಲೇ ಭೀಮಯ್ಯ ಪ್ರಾಣ ಬಿಟ್ಟ.

ಚೂರಿ ಇರಿತದಿಂದಾಗಿ ಗಣಪತಿ ತಲೆಗೂ ತೀವ್ರ ಪೆಟ್ಟಾಗಿದೆ. ಪೊಲೀಸರ ಕಾವಲಿ ಮಧ್ಯೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಗಳ ಬಿಡಿಸಲು ಬಂದ ಭೀಮಯ್ಯನ ಪತ್ನಿ ಸುಶಿ ನೀಲಮ್ಮ ಹಾಗೂ ಗಣಪತಿಯ ಪತ್ನಿ ಡಾಟಿಗೂ ಚೂರಿ ತಿವಿದ ಗಾಯಗಳಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಪಿಐ ಪಿ.ಪಿ. ಸಂತೋಷ್ ಅವರು ಗುರುವಾರ ಸಂಜೆಯೇ ಸ್ಥಳಕ್ಕೆ ಭೇಟಿ ನೀಡಿ, ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಶುಕ್ರವಾರ ಗ್ರಾಮಕ್ಕೆ ಬಂದು ಮಾಹಿತಿ ಪಡೆದರು. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.