ADVERTISEMENT

ಸುರಿಯುವ ಮಳೆಯಲಿ ಬೆಳ್ಳಕ್ಕಿ ಕಲರವ

ಸಿ.ಎಸ್.ಸುರೇಶ್
Published 23 ಜೂನ್ 2013, 4:59 IST
Last Updated 23 ಜೂನ್ 2013, 4:59 IST

ನಾಪೋಕ್ಲು: ಜೀವ ವೈವಿಧ್ಯತೆಗೆ ಹೆಸರಾದ ಪಶ್ಚಿಮಘಟ್ಟಗಳಿಂದ ಆವೃತ್ತವಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗ ಹಕ್ಕಿಗಳ ಕಲರವ.

ಅದರಲ್ಲೂ ನಾಪೋಕ್ಲು ವ್ಯಾಪ್ತಿಯ ಬಾನಲ್ಲಿ ಎಲ್ಲಿ ನೋಡಿದರಲ್ಲಿ ಈಗ ಬೆಳ್ಳಕ್ಕಿಗಳದ್ದೇ ಕಾರುಬಾರು. ಪಟ್ಟಣ ವ್ಯಾಪ್ತಿಯಲ್ಲಿರುವ ಅಡಿಕೆ ಮರಗಳು ಬೆಳ್ಳಕ್ಕಿಗಳ ಆಶ್ರಯ ತಾಣವಾದರೂ, ಹಕ್ಕಿಗಳು ಗದ್ದೆ ಬಯಲಿನ ಕಾಫಿ ತೋಟಗಳ ವಿವಿಧ ಮರಗಳನ್ನು ಆಶ್ರಯಿಸಿಕೊಂಡಿವೆ.

ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆಯಿಡುವ ಕಾರ್ಯದಲ್ಲಿ ನಿರತರಾಗಿರುವ ಬೆಳ್ಳಕ್ಕಿಗಳು ಮೂರ್ನಾಡು- ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತಿದ್ದು ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬವನ್ನುಂಟು ಮಾಡಿವೆ. ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆಯೇ, ಎಲ್ಲೆಂದರಲ್ಲಿ ಅಡ್ಡಾಡಿಕೊಂಡಿದ್ದ ಬೆಳ್ಳಕ್ಕಿಗಳು ಇದೀಗ ಗುಂಪುಗೂಡಿ ಸೂಕ್ತ ಆಶ್ರಯತಾಣವನ್ನು ಅರಸುತ್ತಿವೆ. ಪ್ರತಿವರ್ಷ ನಾಪೋಕ್ಲು ಪಟ್ಟಣದ ಸಮೀಪದಲ್ಲಿಯ ಕಾವೇರಿ ತೀರದ ಚೆರಿಯಪರಂಬು ನೆಡುತೋಪನ್ನು ಗೂಡು ಕಟ್ಟುವ ಕ್ರಿಯೆಗೆ, ಸಂತಾನಾಭಿವೃದ್ಧಿ ಕಾರ್ಯಕ್ಕೆ ಈ ಬೆಳ್ಳಕ್ಕಿಗಳು ಆಶ್ರಯಿಸಿಕೊಂಡಿದ್ದವು.

ಇವುಗಳೊಂದಿಗೆ ಪಟ್ಟಣ ವ್ಯಾಪ್ತಿಯ ಅಡಿಕೆ ಮರಗಳು ಬೆಳ್ಳಕ್ಕಿಗಳ ವಾಸಸ್ಥಾನವಾಗಿದ್ದವು. ಇದೀಗ ನೆಡುತೋಪಿನ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆರವುಗೊಳಿಸಿರುವುದರಿಂದ ಬೆಳ್ಳಕ್ಕಿಗಳು ಸಂಪೂರ್ಣ ಪಟ್ಟಣ ವ್ಯಾಪ್ತಿಯ ಮರಗಳನ್ನು ಆಶ್ರಯಿಸಿಕೊಂಡಿವೆ.

ಅಡಿಕೆಮರಗಳ ಸೊಗೆಯ ಬುಡದಲ್ಲಿ, ಅಡಿಕೆಗೊಂಚಲುಗಳಲ್ಲಿ ಕಸಕಡ್ಡಿಗಳನ್ನು ತಂದು ಒಪ್ಪವಾಗಿ ಜೋಡಿಸಿ ಗೂಡುಕಟ್ಟಿರುವ ಬೆಳ್ಳಕ್ಕಿಗಳು ಮೊಟ್ಟೆ ಇಟ್ಟು ಮರಿಮಾಡಿ ಗುಟುಕು ನೀಡಿ ಮರಿಗಳನ್ನು ಪೋಷಿಸುತ್ತಿವೆ. ಈ ಅವಧಿಯಲ್ಲಿ ಹೆಚ್ಚು ಆಹಾರ ಸಂಗ್ರಹಣೆ ಅವಶ್ಯಕವಾಗಿರುವುದರಿಂದ ಆಹಾರವನ್ನರಸಿಕೊಂಡು ಗದ್ದೆಯ ಬಯಲುಗಳಲ್ಲಿ ಉದ್ದಕ್ಕೂ ಸಾಗುತ್ತವೆ.

ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿಕರು ಗದ್ದೆ ಕೆಲಸದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ಭಾಗ ಉಳುಮೆಯಾಗಿರುವ ಗದ್ದೆಗಳಲ್ಲಿ ಬಹಳಷ್ಟು ದೂರದವರೆಗೆ ಬೆಳ್ಳಕ್ಕಿಗಳು ಗದ್ದೆಗಳಲ್ಲಿ ಹುಳಹುಪ್ಪಡಿಗಳನ್ನು ಹಿಡಿದು ತಿನ್ನುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇವು ಗುಂಪಾಗಿ ವಾಸಿಸುವವಲ್ಲದೇ ಆಹಾರಕ್ಕೆ ಜಲಚರಗಳನ್ನೇ ನಂಬಿಕೊಂಡಿವೆ. ಇವುಗಳೊಂದಿಗೆ ಕ್ರೌಂಚ ಹಾಗೂ ಜೌಗು ಹಕ್ಕಿಗಳು ಹೊಂದಾಣಿಕೆಯಿಂದ ಸಂಸಾರ ನಡೆಸುತ್ತಿರುವುದು ವೈಶಿಷ್ಟ್ಯ.

ಬೆಳ್ಳಕ್ಕಿಗಳಲ್ಲಿ ಕೊಕ್ಕರೆ ಬೆಳ್ಳಕ್ಕಿ, ಮಧ್ಯಮ ಬೆಳ್ಳಕ್ಕಿ ಹಾಗೂ ದೊಡ್ಡ ಬೆಳ್ಳಕ್ಕಿಗಳೆಂಬ ವಿಧಗಳಿದ್ದು, ಗುಂಪಾಗಿ ವಾಸಿಸುವಾಗ ಒಂದೇ ತೆರನಾಗಿ ಕಾಣಿಸುತ್ತವೆ. ಉದ್ದುದ್ದ ಜುಟ್ಟುಗಳನ್ನು ಹೊಂದಿರುವ ಬೆಳ್ಳಕ್ಕಿಗಳು ಅಪ್ಪಟ ಶ್ವೇತವರ್ಣ ಹಾಗೂ ಬೂದುವರ್ಣ ಹೊಂದಿವೆ. ಪ್ರತಿವರ್ಷದ ಮಳೆಗಾಲದ ಆರಂಭದಲ್ಲಿ ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ದೂರದ ಪ್ರದೇಶದಿಂದ ಈ ಬೆಳ್ಳಕ್ಕಿಗಳು ವಲಸೆ ಬರುತ್ತಿವೆ.

`ಗೂಡು ಕಟ್ಟುವ ಬೆಳ್ಳಕ್ಕಿಗಳು ಸ್ಥಳೀಯ ಹಕ್ಕಿಗಳೇ ಆಗಿವೆ. ಗೂಡು ಕಟ್ಟುವ ಅವಧಿಗೆ ಹೆಚ್ಚಿನ ಆಹಾರ ಬೇಕಾಗುವುದರಿಂದ ಎಲ್ಲವೂ ಒಂದೆಡೆ ಸೇರಿ ಸೂಕ್ತ ಆಶ್ರಯತಾಣವನ್ನು ಅವಲಂಬಿಸುತ್ತವೆ. ಸೆಪ್ಟೆಂಬರ್ ನಂತರದ ಅವಧಿಯಲ್ಲಿ ಅವು ಉಳಿದೆಡೆ ಚದುರಿ ಹೋಗುತ್ತವೆ. ಮತ್ತೆ ಮಳೆಗಾಲದಲ್ಲಿ ಎಲ್ಲಿಂದಲೋ ವಲಸೆ ಬಂದಂತೆ ತೋರುತ್ತವೆ ಹೊರತು ಅವು ವಲಸೆ ಹಕ್ಕಿಗಳಲ್ಲ ” ಎನ್ನುತ್ತಾರೆ ಕೊಡಗಿನ ಪಕ್ಷಿತಜ್ಞ ವಿರಾಜಪೇಟೆಯ ಡಾ. ನರಸಿಂಹನ್.

ಕೊಕ್ಕರೆ ಬೆಳ್ಳಕ್ಕಿಯ ಕೊಕ್ಕು ಕಪ್ಪು ಹಾಗೂ ಮಧ್ಯಮ ಬೆಳ್ಳಕ್ಕಿಯ ಪಾದ ಹಳದಿ ಬಣ್ಣ ಈ ವ್ಯತ್ಯಾಸ ಬಿಟ್ಟರೆ ಬೆಳ್ಳಕ್ಕಿಗಳಲ್ಲಿ ವ್ಯತ್ಯಾಸಗಳಿಲ್ಲ. ಇವುಗಳೊಂದಿಗೆ ಕಪ್ಪುಬಣ್ಣದ ಕಾರ್ಮೋರಂಟ್‌ಗಳು ವಾಸಿಸುತ್ತಿವೆ. ಇದೀಗ ಗೂಡು ಕಟ್ಟುವ ಅವಧಿಯಾದ್ದರಿಂದ ಎಲ್ಲೆಲ್ಲೂ ಬೆಳ್ಳಕ್ಕಿಗಳ ಕಲರವ.  
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.