ADVERTISEMENT

ಹುಲಿ ದಾಳಿಗೆ ಹಸು ಬಲಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 6:30 IST
Last Updated 18 ಅಕ್ಟೋಬರ್ 2012, 6:30 IST

ಗೋಣಿಕೊಪ್ಪಲು: ಕೊಟ್ಟಿಗೆಲ್ಲಿ ಕಟ್ಟಿದ್ದ ಹಸುವನ್ನು ಹುಲಿ ಕೊಂದಿರುವ ಘಟನೆ ಬುಧವಾರ ನಸುಕಿನ ಜಾವ ತಿತಿಮತಿಯಲ್ಲಿ ಜರುಗಿದೆ. 

ತಿತಿಮತಿ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವಿನಾಯಕ ನಗರದಲ್ಲಿರುವ ಸತ್ಯನ್ ಅವರ ಕೊಟ್ಟಿಗೆಯಲ್ಲಿ 5 ರಾಸುಗಳನ್ನು ಕಟ್ಟಿ ಹಾಕಲಾಗಿತ್ತು. ಬುಧವಾರ ನಸುಕು 3.30ರ ವೇಳೆಗೆ ಕೊಟ್ಟಿಗೆಗೆ ನುಗ್ಗಿದ ಹುಲಿ ಹಸುವೊಂದರ ಕುತ್ತಿಗೆಯನ್ನು ಕಚ್ಚಿ ಕೊಟ್ಟಿಗೆಯಿಂದ ಸುಮಾರು 10ಅಡಿ ದೂರ ಎಳೆದೊಯ್ದಿದೆ. ಈ ಸಂದರ್ಭದಲ್ಲಿ ಇತರ ಹಸುಗಳು ಅರಚಿದ ಸದ್ದು ಕೇಳಿದೆ.

ಸದ್ದು ಕೇಳಿದ ಪಕ್ಕದ ಮನೆಯವರು ಕೊಟ್ಟಿಗೆ ಕಡೆಗೆ ಟಾರ್ಚ್ ಬಿಟ್ಟಾಗ ಹುಲಿ ಓಡಿ ಹೋಗಿದೆ ಎನ್ನಲಾಗಿದೆ.  ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗೊಂಡಿದ್ದ ಹಸು ಬೆಳಿಗ್ಗೆ 8ಗಂಟೆಯ ಸುಮಾರಿಗೆ ಅಸು ನೀಗಿತು.

ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿುವ ಕೊಟ್ಟಿಗೆ ಮೇಲೆ ಹುಲಿದಾಳಿ ಮಾಡಿರುವುದು ಸ್ಥಳೀಯ ಜನತೆಯ ಆತಂಕ ಹೆಚ್ಚಿಸಿದೆ. ಈ ಭಾಗದಲ್ಲಿ ಆನೆಗಳ ಕಾಟ ಕೂಡ ಹೆಚ್ಚಾಗಿದೆ. ಇದೀಗ ಸಂಭವಿಸಿರುವ ಹುಲಿ ದಾಳಿ ಜನತೆಗೆ ತೀವ್ರ ಭಯ ಮೂಡಿಸಿದೆ.

ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹುಣಸೂರು ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಮಹಜರು ನಡೆಸಿದರು.

ಎಸಿಎಫ್ ಬೆಳ್ಳಿಯಪ್ಪ ದೂರವಾಣಿಯಲ್ಲಿ ಮಾತನಾಡಿ ಕಾನೂನಿನಂತೆ  ಹಸುವಿನ ಮಾಲಿಕರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.