ADVERTISEMENT

ಹೆಬ್ಬಾಲೆ, ಶಿರಂಗಾಲದಲ್ಲಿ ಮರಳು ದಂಧೆ

ಜನ್ಮಸ್ಥಳದಲ್ಲೇ ಕಾವೇರಿ ಒಡಲು ಬರಿದು

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 10:10 IST
Last Updated 8 ಜೂನ್ 2013, 10:10 IST

ಕುಶಾಲನಗರ: ಜಿಲ್ಲೆಯ ಸಾಕಷ್ಟು ಪ್ರದೇಶಗಳಿಗೆ ಕಾವೇರಿ ವರದಾನವಾಗಿದ್ದಾಳೆ. ಆದರೆ, ಇಲ್ಲಿನ ಶಿರಂಗಾಲ, ಹೆಬ್ಬಾಲೆ ಹಾಗೂ ತೊರೆನೂರುಗಳಲ್ಲಿ ವ್ಯಾಪಕವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದೆ.

ಶಿರಂಗಾಲ ಸಮೀಪದ ಕಾವೇರಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡಲು ಶ್ರೀನಿವಾಸ್ ಎಂಬುವರಿಗೆ ಒಂದು ವರ್ಷಕ್ಕೆ ಮಾತ್ರ ಟೆಂಡರ್ ನೀಡಲಾಗಿತ್ತು. ಆದರೆ, ಟೆಂಡರ್ ಅವಧಿ ಕಳೆದ ಮೇ 31ಕ್ಕೆ ಮುಕ್ತಾಯವಾಗಿದೆ. ಆದರೂ, ಇಲ್ಲಿ ಮರಳು ಗಣಿಗಾರಿಕೆ ನಿಂತಿಲ್ಲ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ಲಕ್ಷಾಂತರ ರೂಪಾಯಿ ಆದಾಯ ಸೋರಿ ಹೋಗುತ್ತಿದೆ.

ಇದು ಅಧಿಕೃತವಾದ ಮಾರಾಟ ಎನ್ನುವಂತೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹತ್ತಾರು ಜನರು ಸಿಕ್ಕಸಿಕ್ಕ ಕಡೆ ಮರಳು ತೆಗೆದು ಕಾವೇರಿ ಒಡಲನ್ನೇ ಬರಿದು ಮಾಡುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಪ್ರತಿ ಸ್ಥಳದಿಂದ ದಿನವೊಂದಕ್ಕೆ ಸುಮಾರು 12ರಿಂದ 15 ಲೋಡ್ ಮರಳು ಅಕ್ರಮವಾಗಿ ಸಾಗಾಟ ವಾಗುತ್ತಿದೆ.

ಕೂಲಿ ಕೆಲಸವೂ ಸಿಗದ ಸ್ಥಳೀಯರು ಮರಳು ತೆಗೆಯುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಒಂದು ದೋಣಿ ಮರಳಿಗೆ 300 ರೂಪಾಯಿ ಪಡೆದು ಮರಳು ತೆಗೆಯುವ ಕೆಲಸದಲ್ಲಿ ನಿರತರಾ ಗಿದ್ದಾರೆ. ಕುಶಾಲನಗರ ಮತ್ತು ಸಮೀಪದ ಸ್ಥಳಗಳಿಗಾದರೆ 10 ರಿಂದ 11 ಸಾವಿರ ರೂಪಾಯಿ ಪಡೆದು ಮರಳು ಮಾರಾಟ ಮಾಡಲಾಗುತ್ತಿದೆ. ಹೊರಜಿಲ್ಲೆ ಅಥವಾ ದೂರದ ಊರುಗಳಿಗಾದರೆ 25ರಿಂದ 30 ಸಾವಿರ ರೂಪಾಯಿಗೆ ಮರಳು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.

ಶಿರಂಗಾಲ, ತೊರೆನೂರು, ಹೆಬ್ಬಾಲೆ ಗ್ರಾಮ ಗಳಲ್ಲಿ ನಡೆಯುತ್ತಿರುವ ಮರಳು ದಂಧೆ ಯಲ್ಲಿ ವಿವಿಧ ಇಲಾಖೆಗಳ ಮೇಲಾಧಿಕಾರಿಗಳು ಶಾಮೀಲಾಗಿರುವ ದೂರುಗಳು ಕೇಳಿಬರುತ್ತಿವೆ. ವಿಪರ್ಯಾಸವೆಂದರೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಜಿಲ್ಲೆಯ ಕೆಲ ರಾಜಕಾರಣಿಗಳು ಭಾಗಿಯಾಗಿರುವ ಸಂಶಯವನ್ನು ಇಲ್ಲಿನ ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.

ಈ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವುದು ಒಂದೆಡೆಯಾದರೆ, ಈಗಾಗಲೇ ನದಿಯಲ್ಲಿ 8 ರಿಂದ 10 ಅಡಿಗಳವರೆಗೆ ಮರಳು ತೆಗೆಯುತ್ತಿರುವುದರಿಂದ ಈ ಪ್ರದೇಶಗಳಲ್ಲಿ ಜಲಚರಗಳು ವಾಸಿಸಲು ಸಾಧ್ಯವಾಗುತ್ತಿಲ್ಲ. ಮರಳು ತೆಗೆಯುವ ಸಂದರ್ಭದಲ್ಲಿ ಸಿಗುವ ಆಮೆ ಇತರೆ ಜಲಚರಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ.

ಅಕ್ರಮ ತಡೆಗೆ ಒತ್ತಾಯ
ಸೋಮವಾರಪೇಟೆ: ಕೊಡ್ಲಿಪೇಟೆ ಸುತ್ತಮುತ್ತ ಅಕ್ರಮವಾಗಿ ಸಂಗ್ರಹ ಮಾಡಿರುವ ಮರಳನ್ನು ಸಂಬಂಧಪಟ್ಟ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಔರಂಗಜೇಬ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಳು ತೆಗೆಯುವುದು ಹಾಗೂ ದಾಸ್ತಾನು ನಿರ್ಬಂಧಿಸಿ ಇತ್ತೀಚೆಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಆದರೂ, ಕೊಡ್ಲಿಪೇಟೆ, ಬೆಸೂರು, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾವಿರಾರು ಲೋಡ್ ಮರಳನ್ನು ಸಂಗ್ರಹಿಸಿ ಇಡಲಾಗಿದೆ ಎಂದು ಆರೋಪಿಸಿದರು.

ಕೋಟ್ಯಂತರ ರೂಪಾಯಿ ಮೌಲ್ಯದ ಸಾವಿರಾರು ಲೋಡ್ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇಲ್ಲಿ ಸಂಗ್ರಹಿಸಿರುವ ಮರಳನ್ನು ರಾತ್ರಿ ಸಮಯದಲ್ಲಿ ಜಿಲ್ಲೆಯ ಗಡಿಭಾಗ ನಿಲುವಾಗಿಲು ಮೂಲಕ ನೆರೆಯ ಹಾಸನಕ್ಕೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮರಳನ್ನು ಸಂಗ್ರಹಿಸಿಟ್ಟಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಮೂರು ದಿನಗಳೊಳಗೆ ಈ ಮರಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಮರಳನ್ನು ತೆಗೆಯುವ ನದಿಪಾತ್ರಕ್ಕೆ ಒಳಪಡುವ ಗ್ರಾಮ ಪಂಚಾಯಿತಿಗಳಿಗೆ ಶೇ 25 ಆದಾಯವನ್ನು ಅನುದಾನವಾಗಿ ನೀಡಬೇಕಾಗಿ ಸರ್ಕಾರದ ಆದೇಶವಿದ್ದರೂ ಇದುವರೆಗೂ ಅನುದಾನ ಬಿಡುಗಡೆ ಆಗಿಲ್ಲ. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ ರೂ 17 ಲಕ್ಷ, ಬ್ಯಾಡಗೊಟ್ಟ ಪಂಚಾಯಿತಿಗೆ ರೂ 4 ಲಕ್ಷ, ಬೆಸೂರು ಪಂಚಾಯಿತಿಗೆ ರೂ 12 ಲಕ್ಷ ಅನುದಾನ ಬಾಕಿ ಇದೆ. ಈ ನಡುವೆ ಮರಳು ಗಣಿಗಾರಿಕೆ ಗುತ್ತಿಗೆದಾರರು ಮಳೆ ವಿಳಂಬದ ನೆಪವೊಡ್ಡಿ ಮುಂದಿನ 1ತಿಂಗಳಿನವರೆಗೆ ಮರಳು ತೆಗೆಯಲು ಪರವಾನಗಿ ನೀಡಬೇಕೆಂದು ಅಧಿಕಾರಿಗಳ ಬೆನ್ನುಬಿದ್ದಿದ್ದಾರೆ. ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಹಾಸನ ಜಿಲ್ಲೆಯಲ್ಲಿರುವಂತೆ ಮರಳು ಸಂಗ್ರಹಣಾ ಯಾರ್ಡ್ ಹಾಗೂ ಜಿ.ಪಿ.ಎಸ್.ಯಂತ್ರ ಅಳವಡಿಸಲು ಕ್ರಮಕೈಗೊಳ್ಳಬೇಕು. ಈ ಪ್ರದೇಶಗಳಿಗೆ ಟಾಸ್ಕ್‌ಫೋರ್ಸ್ ಸಮಿತಿ ಕೂಡಲೇ ಭೇಟಿ ನೀಡಿ ಮರಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಹೇಮಾವತಿ ನೀರಾವರಿ ನಿಗಮದ ವತಿಯಿಂದ ಕೈಗೊಳ್ಳುತ್ತಿರುವ ಕಾಮಗಾರಿಗಳು ಕಳಪೆಯಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ.ಗಣೇಶ್, ಸದಸ್ಯ ಜನಾರ್ದನ್ ಇದ್ದರು.

`ರಾಜಕಾರಣಿಗಳಿಂದ ಒತ್ತಡ'
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್, ಪೊಲೀಸ್ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಟಾಸ್ಕ್‌ಪೋರ್ಸ್ ಸಮಿತಿ ಇದೆ. ಆದರೆ, ಇದು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇನ್ನು ಅಕ್ರಮ ಮರಳು ದಂಧೆಗಳ ಮೇಲೆ ದಾಳಿ ಮಾಡಿ ವಾಹನಗಳನ್ನು ವಶಪಡಿಸಿಕೊಂಡಾಗ ಜಿಲ್ಲೆಯ ರಾಜಕಾರಣಿಗಳ ಒತ್ತಡದಿಂದಾಗಿ ಅವುಗಳನ್ನು ಮತ್ತೆ ಬಿಡುಗಡೆ ಮಾಡಿದಂತಹ ಉದಾಹರಣೆಗಳು ಸಾಕಷ್ಟಿವೆ.
- ಎನ್. ವೆಂಕಟಾಚಲಪ್ಪ, ತಹಶೀಲ್ದಾರ್, ಸೋಮವಾರಪೇಟೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT