ADVERTISEMENT

‘ಶ್ರೀಮಂತರ ಆಡಂಬರದ ವಿವಾಹ ಬಡವರಿಗೆ ಶಾಪ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:54 IST
Last Updated 20 ಡಿಸೆಂಬರ್ 2013, 5:54 IST
ಮೈಸೂರಿನಲ್ಲಿ ಗುರುವಾರ ನಡೆದ ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವದಲ್ಲಿ ಡಾ.ಮೀನಾಕ್ಷಿ ಬಾಳಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧರಣಿದೇವಿ ಮಾಲಗತ್ತಿ, ಡಾ.ಪ್ರೀತಿ ಶುಭಚಂದ್ರ ಅವರನ್ನು ಸನ್ಮಾನಿಸಲಾಯಿತು. ಜಿ.ಕೆ. ರವೀಂದ್ರಕುಮಾರ್‌, ಗೊ.ರು. ಚನ್ನಬಸಪ್ಪ, ಎಂ.ಎ. ನೀಲಾಂಬಿಕಾ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದಾರೆ.
ಮೈಸೂರಿನಲ್ಲಿ ಗುರುವಾರ ನಡೆದ ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವದಲ್ಲಿ ಡಾ.ಮೀನಾಕ್ಷಿ ಬಾಳಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಧರಣಿದೇವಿ ಮಾಲಗತ್ತಿ, ಡಾ.ಪ್ರೀತಿ ಶುಭಚಂದ್ರ ಅವರನ್ನು ಸನ್ಮಾನಿಸಲಾಯಿತು. ಜಿ.ಕೆ. ರವೀಂದ್ರಕುಮಾರ್‌, ಗೊ.ರು. ಚನ್ನಬಸಪ್ಪ, ಎಂ.ಎ. ನೀಲಾಂಬಿಕಾ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದಾರೆ.   

ಮೈಸೂರು: ಶ್ರೀಮಂತರ ಮದುವೆ ಆಡಂಬರಗಳನ್ನೇ ಆದರ್ಶಗಳು ಎಂದುಕೊಂಡು ಅವುಗಳನ್ನು ಅನುಸರಿಸುವ ಮೂಲಕ ಬಡವರು ಸಂಕಷ್ಟಗಳಿಗೆ ಒಳಗಾಗುತ್ತಿದ್ದಾರೆ ಎಂದು ಗುಲ್ಬರ್ಗದ ಎಂಎಸ್‌ಐ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಬೇಸರ ವ್ಯಕ್ತಪಡಿಸಿದರು.

ನಗರದ ಜೆಎಸ್‌ಎಸ್‌ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಗುರುವಾರ ನಡೆದ ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವದಲ್ಲಿ ಅವರು ‘ಕದಳಿಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಸಿರಿವಂತರ ವಿವಾಹ ವೈಭೋಗಗಳು ಬಡವರ ಮನೆಯ ಹೆಣ್ಣುಮಕ್ಕಳಿಗೆ ಶಾಪವಾಗಿ ಪರಿಣಮಿಸಿವೆ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವ ಉದ್ದೇಶದಿಂದ ಬಡವರು ಸಾಲಸೋಲ ಮಾಡಿ ಕಷ್ಟಗಳಿಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು.

ನಾಡಿನಲ್ಲಿ ಶೇ 68ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು, ಇದರಲ್ಲಿ ಮಧ್ಯಮ, ಮೇಲ್ಮಧ್ಯಮವರ್ಗದ ಮಹಿಳೆಯರ ಪ್ರಮಾಣ ಜಾಸ್ತಿ ಇದೆ. ಸ್ತ್ರೀಯರು ಆಚರಿಸುವ ಉಪವಾಸ, ವ್ರತ, ಒಪ್ಪೊತ್ತು ನೇಮ ಇತ್ಯಾದಿ ಸಾಂಪ್ರಾದಾಯಿಕ ಚೌಕಟ್ಟುಗಳು ಈ ಸಮಸ್ಯೆಗೆ ಕಾರಣವಾಗಿವೆ. ಪುರುಷ ಮೂಲದ  ವಿದ್ಯಮಾನಗಳ ಮೂಲಕವೇ ಇಂದಿಗೂ ಮಹಿಳೆ ತನ್ನನ್ನು ಪರಿಚಯಿಸಿಕೊಳ್ಳುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಪುರುಷ ಪ್ರಧಾನ ವ್ಯವಸ್ಥೆಯ ಅಹಂ ಅನ್ನು ಧಿಕ್ಕರಿಸಿ, ಸಾಮಾಜಿಕ ಚೌಕಟ್ಟು ಮೀರಿದ ಬದುಕನ್ನು ಸವೆಸಿದ ಶ್ರೇಷ್ಠ ಮಹಿಳೆ ಅಕ್ಕಮಹಾದೇವಿ. ಲಿಂಗನಿರಪೇಕ್ಷಿತ ನಿಲುವುಗಳನ್ನು ಸಮಾಜದಲ್ಲಿ ಬಿತ್ತಲು ಅಕ್ಕ ಶ್ರಮಿಸಿದಳು. 12ನೇ ಶತಮಾನದ ವಚನ ಪರಂಪರೆಯ ನಿಲುವುಗಳ ಅನುಸಂಧಾನದ ನಿಟ್ಟಿನಲ್ಲಿ ವ್ಯಾಪಕ ಕೆಲಸಗಳು ಆಗಬೇಕಿದೆ. ಜಗತ್ತಿನ ಕಟ್ಟಕಡೆಯ ವ್ಯಕ್ತಿಗೂ ವಚನ ಸಾಹಿತ್ಯವನ್ನು ತಲುಪಿಸುವ ಅಗತ್ಯ ಇದೆ ಎಂದು ಹೇಳಿದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರಕುಮಾರ್‌ ಮಾತನಾಡಿ, ‘ಆಧುನಿಕ ಮಹಿಳೆ’ಗೆ ನೂರು ವರ್ಷ ಸಂದಿದೆ. ಸ್ತ್ರೀ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯದ ನಿಟ್ಟಿನ ಕನಸುಗಳನ್ನು ಸಾಕಾರಗೊಳಿಸಿ ಮಾದರಿ ಶತಮಾನ ರೂಪಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜವು ಇಂದು ತಾಯ್ತನದ ಅಂತಃಕರಣದ ಕೊರತೆ ಅನುಭವಿಸುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.    ಈ ಹೇಳಿಕೆ ಅಕ್ಷರಶಃ ಸತ್ಯವಾಗಿದೆ. ಮನೆತನವನ್ನು ಬಾಳಿಸುವವರು ಮಹಿಳೆಯರು. ಮನೆತನದ ಉದ್ಧಾರದ ಸೂತ್ರವೇ ಮಹಿಳೆಯ ಕಾರ್ಯಸೂಚಿ ಯಾಗಿರುತ್ತದೆ. ವನಿತೆಯರ ಸಾಮರ್ಥ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜೇಂದ್ರ ಶಿಶು ಅವರ  ‘ವಚನ ದೀಪ್ತಿ’, ‘ಮಹಾಜ್ಞಾನಿ ಸೊಡ್ಡಳ ಬಾಚರಸ’, ‘ಶ್ರೀರಾಜೇಂದ್ರ ನಮನ’ ಕೃತಿಗಳನ್ನು ಜಿ.ಕೆ. ರವೀಂದ್ರಕುಮಾರ್‌ ಲೋಕಾರ್ಪಣೆಗೊಳಿಸಿದರು.

ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ ಉಪನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ.ಪ್ರೀತಿ ಶುಭಚಂದ್ರ ಅವರನ್ನು ಸನ್ಮಾನಿಸ ಲಾಯಿತು.

ಸುತ್ತೂರ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.