ADVERTISEMENT

16ರಿಂದ ಕೊಡವರ ಹಾಕಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:30 IST
Last Updated 5 ಮೇ 2012, 5:30 IST

ಗೋಣಿಕೊಪ್ಪಲು: ಕೊಡವ ಕುಟುಂಬ ಹಾಗೂ ಕೊಡವ ಸಮಾಜ, ಕೊಡವ ಸಂಘಗಳ ನಡುವಿನ ರಿಂಕ್ ಹಾಕಿ ಪಂದ್ಯಾವಳಿ ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯ ಹಾಕಿ ಕ್ರೀಡಾಂಗಣದಲ್ಲಿ ಮೇ 16ರಿಂದ ನಡೆಯಲಿದ್ದು, ಹೆಸರು ನೋಂದಾಯಿಸಿಕೊಳ್ಳದ ತಂಡಗಳು ತಕ್ಷಣ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕೂರ್ಗ್ಸ್ ಆರೆಂಜ್ ಕ್ಲಬ್‌ನ ಪ್ರಮುಖ ಕಂಬೇಯಂಡ ಮೋಹನ್ ನಾಣಯ್ಯ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೆಲೆ ನಿಂತಿರುವ ಸುಮಾರು 35 ಸಾವಿರಕ್ಕೂ ಅಧಿಕ ಕೊಡವರನ್ನು ಒಂದೆಡೆ ಸೇರಿಸಲು ಹಾಗೂ ಹಾಕಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೂರ್ಗ್ಸ್ ಆರೆಂಜ್ ಕ್ಲಬ್‌ನ ಸರ್ವ ಸದಸ್ಯರ ಸಹಕಾರದಿಂದ ಈ ಹಾಕಿ ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

 ಟಿ-20 ಕ್ರಿಕೆಟ್‌ನಂತೆ ಈ ಪಂದ್ಯಾವಳಿ ರೋಚಕತೆಯಿಂದ ಕೂಡಿದ್ದು ಕೇವಲ 5 ಮಂದಿ ಆಟಗಾರರನ್ನು ಒಳಗೊಂಡ ವಿಭಿನ್ನ ಹಾಕಿ ಪಂದ್ಯಾವಳಿ ಇದಾಗಿದೆ ಎಂದರು.ಈಗಾಗಲೇ ಜಿಲ್ಲೆಯ 6 ಮಂದಿ ಮಾಜಿ ಒಲಂಪಿಯನ್ನರಾದ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ, ಪಿ.ಈ.ಕಾಳಯ್ಯ, ಎಂ.ಎಂ. ಸುಬ್ಬಯ್ಯ, ಬಿ.ಕೆ.ಸುಬ್ರಹ್ಮಣ್ಯ ಹಾಗೂ ಎ.ಬಿ. ಸುಬ್ಬಯ್ಯ ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಇವರ ಸಲಹೆಯಂತೆ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿ ಮೇ 16ರಿಂದ 20ರವರೆಗೆ ಬೆಂಗಳೂರಿನ ಲಾಂಗ್‌ಫೋರ್ಡ್ ಟೌನ್‌ನ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕೊಡವ ಕುಟುಂಬ ಹಾಗೂ ಕೊಡವ ಸಮಾಜ ಮತ್ತು ಸಂಘಗಳಿಗೆ ಪ್ರತ್ಯೇಕ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರವೇಶ ಶುಲ್ಕವಾಗಿ ತಲಾ 2 ಸಾವಿರ ರೂಪಾಯಿ ನಿಗದಿಗೊಳಿಸಲಾಗಿದೆ.

ಕೊಡವ ಕುಟುಂಬಗಳ ನಡುವಿನ ಚಾಂಪಿಯನ್ನರಿಗೆ ರೂ. 1ಲಕ್ಷ ನಗದು ಹಾಗೂ ಪಾರಿತೋಷಕ, 2ನೇ ಸ್ಥಾನಕ್ಕೆ ರೂ.50 ಸಾವಿರ, 3ನೇ ಸ್ಥಾನಕ್ಕೆ ರೂ. 25 ಸಾವಿರ ಹಾಗೂ 4ನೇ ಸ್ಥಾನಕ್ಕೆ ರೂ. 15 ಸಾವಿರ ನೀಡಲಾಗುತ್ತದೆ. ಕೊಡವ ಸಮಾಜ ಮತ್ತು ಸಂಘಗಳ ನಡುವಿನ ಚಾಂಪಿಯನ್ನರಿಗೆ ರೂ. 50 ಸಾವಿರ ನಗದು ಹಾಗೂ ಟ್ರೋಫಿ, 2ನೇ ಸ್ಥಾನಕ್ಕೆ ರೂ. 25 ಸಾವಿರ, 3ನೇ ಸ್ಥಾನಕ್ಕೆ ರೂ. 15 ಸಾವಿರ, 4ನೇ ಸ್ಥಾನಕ್ಕೆ  ರೂ. 10 ಸಾವಿರ ನಗದು ಹಾಗೂ ಪಾರಿತೋಷಕ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ನಾಕ್‌ಔಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಐದು ಜನರ ತಂಡ ಭಾಗವಹಿಸಲು ಅವಕಾಶವಿದ್ದೆ. ತಂಡದಲ್ಲಿ 9 ಆಟಗಾರರಿಗೆ ಮಾತ್ರ ಅವಕಾಶ ಒದಗಿಸಲಾಗಿದೆ. ಯಾವುದೇ ಅತಿಥಿ ಆಟಗಾರರಿಗೆ ಅವಕಾಶವಿಲ್ಲ. ಮಹಿಳೆಯರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು ಎಂದು ಮೋಹನ್ ನಾಣಯ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 97400 91344, 98458 16250 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.