ADVERTISEMENT

ಗ್ರಾ.ಪಂ.ಗೆ ಹಸ್ತಾಂತರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 7:07 IST
Last Updated 5 ಜನವರಿ 2018, 7:07 IST

ಶನಿವಾರಸಂತೆ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಇರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದು ಅಧ್ಯಕ್ಷ ಮಹಮ್ಮದ್ ಗೌಸ್ ಹಾಗೂ ಆಡಳಿತ ಮಂಡಳಿ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನೆಲ ಬಾಡಿಗೆ ಆಧಾರದ ಮೇಲೆ ಗುತ್ತಿಗೆದಾರ ಎಸ್‌.ಎನ್‌.ರಘು ಅವರು ವ್ಯಕ್ತಿಯೊಬ್ಬರಿಗೆ ನೀಡಿದ್ದರು. 2012ಕ್ಕೆ ಅವಧಿ ಮುಗಿದಿದ್ದರೂ ಗುತ್ತಿಗೆದಾರ ಆ ಕಟ್ಟಡವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿರಲಿಲ್ಲ. ಈ ವಿವಾದ ಕೋರ್ಟ್ ಮೆಟ್ಟಿಲೇರಿ ಗುತ್ತಿಗೆದಾರರ ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಆದರೆ, ಹಿಂದಿದ್ದ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದರಿಂದ ಬೇಸತ್ತ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ‘ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಹಸ್ತಾಂತರಿಸದೆ ಇರುವುದರಿಂದ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮೂಲಕ ಆಗ್ರಹಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ, ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಶೀಘ್ರ ಪಂಚಾಯಿತಿಗೆ ವರ್ಗಾಯಿಸುವ ಭರವಸೆ ನೀಡಿದ್ದಾರೆ ಎಂದು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಆದಿತ್ಯಗೌಡ, ಸರ್ದಾರ್ ಅಹಮ್ಮದ್, ಸೌಭಾಗ್ಯಲಕ್ಷ್ಮಿ, ರಜನಿ, ಉಷಾ, ಹೇಮಾವತಿ ಇದ್ದರು. ಪಂಚಾಯಿತಿಯ ಇನ್ನಿಬ್ಬರು ಸದಸ್ಯರಾದ ಎಚ್.ಆರ್.ಹರೀಶ್ ಕುಮಾರ್ ಹಾಗೂ ಎಸ್.ಎನ್.ಪಾಂಡು ನಿಯೋಗದಲ್ಲಿ ಗೈರುಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.