ADVERTISEMENT

ಮಡಿವಾಳ ಮಾಚಿದೇವರ ವ್ಯಕ್ತಿತ್ವ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:46 IST
Last Updated 2 ಫೆಬ್ರುವರಿ 2018, 8:46 IST

ಮಡಿಕೇರಿ: ‘ಶೋಷಣೆಗೆ ಒಳಗಾದ ವರನ್ನು ಮೇಲೇತ್ತುವ ಕೆಲಸ ಮಾಡಿದರು, ಮಹಾನ್ ಶರಣ ಶ್ರೀಮಡಿವಾಳ ಮಾಚಿ ದೇವರು; ಅವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಹಳೇ ಕೋಟೆ ವಿಧಾನ ಸಭಾಂಗಣದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿ ದೇವರ ಜಯಂತೋತ್ಸವದಲ್ಲಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಮಡಿವಾಳ ಸಮುದಾಯದಲ್ಲಿ ಜನಿಸಿ ಸಮಾಜದ ಕೊಳಕನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಮಹಾನ್ ಚೇತನ, ಇವರ ಜೀವನದ ಚರಿತ್ರೆಯ ಕುರಿತು ಹೆಚ್ಚು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು, ತಂದೆ ತಾಯಿಗಳಿಗೆ ಉತ್ತಮ ಹೆಸರು ತನ್ನಿ ಮೊಬೈಲ್ ಮತ್ತು ಟಿ.ವಿ ಗಳಿಂದ ದೂರವಿರಿ ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಿ; ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ದಾರಿ’ ಎಂದು ಸಲಹೆ ಮಾಡಿದರು.

ADVERTISEMENT

ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ. ಪಿ ರಮೇಶ್ ಮಾತನಾಡಿ, ಅಕ್ಷರ ಜ್ಞಾನವಿಲ್ಲದ ಸಂದರ್ಭದಲ್ಲಿ ಉದಯಿಸಿದ ಮಹಾನ್ ಶರಣ ಹಾಗೆಯೇ ಅನುಭವ ಮಂಟಪ ಕಟ್ಟುವಲ್ಲಿ ಸಹಕಾರ ನೀಡಿದರು ಎಂದು ತಿಳಿಸಿದರು.

‘ಮಾಚಿದೇವರು ಅರಸುತನವು ಶ್ರೇಷ್ಠವಲ್ಲ ಅಗಸತನವು ಕೀಳಲ್ಲ ಎಂಬುದನ್ನು ಅರಿತವರಾಗಿದ್ದರು. 12ನೇ ಶತಮಾನದ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ್ದರು. ಹಾಗೆಯೇ ಇವರು ವೀರಭದ್ರನ ಪ್ರತಿರೂಪ ಎಂದು ಹೇಳುತ್ತಾರೆ’ ಎಂದು ರಮೇಶ್ ವಿವರಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಯುಗ ಪುರಷರು ವೀರರು ಶೂರರು ಹುಟ್ಟಿದ ನಾಡು ನಮ್ಮದು; ನಾವು ಹುಟ್ಟುವಾಗ ಇದೇ ಜಾತಿಯಲ್ಲಿ ಹುಟ್ಟಬೇಕು ಅಂದುಕೊಂಡಿರುವುದಿಲ್ಲ. ಅದೆಲ್ಲ ಆಕಸ್ಮಿಕ. ಇಲ್ಲಿ ಯಾರೂ ಮೇಲೂ ಅಲ್ಲ, ಕೀಳು ಅಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರ ಮಾತನಾಡಿ, ಮಾಚಿದೇವರು ನೀಡಿದ ತತ್ವಗಳು ಪ್ರಸ್ತುತವಾಗಿದ್ದು ನಮ್ಮ ದೇಶದ ಸಂವಿಧಾನದ ಆಶಯಗಳಂತಿವೆ ಎಂದು ತಿಳಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ, ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಓದಬೇಕು ಎಂದು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ಮಡಿವಾಳ ಅಭಿವೃದ್ಧಿ ಸಂಘದ ಅಧ್ಯಕ್ಷ ಸುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.