ನಾಪೋಕ್ಲು: ಭಾಗಮಂಡಲ- ತಲಕಾವೇರಿ ವ್ಯಾಪ್ತಿಯಲ್ಲಿ ಮಂಗಳವಾರ ಬಿರುಸಿನ ಮಳೆಯಾಯಿತು. ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ.
ಕಾವೇರಿ ನದಿ ಹರಿವಿನ ತಾಣಗಳಾದ ಭಾಗಮಂಡಲ, ಪಾಲೂರು, ಕೊಟ್ಟಮುಡಿ, ಬಲಮುರಿ, ಬೇತ್ರಿ ಸೇರಿದಂತೆ ವಿವಿಧೆಡೆ ಕಾವೇರಿ ನದಿ ತುಂಬಿಹರಿಯುತ್ತಿದೆ.
ನದಿ ತೊರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಭಾಗಮಂಡಲ ಜಲಾವೃತವಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ ಉದ್ಯಾನವನ ಸಂಪೂರ್ಣ ಮುಳುಗಡೆಯಾಗಿದೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಎದುರು ಭಾಗ ಜಲಾವೃತವಾಗಿದೆ.
ಭಾಗಮಂಡಲ -ಮಡಿಕೇರಿ ರಸ್ತೆಯಲ್ಲಿ ಒಂದು ಅಡಿ ನೀರು ಹರಿಯುತ್ತಿದ್ದರೆ ಇತ್ತ ನಾಪೋಕ್ಲು - ಭಾಗಮಂಡಲ ರಸ್ತೆಯಲ್ಲಿ ಮೂರು ಅಡಿ ನೀರು ಹರಿಯುತ್ತಿದೆ. ಮೇಲ್ಸೇತುವೆ ನಿರ್ಮಾಣದಿಂದಾಗಿ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
ಸೋಮವಾರ ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಪಿತೃ ಕಾರ್ಯಗಳಿಗಾಗಿ ಕ್ಷೇತ್ರಕ್ಕೆ ಆಗಮಿಸಿದ ಮಂದಿ ರಸ್ತೆ ಬದಿಯಲ್ಲಿ ಕೇಶ ಮುಂಡನ ಮಾಡಿ ಹಿಂತಿರುಗಿದರು.
ಭಾಗಮಂಡಲಕ್ಕೆ ಇದುವರೆಗೆ 8.3 ಸೆಂ.ಮಿ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 2.7 ಸೆಂ.ಮಿ ಮಳೆಯಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ 5.6 ಸೆಂ.ಮಿ ಹೆಚ್ಚು ಮಳೆಯಾಗಿದೆ. ತಲಕಾವೇರಿಯಲ್ಲಿ ಒಂದು ದಿನದಲ್ಲಿ 7.75 ಸೆಂ.ಮಿ ದಾಖಲೆ ಮಳೆ ಸುರಿದಿದೆ. ಬ್ರಹ್ಮಗಿರಿ ಬೆಟ್ಟ ತಪ್ಪಲಿನ ತಲಕಾವೇರಿಯಲ್ಲೂ ಭಾರಿ ಮಳೆ ಬೀಳುತ್ತಿದ್ದು, ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಇಳಿಮುಖಗೊಂಡಿದೆ.
ಸಮೀಪದ ಬಲಮುರಿಯಲ್ಲಿ ಕಾವೇರಿ ಹೊಳೆ ತುಂಬಿ ಹರಿಯುತ್ತಿದ್ದು, ಹಳೆ ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ. ನದಿಯ ಎರಡು ಭಾಗದಲ್ಲೂ ನೀರಿನ ಪ್ರಮಾಣ ಹೆಚ್ಚುತ್ತಿದೆ. ಮಳೆ ಬಿರುಸುಗೊಂಡಲ್ಲಿ ಮೇಲ್ಭಾಗದ ರಸ್ತೆವರೆಗೆ ಹಾಗೂ ನದಿ ತಟದಲ್ಲಿರುವ ಮನೆಗಳವರೆಗೂ ನೀರು ಬರುವ ಸಾಧ್ಯತೆ ಇದ್ದು, ಆತಂಕ ಎದುರಾಗಿದೆ.
ದೋಣಿ ಕಡುವಿನಲ್ಲಿ ಸಂಚಾರಕ್ಕೆ ದೋಣಿ ವ್ಯವಸ್ಥೆ: ಭಾಗಮಂಡಲ ಹೋಬಳಿ ಚೇರಂಬಾಣೆ ಗ್ರಾಮ ಪಂಚಾಯತಿಯ ಬೆಂಗೂರು ಗ್ರಾಮದ ದೋಣಿ ಕಡು ಎಂಬಲ್ಲಿ ಪ್ರವಾಹ ಉಂಟಾಗಿದ್ದು, ಸ್ಥಳೀಯರು ದೋಣಿ ಮುಖಾಂತರ ಸಂಚಾರ ಮಾಡುತ್ತಿದ್ದಾರೆ.
ಎಮ್ಮೆಮಾಡು ಮತ್ತು ಬೇಂಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಮತ್ತು ಬೇಂಗೂರು ನಡುವಿನ ದೋಣಿಕಡುವಿನಲ್ಲಿ ಪ್ರವಾಹ ಬಂದಿದ್ದು, ಪ್ರದೇಶಕ್ಕೆ ಮಡಿಕೇರಿ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ನಿರ್ದೇಶನ ನೀಡಿದರು.
ಭಾಗಮಂಡಲ ಹೋಬಳಿ ಕಂದಾಯ ಪರಿವೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಹಾಜರಿದ್ದರು.
ದನದ ಕೊಟ್ಟಿಗೆ ಕುಸಿದು ಹಾನಿ:
ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿ ಹೊದವಾಡದ ನಿವಾಸಿ ಬಿ.ಬಿ.ದರ್ನಪ್ಪ ಎಂಬುವರ ದನದ ಕೊಟ್ಟಿಗೆ ಮಳೆ ಗಾಳಿಗೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ವಿಷಯ ತಿಳಿದ ಕೂಡಲೇ ಮನೆಯವರು ಜಾನುವಾರು ರಕ್ಷಿಸಿ ಜೀವಪಾಯದಿಂದ ಪಾರು ಮಾಡಿದ್ದಾರೆ. ಸ್ಥಳಕ್ಕೆ ಹೊದ್ದೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆಗಳಿಗೆ ಹಾನಿ, ಹಲವೆಡೆ ವಿದ್ಯುತ್ ಕಡಿತ:
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಳೆಗೆ ಮರಗಳು ಮುರಿದು ಬಿದ್ದ ಪರಿಣಾಮ ಮನೆಗಳಿಗೆ ಹಾನಿ ಸಂಭವಿಸಿದ್ದು ಹೋಬಳಿ ವ್ಯಾಪ್ತಿಯ ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಸಮೀಪದ ಎಮ್ಮೆಮಾಡಿನ ನಬೀಶ ಎಂಬುವರ ವಾಸದ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಮನೆಯ ಚಾವಣಿಗೆ ಅಳವಡಿಸಿದ ಸಿಮೆಂಟ್ ಶೀಟ್ ಮುರಿದಿದ್ದು ಗೋಡೆ ಬಿರುಕು ಬಿಟ್ಟು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಕ್ಕಬೆ -ಕುಂಜಿಲದ ನಿವಾಸಿ ಕೆ.ಎಂ.ಮರಿಯಮ್ಮ ಅವರ ವಾಸದ ಮನೆ ಗೋಡೆ ಕುಸಿದು ಹಾನಿ ಸಂಭವಿಸಿದೆ. ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಕುಂಬಳಗಾಳು ಗ್ರಾಮದ ನಿವಾಸಿ ಕಲ್ಲೆಂಗಡ ಗಿರೀಶ್ ಎಂಬುವರ ತೋಟದ ಲೈನ್ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಮನೆ ಸಮೀಪದ ತೋಟದಲ್ಲಿದ್ದ ಮರ ಗಾಳಿ ಮಳೆಗೆ ಮುರಿದು ಬಿದ್ದು ಚಾವಣಿ ಹಾಗೂ ಮನೆಯೊಳಗಡೆಯಿದ್ದ ಪರಿಕರಗಳು ಹಾನಿಗೀಡಾಗಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಶರ್ಮಿಳಾ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.