ADVERTISEMENT

ಕಾಡಾನೆ ಹಾವಳಿ: ಗ್ರಾಮಸ್ಥರ ಆಕ್ರೋಶ

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ಗೆ ಕಾಫಿ ಬೆಳೆಗಾರರು ಮನವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 19:45 IST
Last Updated 3 ಡಿಸೆಂಬರ್ 2019, 19:45 IST
ಮಡಿಕೇರಿಯ ಅರಣ್ಯ ಭವನದಲ್ಲಿ ಮಂಗಳವಾರ ಸೋಮವಾರಪೇಟೆ ತಾಲ್ಲೂಕಿನ ಐಗೂರು, ಕಾಜೂರು, ಯಡವಾರೆ ಗ್ರಾಮಸ್ಥರು ಆನೆ ಹಾವಳಿ ನಿಯಂತ್ರಣ ಸಂಬಂಧ ಡಿ ಎಫ್‌ ಒ ಪ್ರಭಾಕರನ್‌ಗೆ ಮನವಿ ಸಲ್ಲಿಸಿದರು
ಮಡಿಕೇರಿಯ ಅರಣ್ಯ ಭವನದಲ್ಲಿ ಮಂಗಳವಾರ ಸೋಮವಾರಪೇಟೆ ತಾಲ್ಲೂಕಿನ ಐಗೂರು, ಕಾಜೂರು, ಯಡವಾರೆ ಗ್ರಾಮಸ್ಥರು ಆನೆ ಹಾವಳಿ ನಿಯಂತ್ರಣ ಸಂಬಂಧ ಡಿ ಎಫ್‌ ಒ ಪ್ರಭಾಕರನ್‌ಗೆ ಮನವಿ ಸಲ್ಲಿಸಿದರು   

ಮಡಿಕೇರಿ: ಸೋಮವಾರಪೇಟೆ ವ್ಯಾಪ್ತಿಯ ಐಗೂರು, ಕಾಜೂರು, ಯಡವಾರೆ ಹಾಗೂ ಗರ್ವಾಲೆ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಮಡಿಕೇರಿ ವಲಯದ ಡಿಎಫ್‌ಒ ಪ್ರಭಾಕರನ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಇದೇ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕಾಫಿ ಬೆಳೆಗಾರರಾದ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ ಮಾತನಾಡಿ, ಸೋಮವಾರಪೇಟೆ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳು ಜನವಸತಿ ಪ್ರದೇಶದತ್ತ ನುಗ್ಗುತ್ತಿವೆ. ಅದಲ್ಲದೇ ಬೆಳೆಗಳನ್ನೂ ನಾಶಪಡಿಸುತ್ತಿವೆ. ಕಂದಕ ನಿರ್ಮಾಣ, ಸೋಲಾರ್‌ ಬೇಲಿ ಅಳವಡಿಕೆ ಉಪಾಯಗಳು ಈ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ‘ಶಾಶ್ವತ ಪರಿಹಾರ ಕ್ರಮ ರೂಪಿಸಿ’ ಎಂದು ಆಗ್ರಹಿಸಿದರು.

ADVERTISEMENT

ಕಾಫಿ ಹಾಗೂ ಕಾಳುಮೆಣಸು ದರ ಕುಸಿತ ಕಂಡಿದ್ದು ಬೆಳೆಗಾರರು ನಷ್ಟದಲ್ಲಿದ್ದಾರೆ. ಅದರೊಂದಿಗೆ ಆನೆ ಹಾವಳಿ ಬೆಳೆಗಾರರನ್ನು ಮತ್ತಷ್ಟು ಕಂಗೆಡಿಸಿದ್ದು ಅರಣ್ಯಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಫಿ ಬೆಳೆಗಾರರು, ರೈತರು, ಸಂಬಂಧಿಸಿದ ಗ್ರಾಮಸ್ಥರು ಒಗ್ಗೂಡಿ ತೀವ್ರತರವಾದ ಪ್ರತಿಭಟನೆ ನಡೆಸುತ್ತೇವೆ ಎಂದೂ ಎಚ್ಚರಿಕೆ ನೀಡಿದರು.

ಕಾಫಿ ಬೆಳೆಗಾರರ ಮನೋಜ್ ಕುಮಾರ್ ಮಾತನಾಡಿ, ಆನೆಗಳಿಗೆ ಅಗತ್ಯವಿದ್ದ ಆಹಾರವೂ ಅರಣ್ಯದಲ್ಲಿ ಲಭಿಸುತ್ತಿಲ್ಲ. ಇದರಿಂದ ಕಾಡಾನೆಗಳು ನಾಡಿನತ್ತ ವಲಸೆ ಬರುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಐಗೂರು, ಕಾಜೂರು ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ ಎಂದು ಹೇಳಿದರು.

ರೈಲ್ವೆ ಬ್ಯಾರಿಕೇಡ್‌ ಅನ್ನು ಅರಣ್ಯಾಧಿಕಾರಿಗಳು ಅಳವಡಿಸಬೇಕು. ಬ್ಯಾರಿಕೇಡ್‌ ಹಾಕಿದರೆ ಮಾತ್ರ ಬೆಳೆಗಾರರು ಬೆಳೆದ ಬೆಳೆಗಳು ಕೈ ಸೇರಲು ಸಾಧ್ಯ. ಆನೆಗಳು ಗ್ರಾಮಗಳಿಗೆ ನುಗ್ಗಿ ಬೋರ್‌ವೆಲ್, ಪೈಪ್‌ಗಳನ್ನು ನಾಶಪಡಿಸುತ್ತಿವೆ. ಇನ್ನಾದರೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಳೆಗಾರರ ಮನವಿಗೆ ಸ್ಪಂದಿಸಿದ ಡಿಎಫ್‌ಒ ಪ್ರಭಾಕರನ್, ಈಗಾಗಲೇ ಆನೆ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು ಸೋಮವಾರಪೇಟೆ ವ್ಯಾಪ್ತಿಯಲ್ಲೂ ಕೂಡ ರೈಲ್ವೆ ಬ್ಯಾರಿಕೇಡ್, ಇಪಿಟಿ, ಸೋಲಾರ್ ಫೆನ್ಸ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.

ಐಗೂರು, ಕಾಜೂರು, ಯಡವಾರೆ, ಗರ್ವಾಲೆಯ ಬೆಳೆಗಾರರಾದ ಸದಾಶಿವ, ಅಶೋಕ್, ಭರತ್, ಲಿಂಗೇರಿ ರಾಜೇಶ್, ಪ್ರಮೋದ್, ರಾಮಚಂದ್ರ, ಯೋಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.