ADVERTISEMENT

ದುಬಾರೆ ಶಿಬಿರದಿಂದ ಗಜಪಯಣಕ್ಕೆ ಚಾಲನೆ

ಆನೆಗಳಿಗೆ ಬೀಳ್ಕೊಡುಗೆ ನೀಡಿದ ಅಧಿಕಾರಿಗಳು, ಎರಡು ಹಂತಗಳಲ್ಲಿ ಆನೆಗಳ ರವಾನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 9:17 IST
Last Updated 22 ಆಗಸ್ಟ್ 2019, 9:17 IST
ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಬುಧವಾರ 6 ಆನೆಗಳಿಗೆ ಬೀಳ್ಕೊಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು
ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಬುಧವಾರ 6 ಆನೆಗಳಿಗೆ ಬೀಳ್ಕೊಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಾಯಿತು   

ಕುಶಾಲನಗರ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ದುಬಾರೆ ಸಾಕಾನೆ ಶಿಬಿರದ 6 ಸಾಕಾನೆಗಳಿಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ವತಿಯಿಂದ ಬುಧವಾರ ಬೀಳ್ಕೊಡುವ ಮೂಲಕ ಗಜ ಪಯಣಕ್ಕೆ ಚಾಲನೆ ನೀಡಲಾಯಿತು.

ವಿಜಯ ಮತ್ತು ಈಶ್ವರ, ಧನಂಜಯ, ಹರ್ಷ, ಗೋಪಿ ಹಾಗೂ ವಿಕ್ರಂ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿವೆ. ಆನೆಕಾಡು ಸಾಕಾನೆ ಶಿಬಿರದಲ್ಲಿ ಏರ್ಪಡಿಸಿದ್ದ ಕಾರ್ಯ ಕ್ರಮದಲ್ಲಿ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಮಾವುತರು ಪಾಲ್ಗೊಂಡಿದ್ದರು.

ವಿವಿಧ ಹೂವುಗಳಿಂದ ಸಿಂಗರಿಸಿದ ಆನೆಗಳಿಗೆ, ಅರ್ಚಕ ಬೋಜಪ್ಪ ವಿಶೇಷ ಪೂಜೆ ನೆರವೇರಿಸಿದರು. ದಸರಾ ಹಬ್ಬದ ಸಂದರ್ಭ ಯಾವುದೇ ಅನಾಹುತ ನಡೆಯದಂತೆ, ಆನೆಗಳು ಹಾಗೂ ಮಾವುತರಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಮಡಿಕೇರಿ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಭಾಸ್ಕರನ್ ಅವರು ಆನೆಗಳಿಗೆ ಕಬ್ಬು, ಬೆಲ್ಲ, ಹಣ್ಣುಗಳನ್ನು ತಿನ್ನಿಸಿ ಗಜ ಪಯಣಕ್ಕೆ ಚಾಲನೆ ನೀಡಿದರು.

ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಮಾತನಾಡಿ, ‘ಮೊದಲ ಹಂತದಲ್ಲಿ ಮೂರು ಆನೆಗಳನ್ನು ಹುಣಸೂರು ತಾಲ್ಲೂಕಿನ ನಾಗಪುರ ಹತ್ತಿರದ ವೀರನಹೊಸಳ್ಳಿ ಆನೆ ಶಿಬಿರಕ್ಕೆ ಕಳುಹಿಸಿ ಕೊಡಲಾಗುತ್ತಿದೆ. ವಿಜಯ, ಈಶ್ವರ, ಧನಂಜಯ ಆನೆಗಳು ಮತ್ತು ಅದರ ಮಾವುತರು ಹಾಗೂ ಕಾವಾಡಿಗರು, ಅವರ ಕುಟುಂಬದ ಸದಸ್ಯರು ಕೂಡ ಮೈಸೂರಿಗೆ ತೆರಳುತ್ತಿದ್ದಾರೆ. 2ನೇ ಹಂತದಲ್ಲಿ ಹರ್ಷ, ವಿಕ್ರಂ, ಗೋಪಿ ಆನೆಗಳನ್ನು ಕಳುಹಿಸಿಕೊಡಲಾಗುವುದು’ ಎಂದರು.

ಮಾವುತರಾದ ಬೋಜಪ್ಪ, ದೊರೆಯಪ್ಪ, ಧನಂಜಯ ಡೋಬಿ, ಭಾಸ್ಕರ್, ಅಣ್ಣಯ್ಯ, ಬೋಜಪ್ಪ, ವಿಶ್ವನಾಥ್ ಹಾಗೂ ಅವರ ಕುಟುಂಬ ವರ್ಗ ಕೂಡ ಆನೆಗಳ ಜೊತೆ ಪ್ರಯಾಣ ಬೆಳೆಸಿತು. ಮಧ್ಯಾಹ್ನ ಎಲ್ಲ ಆನೆಗಳನ್ನು ಲಾರಿಗೆ ಹತ್ತಿಸಿ ಕಳುಹಿಸಿ ಕೊಡಲಾಯಿತು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ರಂಜನ್, ಅನಿಲ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.